SC concerned increase number institutions seeking minority status evade RTE exemption
x

ಸುಪ್ರೀಂ ಕೋರ್ಟ್‌

ಆರ್‌ಟಿಇ ವಿನಾಯ್ತಿಯಿಂದ ಗೈರಾಗಲು ಅಲ್ಪಸಂಖ್ಯಾತ ಸ್ಥಾನಮಾನ ಬಯಸುವ ಸಂಸ್ಥೆಗಳ ಸಂಖ್ಯೆ ಹೆಚ್ಚಳ: ಸುಪ್ರೀಂ ಆತಂಕ

ಅಲ್ಪಸಂಖ್ಯಾತ ಶಾಲೆಗಳು ಸೇರಿದಂತೆ ಆರ್‌ಟಿಇ ಕಾಯ್ದೆಯಡಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯವೇ ಎಂಬ ಪ್ರಶ್ನೆಯನ್ನು ನ್ಯಾಯಾಲಯವು ಪರಿಗಣಿಸಿತ್ತು. ಸಾಂವಿಧಾನಿಕ ಪೀಠದ ತೀರ್ಪಿನ ಬಗ್ಗೆ ಇರುವ ಸಂದೇಹಗಳನ್ನು ಪರಿಗಣಿಸಿ, ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.


ಅಲ್ಪಸಂಖ್ಯಾತ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯಿಂದ ( ಆರ್‌ಟಿಇ) ವಿನಾಯಿತಿ ನೀಡಿರುವುದರಿಂದ ಅಲ್ಪಸಂಖ್ಯಾತ ಸ್ಥಾನಮಾನ ಬಯಸುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ ಆತಂಕ ವ್ಯಕ್ತಪಡಿಸಿದೆ.

ಪ್ರಮತಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಮತ್ತು ಭಾರತ ಒಕ್ಕೂಟದ ಪ್ರಕರಣದಲ್ಲಿ ಅಲ್ಪಸಂಖ್ಯಾತ ಶಾಲೆಗಳಿಗೆ ಆರ್‌ಟಿಇ ಕಾಯ್ದೆ ಅನ್ವಯಿಸುವುದಿಲ್ಲ ಎಂಬ ಸಾಂವಿಧಾನಿಕ ಪೀಠದ ತೀರ್ಪು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

“ಆರ್‌ಟಿಇ ಕಾಯ್ದೆಯಿಂದ ಸಂಪೂರ್ಣ ವಿನಾಯಿತಿ ನೀಡಿರುವುದರಿಂದ ಸಂವಿಧಾನದ 30(1)ನೇ ವಿಧಿಯ ಅಗತ್ಯ ಮತ್ತು ಮಕ್ಕಳ ಕೇಂದ್ರಿತವಾದ ನಿಯಂತ್ರಣಾತ್ಮಕ ಮಾನದಂಡಗಳಿಂದ ತಪ್ಪಿಸಿಕೊಳ್ಳುವ ಸಾಧನವಾಗಿದೆ. ವಿನಾಯಿ ಬಯಸುವ ಶಿಕ್ಷಣ ಸಂಸ್ಥೆಗಳ ಹೆಚ್ಚಳದಿಂದ ಪ್ರಾಥಮಿಕ ಶಿಕ್ಷಣದ ಅಡಿಪಾಯವು ಅರಿವಿಲ್ಲದೆಯೇ ಅಪಾಯಕ್ಕೆ ಸಿಲುಕಬಹುದು, ಸಮಾಜದ ಒಡಕುಗಳನ್ನು ಹೆಚ್ಚಿಸಲು ಕಾರಣವಾಗಬಹುದು" ಎಂದು ನ್ಯಾಯಪೀಠ ವಿವರಿಸಿದೆ.

ಅಲ್ಪಸಂಖ್ಯಾತ ಶಾಲೆಗಳು ಸೇರಿದಂತೆ ಆರ್‌ಟಿಇ ಕಾಯ್ದೆಯಡಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯವೇ ಎಂಬ ಪ್ರಶ್ನೆಯನ್ನು ನ್ಯಾಯಾಲಯವು ಪರಿಗಣಿಸಿತು. ಅಲ್ಲದೇ ಈ ಹಿಂದೆ ಸಾಂವಿಧಾನಿಕ ಪೀಠ ನೀಡಿದ ತೀರ್ಪಿನ ಬಗ್ಗೆ ಹಲವು ಸಂದೇಹಗಳನ್ನು ವ್ಯಕ್ತಪಡಿಸಿ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತು.

ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಸೇರಿರದ ಶಾಲೆಗಳಲ್ಲಿ ಶಿಕ್ಷಕರು ಸೇವೆಯಲ್ಲಿ ಮುಂದುವರಿಯಲು ಟಿಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯ ಎಂದು ಈ ಹಿಂದೆ ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು.

ಅಲ್ಪಸಂಖ್ಯಾತರಿಗೆ ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 30(1) ನೇ ವಿಧಿಯ ಉದ್ದೇಶವು ಶಿಕ್ಷಣದ ಮೂಲಕ ಅಲ್ಪಸಂಖ್ಯಾತ ಸಮುದಾಯಗಳ ಭಾಷಾ ಮತ್ತು ಸಾಂಸ್ಕೃತಿಕ ಅಸ್ಮಿತೆ ಕಾಪಾಡುವುದೇ ವಿನಃ ಸಾರ್ವತ್ರಿಕವಾಗಿ ಅನ್ವಯವಾಗುವ ಮಾನದಂಡಗಳಿಂದ ಪ್ರತ್ಯೇಕಿಸಲ್ಪಟ್ಟ ಸಮಾನಾಂತರ ವ್ಯವಸ್ಥೆ ರಚಿಸುವುದು ಅಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಲ್ಪಸಂಖ್ಯಾತ ಸಂಸ್ಥೆಗಳ ಸ್ವಾಯತ್ತತೆ ರಕ್ಷಿಸಬೇಕಾದರೂ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳುವ ಮತ್ತು ಸಾಂವಿಧಾನಿಕ ಗುರಿ ಸಾಧಿಸುವ ಹಿತದೃಷ್ಟಿಯಿಂದ ಆ ಸ್ವಾಯತ್ತತೆ ಸಮಂಜಸವಾದ ನಿಯಂತ್ರಣದ ವ್ಯಾಪ್ತಿಯನ್ನು ಮೀರುವಂತಿರಬಾರದು. ದುರ್ಬಲ ವರ್ಗಗಳು ಮತ್ತು ಸವಲತ್ತು ವಂಚಿತ ಗುಂಪುಗಳ ಮಕ್ಕಳಿಗೆ ಪ್ರವೇಶಾತಿಯಲ್ಲಿ ಶೇ 25 ರಷ್ಟು ಸ್ಥಾನ ಕಾಯ್ದಿರಿಸುವ ಬಗ್ಗೆ ಆರ್‌ಟಿಇ ಕಾಯ್ದೆಯ ಸೆಕ್ಷನ್‌ಗಳನ್ನು ಸುಪ್ರೀಂಕೋರ್ಟ್‌ ಸಾಂವಿಧಾನಿಕ ಪೀಠ ಅವಲಂಬಿಸಿತ್ತು ಎಂದು ನ್ಯಾಯಾಲಯ ತಿಳಿಸಿದೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕನಿಷ್ಠ ದಾಖಲಾತಿ ಕುರಿತು ಸ್ಪಷ್ಟ ಮಾರ್ಗಸೂಚಿ ಇಲ್ಲದೆ ಇರುವುದರಿಂದ ಸಂಸ್ಥೆಗಳು ಅಲ್ಪಸಂಖ್ಯಾತ ಸ್ಥಾನಮಾನದ ಆಶಯ ಪೂರೈಸದೇ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವುದು ಸುಲಭವಾಗಿದೆ. ಸವಲತ್ತು ವಂಚಿತ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಯಾವುದೇ ಬಾಧ್ಯತೆ ಇಲ್ಲದೆ, ಈ ಸಂಸ್ಥೆಗಳಲ್ಲಿ ಬಹುತೇಕವು ಸಮಾನತೆ ಮತ್ತು ಒಳಗೊಳ್ಳುವಿಕೆಯ ವಿಶಾಲ ಸಾಂವಿಧಾನಿಕ ಗುರಿಗಳಿಂದ ದೂರ ಉಳಿದಿವೆ. ಆರ್‌ಟಿಇ ಕಾಯ್ದೆಯು ಮಕ್ಕಳಿಗೆ ಹಲವಾರು ಹಕ್ಕುಗಳನ್ನು ಒದಗಿಸುತ್ತದೆಯಾದರೂ ಅಲ್ಪಸಂಖ್ಯಾತ ಶಾಲೆಗಳು ಈ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿಲ್ಲ ಎಂದು ಪೀಠ ತಿಳಿಸಿತು.

ಆರ್‌ಟಿಇ ಕಾಯ್ದೆ ಜಾರಿಗೆ ಬರುವ ಮೊದಲು ನೇಮಕಗೊಂಡ ಮತ್ತು ನಿವೃತ್ತಿಗೆ 5 ವರ್ಷಗಳಿಗಿಂತ ಕಡಿಮೆ ಸೇವೆ ಉಳಿದಿರುವ ಶಿಕ್ಷಕರು ಟಿಇಟಿ ಅರ್ಹತೆ ಪಡೆಯದೆ ಮುಂದುವರಿಯಬಹುದು ಎಂದು ಪೀಠ ನಿರ್ದೇಶಿಸಿದೆ. ಆದರೆ, 5 ವರ್ಷಗಳಿಗಿಂತ ಹೆಚ್ಚು ಸೇವೆ ಉಳಿದಿರುವವರು 2 ವರ್ಷಗಳ ಒಳಗೆ ಟಿಇಟಿ ಅರ್ಹತೆ ಪಡೆಯಬೇಕು ಎಂದು ತಿಳಿಸಿದೆ.

ವಿಸ್ತೃತ ಪೀಠ ವಿಚಾರಣೆ ನಡೆಸಬೇಕಾದ ವಿವಿಧ ಪ್ರಶ್ನೆಗಳನ್ನು ದ್ವಿಸದಸ್ಯ ಪೀಠ ರೂಪಿಸಿ ಸ್ಪಷ್ಟನೆ ಕೇಳಿದೆ. ಅವುಗಳೆಂದರೆ

1. ಸುಪ್ರೀಂ ಕೋರ್ಟ್‌ 2014ರ ಪ್ರಮತಿ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಅಲ್ಪಸಂಖ್ಯಾತ ಶಾಲೆಗಳಿಗೆ ಆರ್‌ಟಿಇ ಕಾಯ್ದೆಯಿಂದ ಸಂಪೂರ್ಣ ವಿನಾಯಿತಿ ನೀಡಿರುವ ನಿರ್ಧಾರ ಮರುಪರಿಶೀಲನೆ ಮಾಡಬೇಕೇ?

2. ಆರ್‌ಟಿಇ ಕಾಯ್ದೆಯ ಸೆಕ್ಷನ್ 12(1)(ಸಿ) (ಶೇ.25 ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಪ್ರವೇಶ) ಅಲ್ಪಸಂಖ್ಯಾತರ ವಿಧಿ 30(1) ಹಕ್ಕುಗಳನ್ನು ಉಲ್ಲಂಘಿಸುತ್ತದೆಯೇ? ಹೌದಾದರೆ, ಅದನ್ನು ಕೇವಲ ಅದೇ ಸಮುದಾಯದ ಹಿಂದುಳಿದ ಮಕ್ಕಳಿಗೆ ಸೀಮಿತಗೊಳಿಸಬಹುದೇ?

3. ಸುಪ್ರೀಂಕೋರ್ಟ್‌ 2014ರಲ್ಲಿ ನೀಡಿದ ತೀರ್ಪಿನಲ್ಲಿ ಸಂವಿಧಾನದ 29(2) ವಿಧಿ (ಧರ್ಮ, ಭಾಷೆ ಆಧಾರದ ಮೇಲೆ ಪ್ರವೇಶ ನಿರಾಕರಣೆ ನಿಷೇಧ) ಪರಿಗಣಿತವಾಗಿಲ್ಲ. ಇದರ ಪರಿಣಾಮವೇನು?

4. ಆರ್‌ಟಿಇ ಕಾಯ್ದೆಯ ಎಲ್ಲಾ ಅಂಶಗಳನ್ನು ಪ್ರತ್ಯೇಕವಾಗಿ ಪರಿಶೀಲಿಸದೆಯೇ, ಸಂಪೂರ್ಣವಾಗಿ ಅಲ್ಪಸಂಖ್ಯಾತ ಶಾಲೆಗಳಿಗೆ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಘೋಷಿಸುವುದು ಸರಿಯೇ? ಎಂಬ ಪ್ರಶ್ನೆಗಳಿಗೆ ದ್ವಿಸದಸ್ಯ ಪೀಠ ಸ್ಪಷ್ಟನೆ ಕೇಳಿದೆ.

Read More
Next Story