ಸಂದೇಶಖಾಲಿ: ಷಹಜಹಾನ್ ಶೇಖ್ ವಿರುದ್ಧ ಕೊಲೆ ಯತ್ನ ಆರೋಪ
x

ಸಂದೇಶಖಾಲಿ: ಷಹಜಹಾನ್ ಶೇಖ್ ವಿರುದ್ಧ ಕೊಲೆ ಯತ್ನ ಆರೋಪ


ಹೊಸದಿಲ್ಲಿ, ಮೇ 28- ಜನವರಿ 5 ರಂದು ಸಂದೇಶಖಾಲಿಯಲ್ಲಿ ಜಾರಿ ನಿರ್ದೇಶನಾಲಯ ತಂಡದ ಮೇಲೆ ಗುಂಪು ದಾಳಿಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಟಿಎಂಸಿ ನಾಯಕ ಶಹಜಹಾನ್ ಶೇಖ್, ಅವರ ಸಹೋದರ ಮತ್ತು ಇತರ ಐವರ ವಿರುದ್ಧ ಸಿಬಿಐ ಕ್ರಿಮಿನಲ್ ಸಂಚು ಮತ್ತು ಕೊಲೆ ಯತ್ನದ ಆರೋಪ ಹೊರಿಸಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಈ ಪ್ರಕರಣದ ಮೊದಲ ದೋಷಾರೋಪ ಪಟ್ಟಿಯನ್ನು ಬಸಿರ್ಹತ್ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ನಡೆದ ಬಹು ಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಶೇಖ್ ಅವರ ಮನೆ ಮೇಲೆ ದಾಳಿಗೆ ಹೋದ ಇಡಿ ತಂಡದ ಮೇಲೆ 1,000 ಜನರ ಗುಂಪು ದಾಳಿ ನಡೆಸಿತು. ಈ ಹಗರಣದಲ್ಲಿ ಬಂಧಿಸಲ್ಪಟ್ಟ ಮಾಜಿ ಆಹಾರ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಅವರೊಂದಿಗೆ ಶೇಖ್‌ ನಿಕಟ ಸಂಪರ್ಕ ಹೊಂದಿದ್ದರು ಎಂದು ಹೇಳಿದರು.

ಶೇಖ್, ಅವರ ಸಹೋದರ ಅಲೋಮ್‌ ಗಿರ್‌, ಸಹಚರರಾದ ಜಿಯಾವುದ್ದೀನ್ ಮೊಲ್ಲಾ, ಮಫುಜರ್ ಮೊಲ್ಲಾ ಮತ್ತು ದಿದರ್‌ ಬಕ್ಷ್ ಮೊಲ್ಲಾ ಸೇರಿದಂತೆ ಏಳು ಜನರ ವಿರುದ್ಧ ಚಾರ್ಜ್ ಶೀಟ್ ಹಾಕಲಾಗಿದೆ. ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 307 (ಕೊಲೆಗೆ ಯತ್ನ) ಲೂಟಿ ಯತ್ನ ಮತ್ತಿತರ ವಿಭಾಗಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

ಕೋಲ್ಕತ್ತಾದಿಂದ 80 ಕಿಮೀ ದೂರದಲ್ಲಿರುವ ಸಂದೇಶ್‌ಖಾಲಿಯಲ್ಲಿ ಮೀನು ಸಾಕಣೆ ಮತ್ತು ವ್ಯಾಪಾರದಲ್ಲಿ ತೊಡಗಿರುವ ಶೇಖ್ ಮತ್ತು ಅವನ ಸಹಚರರು ಭೂಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಪ್ರತಿಭಟನೆ ನಡೆಸಿದ್ದರು.

ಜನವರಿ 5 ರಂದು ನಡೆದ ಘಟನೆಗೆ ಸಂಬಂಧಿಸಿದ ಮೂರು ಪ್ರಕರಣಗಳ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಶೇಖ್ ಅವರನ್ನು ಫೆಬ್ರವರಿ 29 ರಂದು ರಾಜ್ಯ ಪೊಲೀಸರು ಬಂಧಿಸಿದ್ದರು ಮತ್ತು ಮಾರ್ಚ್ 6 ರಂದು ಸಿಬಿಐ ಅವರನ್ನು ತನ್ನ ವಶಕ್ಕೆ ತೆಗೆದುಕೊಂಡಿತು.

Read More
Next Story