Sambhal mosque: ಸಂಭಲ್ ಮಸೀದಿ ಬಳಿಯ ಬಾವಿಯ ಜೀರ್ಣೋದ್ಧಾರಕ್ಕೆ ಸುಪ್ರೀಂ ಕೋರ್ಟ್ ತಡೆ
Sambhal mosque: ಸಂಭಲ್ ಜಿಲ್ಲಾಡಳಿತವು ನಗರದ ಹಳೆಯ ದೇವಾಲಯಗಳು ಮತ್ತು ಬಾವಿಗಳನ್ನು ಪುನರುಜ್ಜೀವನಗೊಳಿಸಲು ಕೆಲಸ ಆರಂಭಿಸಿದೆ. ಒಟ್ಟು 32 ದೇವಾಲಯಗಳು ಹಾಗೂ 19 ಬಾವಿಗಳನ್ನು ಗುರುತಿಸಲಾಗಿದೆ.
ಉತ್ತರ ಪ್ರದೇಶದ ಸಂಭಲ್‌ನ ಮೊಘಲ್ ಕಾಲದ ಜಾಮಾ ಮಸೀದಿಯ ಸಮೀಪವಿರುವ ಖಾಸಗಿ ಬಾವಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಉತ್ತರ ಪ್ರದೇಶದ ಅಧಿಕಾರಿಗಳು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಇತರರಿಗೆ ಆದೇಶಿಸಿದೆ.
ಸಂಭಾಲ್‌ನ ಶಾಹಿ ಜಾಮಾ ಮಸೀದಿಯ ವ್ಯವಸ್ಥಾಪನಾ ಸಮಿತಿಯ ಮನವಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಹಾನಿರ್ದೇಶಕರು, ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹರಿಶಂಕರ್ ಜೈನ್ ನೇತೃತ್ವದ ಹಿಂದೂ ಕಡೆಯ ಇತರ ಖಾಸಗಿ ವ್ಯಕ್ತಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
"ಫೆಬ್ರವರಿ 21ರಂದು ಹಿಂದಿರುಗಿಸಬಹುದಾದ ನೋಟಿಸ್ ಅನ್ನು ಕೋರ್ಟ್ ನೀಡಿದೆ. ಏತನ್ಮಧ್ಯೆ, ಪ್ರತಿವಾದಿಗಳು ಎರಡು ವಾರಗಳಲ್ಲಿ ಸ್ಥಿತಿಗತಿ ವರದಿ ಸಲ್ಲಿಸಬೇಕು. ಬಾವಿಗೆ ಸಂಬಂಧಿಸಿದಂತೆ ಪ್ರತಿವಾದಿಗಳು ಯಾವುದೇ ನೋಟಿಸ್ ನೀಡಬಾರದು" ಎಂದು ನ್ಯಾಯಪೀಠ ಆದೇಶಿಸಿದೆ.
ಸಂಭಲ್ ಜಿಲ್ಲಾಡಳಿತವು ನಗರದ ಹಳೆಯ ದೇವಾಲಯಗಳು ಮತ್ತು ಬಾವಿಗಳನ್ನು ಪುನರುಜ್ಜೀವನಗೊಳಿಸಲು ಕೆಲಸ ಆರಂಭಿಸಿದೆ. ಒಟ್ಟು 32 ದೇವಾಲಯಗಳು ಹಾಗೂ 19 ಬಾವಿಗಳನ್ನು ಗುರುತಿಸಲಾಗಿದೆ. ಬಾವಿಗಳ ಪಟ್ಟಿಯಲ್ಲಿ ಮಸೀದಿಯ ಆವರಣದಲ್ಲಿರುವ ನೀರಿನ ಬಾವಿಯೂ ಇದೆ ಎಂದು ಮಸೀದಿಯ ವ್ಯವಸ್ಥಾಪನಾ ಸಮಿತಿ ಅರ್ಜಿಯಲ್ಲಿ ಹೇಳಲಾಗಿದೆ.
ಮಸೀದಿ ಪ್ರವೇಶದ್ವಾರದ ಬಳಿ ಇರುವ ಖಾಸಗಿ ಬಾವಿಯ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸಂಭಲ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.
ಈ ಬಾವಿಯ ಅರ್ಧ ಭಾಗವು ಮಸೀದಿಯ ಒಳಗೆ ಇದ್ದು. ಉಳಿದ ಅರ್ಧ ಚಾವಣಿಯ ಹೊರಭಾಗದಲ್ಲಿದೆ. ಮಸೀದಿಯ ಮುಖ್ಯ ಪ್ರವೇಶದ್ವಾರಕ್ಕೆ ಹೋಗುವ ಮೂರು ಕಿರಿದಾದ ಪಥಗಳ ಮಧ್ಯದಲ್ಲಿರುವ ಬಾವಿಯ ನೀರನ್ನು ಮಸೀದಿ ಬಳಸುತ್ತಿದೆ ಎಂದು ಮನವಿಯಲ್ಲಿ ಕೋರ್ಟ್‌ಗೆ ತಿಳಿಸಲಾಗಿದೆ.
ಸಮೀಕ್ಷೆಯು ಹಿಂಸಾಚಾರ ಮತ್ತು ಪ್ರಾಣಹಾನಿಗೆ ಕಾರಣವಾಯಿತು, ಇದು ಉನ್ನತ ನ್ಯಾಯಾಲಯದ ತುರ್ತು ಮಧ್ಯಪ್ರವೇಶವನ್ನು ಪ್ರೇರೇಪಿಸಿತು ಎಂದು ವಾದಿಸಲಾಯಿತು.
ಮಸೀದಿ ನಿರ್ವಹಣಾ ಸಮಿತಿ ಪ್ರತಿನಿಧಿಸಿದ ಹಿರಿಯ ವಕೀಲ ಹುಜೇಫಾ ಅಹ್ಮದಿ, ಬಾವಿಯ ಐತಿಹಾಸಿಕ ಮಹತ್ವ ಉಲ್ಲೇಖಿಸಿ, "ನಾವು ಅನಾದಿ ಕಾಲದಿಂದಲೂ ಬಾವಿಯಿಂದ ನೀರನ್ನು ಬಳಸುತ್ತಿದ್ದೇವೆ" ಎಂದು ಹೇಳಿದರು. ಅಲ್ಲಿ "ಹರಿ ಮಂದಿರ" ಎಂದು ಉಲ್ಲೇಖಿಸುವ ನೋಟಿಸ್ ಮತ್ತು ಅಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಯೋಜನೆಗಳ ಬಗ್ಗೆ ಅಹ್ಮದಿ ಕಳವಳ ವ್ಯಕ್ತಪಡಿಸಿದರು.
ಬಾವಿಗೆ ಸಂಬಂಧಿಸಿದ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಮತ್ತು ಅಂತಹ ಯಾವುದೇ ನೋಟಿಸ್‌ಗಳನ್ನು ಜಾರಿಗೆ ತರಬಾರದು ಎಂದು ನ್ಯಾಯಪೀಠ ಹೇಳಿದೆ. ಹಿಂದೂಗಳನ್ನು ಪ್ರತಿನಿಧಿಸುವ ವಕೀಲ ವಿಷ್ಣು ಶಂಕರ್ ಜೈನ್, ಬಾವಿಯು ಮಸೀದಿ ವ್ಯಾಪ್ತಿಯಿಂದ ಹೊರಗಿದೆ ಮತ್ತು ಐತಿಹಾಸಿಕವಾಗಿ ಪೂಜೆಗೆ ಬಳಸಲಾಗುತ್ತಿತ್ತು ಎಂದು ಹೇಳಿದ್ದಾರೆ.
ಮಸೀದಿಯ ಸಮೀಕ್ಷೆಗೆ ಅಡ್ವೊಕೇಟ್ ಕಮಿಷನರ್ ನೇಮಕಕ್ಕೆ ಅನುಮತಿ ನೀಡಿ ಸಂಭಲ್ ಹಿರಿಯ ವಿಭಾಗೀಯ ಸಿವಿಲ್ ನ್ಯಾಯಾಧೀಶರು 2024ರ ನವೆಂಬರ್ 19ರಂದು ನೀಡಿದ್ದ ಆದೇಶವನ್ನು ಮಸೀದಿ ಸಮಿತಿ ಪ್ರಶ್ನಿಸಿದೆ. ಮನವಿ ಸಲ್ಲಿಸಿದ ದಿನವೇ ಅನುಮತಿ ನೀಡಲಾಗಿದೆ ಎಂದು ಕೋರ್ಟ್‌ಗೆ ಹೇಳಿದ್ದಾರೆ.
ನವೆಂಬರ್ 29 ರಂದು ಸುಪ್ರೀಂ ಕೋರ್ಟ್ ಸಂಭಲ್ ವಿಚಾರಣಾ ನ್ಯಾಯಾಲಯಕ್ಕೆ ಮಸೀದಿ ಸಮೀಕ್ಷೆಯ ಪ್ರಕರಣದ ವಿಚಾರಣೆಯನ್ನು ನಿಲ್ಲಿಸುವಂತೆ ಆದೇಶಿಸಿತ್ತು. ಹಿಂಸಾಚಾರ ಪೀಡಿತ ಪಟ್ಟಣದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡಿಕೊಳ್ಳಲು ಯುಪಿ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.