ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ಬಂದಿದೆ: ಸುಪ್ರೀಂ ಕೋರ್ಟ್
ಹೊಸದಾಗಿ ನೀಟ್-ಯುಜಿ ಪರೀಕ್ಷೆ: ಎನ್‌ಟಿಎ ಪ್ರತಿಕ್ರಿಯೆ ಕೋರಿದ ಸುಪ್ರೀಂ
ಜೂನ್ 11- ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಅವ್ಯವಹಾರಗಳ ಆಧಾರದಲ್ಲಿ ಹೊಸದಾಗಿ ನೀಟ್-ಯುಜಿ ಪರೀಕ್ಷೆ ನಡೆಸಬಹುದೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ , ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಿಂದ ಪ್ರತಿಕ್ರಿಯೆ ಕೋರಿ ನೋಟಿಸ್ ನೀಡಿದೆ.
ಈ ಸಂಬಂಧ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ರಜಾಕಾಲದ ಪೀಠ ಆದೇಶಿಸಿತು. ಆದರೆ, ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿತು.
ನೀಟ್-ಯುಜಿ ಪರೀಕ್ಷೆಯನ್ನು ಮೇ 5 ರಂದು ನಡೆಸಿ, ಜೂನ್ 4ರಂದು ಫಲಿತಾಂಶ ಪ್ರಕಟಿಸಲಾಯಿತು. ಫಲಿತಾಂಶ ಜೂನ್ 14 ರಂದು ಪ್ರಕಟವಾಗಬೇಕಿತ್ತು. ವೈದ್ಯ, ದಂತ ವೈದ್ಯ, ಆಯುಷ್ ಮತ್ತು ಇತರ ಸಂಬಂಧಿತ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ನಡೆಸುತ್ತದೆ. ಸುಪ್ರೀಂ ಕೋರ್ಟ್ ಶಿವಾಂಗಿ ಮಿಶ್ರಾ ಮತ್ತು ಇತರರು ಸಲ್ಲಿಸಿದ ಅರ್ಜಿಯನ್ನು ಉಳಿದ ಅರ್ಜಿಯೊಂದಿಗೆ ಜೋಡಿಸಿ, ಪ್ರತಿಕ್ರಿಯೆ ಸಲ್ಲಿಸಲು ಎನ್‌ಟಿಎಗೆ ಸೂಚಿಸಿತು.
ನಮಗೆ ಉತ್ತರ ಬೇಕು: ಸುಪ್ರೀಂ ಕೋರ್ಟ್
ʻಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗಿದೆ. ಆದ್ದರಿಂದ ನಮಗೆ ಉತ್ತರ ಬೇಕಿದೆ. ನಿಮಗೆ ಎಷ್ಟು ಸಮಯ ಬೇಕು? ಇಲ್ಲವಾದಲ್ಲಿ, ಕೌನ್ಸೆಲಿಂಗ್ ಪ್ರಾರಂಭವಾಗುತ್ತದೆ,ʼ ಎಂದು ನ್ಯಾಯಮೂರ್ತಿ ಅಮಾನುಲ್ಲಾ ಎನ್‌ಟಿಎ ವಕೀಲರಿಗೆ ಪ್ರಶ್ನಿಸಿದರು.
ಅರ್ಜಿದಾರರ ಪರ ವಕೀಲರು ಕೌನ್ಸೆಲಿಂಗ್ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿದ್ದು, ಸುಪ್ರೀಂ ಕೋರ್ಟ್ ಅದನ್ನು ನಿರಾಕರಿಸಿತು.
ಮೇ 17 ರಂದು ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠ ಈ ಸಂಬಂಧ ಜಾರಿಗೊಳಿಸಿದ ನೋಟಿಸ್ ನ್ನು ಹಿಂದಿನ ಮನವಿಯೊಂದಿಗೆ ಜೋಡಿ ಸಲು ಅನುಮತಿ ನೀಡುವಂತೆ ಎನ್‌ಟಿಎ ವಕೀಲರು ಕೋರಿದರು. ಹಿಂದಿನ ಅರ್ಜಿಯ ವಿಚಾರಣೆಯನ್ನು ಜುಲೈ 8ಕ್ಕೆ ಪಟ್ಟಿ ಮಾಡಲಾಗಿದೆ.
ನೀಟ್-ಯುಜಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅವ್ಯವಹಾರದಿಂದ ಕೂಡಿದೆ. ಇದರಿಂದ ವಿಧಿ 14 (ಸಮಾನತೆಯ ಹಕ್ಕು) ಉಲ್ಲಂಘನೆಯಾಗಿದೆ ಎಂದು ದೂರಲಾಗಿದೆ.