
ಸಮೋಸಾ, ಜಿಲೇಬಿಗೆ ಸಿಗರೇಟ್ ಮಾದರಿ ಆರೋಗ್ಯ ಎಚ್ಚರಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಸಮೋಸಾ, ಜಿಲೇಬಿಗೆ ಸಿಗರೇಟ್ ಮಾದರಿ ಆರೋಗ್ಯ ಎಚ್ಚರಿಕೆ
ಸಮೋಸಾ, ಜಿಲೇಬಿ, ಪಕೋಡ, ವಡಾ ಪಾವ್ ಮತ್ತು ಚಾಯ್ ಬಿಸ್ಕತ್‌ನಂತಹ ಜನಪ್ರಿಯ ತಿಂಡಿಗಳ ಮೇಲೆ ಸಿಗರೇಟ್ ಪ್ಯಾಕ್‌ಗಳ ಮೇಲಿರುವಂತಹ ಆರೋಗ್ಯ ಎಚ್ಚರಿಕೆಗಳನ್ನು ಮುದ್ರಿಸಲು ನಿರ್ಧರಿಸಿದೆ.
ಅನಾರೋಗ್ಯಕರ ಆಹಾರ ಸೇವನೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇನ್ನು ಮುಂದೆ ಸಮೋಸಾ, ಜಿಲೇಬಿ, ಪಕೋಡ, ವಡಾ ಪಾವ್ ಮತ್ತು ಚಾಯ್ ಬಿಸ್ಕತ್‌ನಂತಹ ಜನಪ್ರಿಯ ತಿಂಡಿಗಳ ಮೇಲೆ ಸಿಗರೇಟ್ ಪ್ಯಾಕ್‌ಗಳ ಮೇಲಿರುವಂತಹ ಆರೋಗ್ಯ ಎಚ್ಚರಿಕೆಗಳನ್ನು ಮುದ್ರಿಸಲು ನಿರ್ಧರಿಸಿದೆ. ಈ ಹೊಸ ಅಭಿಯಾನಕ್ಕೆ ನಾಗ್ಪುರದ ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ (AIIMS Nagpur) ಚಾಲನೆ ನೀಡಲಾಗಿದೆ.
ಈ ಆರೋಗ್ಯ ಎಚ್ಚರಿಕೆಗಳು ನಿರ್ದಿಷ್ಟವಾಗಿ ಈ ಆಹಾರ ಪದಾರ್ಥಗಳಲ್ಲಿರುವ ಅತಿಯಾದ ಎಣ್ಣೆ, ಸಕ್ಕರೆ ಮತ್ತು ಟ್ರಾನ್ಸ್ ಫ್ಯಾಟ್‌ಗಳ ಪ್ರಮಾಣವನ್ನು ಹೇಳಲಿವೆ. ಈ ಪೋಷಕಾಂಶಗಳು ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳಂತಹ ಜೀವನಶೈಲಿ ಸಂಬಂಧಿ ರೋಗಗಳಿಗೆ ನೇರವಾಗಿ ಸಂಬಂಧ ಹೊಂದಿದ್ದು, ದೇಶದಲ್ಲಿ ಹೆಚ್ಚುತ್ತಿರುವ ಈ ಸಮಸ್ಯೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆರೋಗ್ಯ ಸಚಿವಾಲಯವು ಈ ಕ್ರಮಕ್ಕೆ ಮುಂದಾಗಿದೆ.
ನಾಗ್ಪುರದಿಂದಲೇ ಅಭಿಯಾನದ ಶುರು
ಈ ಮಹತ್ವದ ಅಭಿಯಾನವನ್ನು ಪ್ರಾಯೋಗಿಕವಾಗಿ ಮೊದಲು ನಾಗ್ಪುರದಲ್ಲಿ, ನಿರ್ದಿಷ್ಟವಾಗಿ ಏಮ್ಸ್ ನಾಗ್ಪುರ ಸಂಸ್ಥೆಯಲ್ಲಿ ಪ್ರಾರಂಭಿಸಲಾಗುತ್ತಿದೆ. ಸಂಸ್ಥೆಯ ಕ್ಯಾಂಟೀನ್‌ಗಳು ಮತ್ತು ಕ್ಯಾಂಪಸ್‌ನೊಳಗಿನ ಸಾರ್ವಜನಿಕ ಆಹಾರ ಸೇವಿಸುವ ಸ್ಥಳಗಳಲ್ಲಿರುವ ಆಹಾರ ಕೌಂಟರ್‌ಗಳ ಪಕ್ಕದಲ್ಲಿ ಪ್ರಕಾಶಮಾನವಾದ ಮತ್ತು ಸುಲಭವಾಗಿ ಓದಲು ಸಿಗುವ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗುತ್ತದೆ. ಇದು ಆಹಾರ ಆಯ್ಕೆ ಮಾಡುವ ಗ್ರಾಹಕರಿಗೆ ತಕ್ಷಣದ ಮಾಹಿತಿಯನ್ನು ಒದಗಿಸುವ ಗುರಿ ಹೊಂದಿದೆ.
ಈ ಕ್ರಮದ ಹಿಂದಿನ ಪ್ರಬಲ ಕಾರಣ:
ಭಾರತದಲ್ಲಿ ಯುವಜನರ ಸಹಿತ ಎಲ್ಲ ವಯೋಮಾನದವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳ ಹರಡುವಿಕೆಯು ದೇಶಕ್ಕೆ ದೊಡ್ಡ ಆತಂಕವಾಗಿದೆ. ಕರಿದ ಮತ್ತು ಸಕ್ಕರೆ ಭರಿತ ತಿಂಡಿಗಳ ಆಗಾಗ್ಗೆ ಸೇವನೆಯು ಈ ಆರೋಗ್ಯ ಸಮಸ್ಯೆಗಳಿಗೆ ಪ್ರಮುಖ ಕೊಡುಗೆ ನೀಡುತ್ತಿವೆ ಎಂಬುದನ್ನು ಅಧ್ಯಯನಗಳು ತೋರಿಸಿವೆ. 'ದಿ ಲ್ಯಾನ್ಸೆಟ್' ಜರ್ನಲ್‌ನಲ್ಲಿ ಪ್ರಕಟವಾದ ಜಾಗತಿಕ ವಿಶ್ಲೇಷಣೆಯ ಪ್ರಕಾರ, 2050ರ ವೇಳೆಗೆ ಸುಮಾರು 440 ಮಿಲಿಯನ್ ಭಾರತೀಯರು ಅಧಿಕ ತೂಕ ಅಥವಾ ಬೊಜ್ಜು ಹೊಂದಿರಬಹುದು ಎಂದು ಅಂದಾಜಿಸಲಾಗಿದ್ದು, ಇದು ಸರ್ಕಾರದ ಈ ದಿಟ್ಟ ನಿರ್ಧಾರಕ್ಕೆ ಪ್ರಬಲ ಕಾರಣವಾಗಿದೆ.
ಏನೆಲ್ಲ ಎಚ್ಚರಿಕೆಗಳು?
* ಜನಪ್ರಿಯ ಆಹಾರ ಮಳಿಗೆಗಳ ಪಕ್ಕದಲ್ಲಿ ಆಕರ್ಷಕ ವಿನ್ಯಾಸದ ಎಚ್ಚರಿಕೆ ಪೋಸ್ಟರ್‌ಗಳು.
* ಆಹಾರದಲ್ಲಿರುವ ಸಕ್ಕರೆ, ಕೊಬ್ಬು ಮತ್ತು ಟ್ರಾನ್ಸ್ ಫ್ಯಾಟ್ ಅಂಶಗಳ ಬಗ್ಗೆ ಸ್ಪಷ್ಟ ಮಾಹಿತಿ.
* ಈ ಆಹಾರಗಳನ್ನು ಆಗಾಗ್ಗೆ ಸೇವಿಸುವುದರಿಂದ ಉಂಟಾಗಬಹುದಾದ ದೀರ್ಘಕಾಲೀನ ಆರೋಗ್ಯ ಅಪಾಯಗಳನ್ನು ವಿವರಿಸುವ ಸಂಕ್ಷಿಪ್ತ ಸಂದೇಶಗಳು.
ಈ ಎಚ್ಚರಿಕೆಗಳನ್ನು ಸಿಗರೇಟ್ ಪ್ಯಾಕೇಜಿಂಗ್‌ನಲ್ಲಿರುವ ಎಚ್ಚರಿಕೆಗಳಂತೆಯೇ ನೇರ ಮತ್ತು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಲಾಗಿದ್ದು, ಗ್ರಾಹಕರ ಮೇಲೆ ತಕ್ಷಣದ ಪರಿಣಾಮ ಬೀರಲು ಉದ್ದೇಶಿಸಲಾಗಿದೆ.
ನಿಷೇಧವಲ್ಲ, ಕೇವಲ ಜಾಗೃತಿ:
ಈ ಕ್ರಮವು ಸಾಂಪ್ರದಾಯಿಕ ಭಾರತೀಯ ಆಹಾರಗಳ ಮೇಲೆ ಯಾವುದೇ ರೀತಿಯ ನಿಷೇಧ ಹೇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಮೋಸಾ ಮತ್ತು ಜಿಲೇಬಿಗಳು ಎಂದಿನಂತೆ ಲಭ್ಯವಿರುತ್ತವೆ. ಆದರೆ, ಗ್ರಾಹಕರು ತಾವು ಸೇವಿಸುತ್ತಿರುವ ಆಹಾರದ ಪೌಷ್ಟಿಕಾಂಶದ ಮೌಲ್ಯ ಮತ್ತು ಅದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು ಎಂಬುದು ಸರ್ಕಾರದ ಮುಖ್ಯ ಉದ್ದೇಶ. ಇದರ ಹಿಂದಿನ ಗುರಿ ನಿರ್ಬಂಧಿಸುವುದಲ್ಲ, ಬದಲಿಗೆ ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡಲು ಪ್ರೇರೇಪಿಸುವುದು ಮತ್ತು ಮಿತವಾಗಿ ಸೇವಿಸಲು ಪ್ರೋತ್ಸಾಹಿಸುವುದು.