
ವಾರಣಾಸಿಯ ದೇವಾಲಯಗಳಿಂದ ಸಾಯಿಬಾಬಾ ಮೂರ್ತಿ ಸ್ಥಳಾಂತರ
ವಾರಣಾಸಿ: 'ಸನಾತನ ರಕ್ಷಕ ದಳ' ಹೆಸರಿನ ಗುಂಪು ಆರಂಭಿಸಿದ ಅಭಿಯಾನದ ನಂತರ ವಾರಣಾಸಿಯ ಅನೇಕ ದೇವಾಲಯಗಳಿಂದ ಸಾಯಿಬಾಬಾ ಅವರ ಪ್ರತಿಮೆಗಳನ್ನು ತೆಗೆಯಲಾಗಿದೆ.
ಇಲ್ಲಿನ ದೊಡ್ಡ ಗಣೇಶ ದೇವಸ್ಥಾನದಿಂದ ಸಾಯಿಬಾಬಾ ಪ್ರತಿಮೆಯನ್ನು ತೆಗೆದು, ದೇವಸ್ಥಾನದ ಆವರಣದ ಹೊರಗೆ ಇರಿಸಲಾಗಿದೆ. ದೇವ ಸ್ಥಾನದ ಪ್ರಧಾನ ಅರ್ಚಕ ರಾಮು ಗುರು ಮಾತನಾಡಿ, ‘ಸಾಯಿಬಾಬಾ ಅವರನ್ನು ಸರಿಯಾದ ಜ್ಞಾನವಿಲ್ಲದೆ ಪೂಜಿಸಲಾಗುತ್ತಿದೆ. ಶಾಸ್ತ್ರಗಳ ಪ್ರಕಾರ ಇದು ನಿಷೇಧಿತ,ʼ ಎಂದರು.
ಅನ್ನಪೂರ್ಣ ದೇಗುಲದ ಪ್ರಧಾನ ಅರ್ಚಕ ಶಂಕರ್ ಪುರಿ ಮಾತನಾಡಿ, ‘ಗ್ರಂಥಗಳಲ್ಲಿ ಸಾಯಿಬಾಬಾ ಅವರ ಆರಾಧನೆಯ ಉಲ್ಲೇಖವಿಲ್ಲ,ʼ ಎಂದರು.
ಸನಾತನ ರಕ್ಷಕ ದಳದ ರಾಜ್ಯಾಧ್ಯಕ್ಷ ಅಜಯ್ ಶರ್ಮಾ ಮಾತನಾಡಿ, ‘ಕಾಶಿಯಲ್ಲಿ ಪರಮಾತ್ಮನ ಆರಾಧನೆ ಮಾತ್ರ ನಡೆಯಬೇಕು. ಈಗಾಗಲೇ 10 ದೇವಸ್ಥಾನಗಳಿಂದ ಸಾಯಿಬಾಬಾ ಅವರ ಮೂರ್ತಿಗಳನ್ನು ತೆಗೆಯಲಾಗಿದೆ. ಮುಂದಿನ ದಿನಗಳಲ್ಲಿ ಅಗಸ್ತ್ಯಕುಂಡ ಮತ್ತು ಭೂತೇಶ್ವರ ದೇವಸ್ಥಾನದಿಂದಲೂ ತೆಗೆಯಲಾಗುವುದು,ʼ ಎಂದರು.
ನಗರದ ಸಿಗ್ರಾ ಪ್ರದೇಶದ ಸಾಯಿ ಮಂದಿರದ ಅರ್ಚಕ ಸಮರ ಘೋಷ್ ಮಾತನಾಡಿ, ‘ಸನಾತನಿಗಳು ಎಂದು ಹೇಳಿಕೊಳ್ಳುವವರು ದೇಗುಲ ಗಳಲ್ಲಿ ಸಾಯಿಬಾಬಾ ಪ್ರತಿಷ್ಠಾಪನೆ ಮಾಡಿದವರೇ ಆಗಿದ್ದಾರೆ. ಈ ಸಾಯಿ ದೇವಾಲಯ ಪ್ರತಿದಿನ ಬೆಳಗ್ಗೆ 7 ರಿಂದ ರಾತ್ರಿ 10 ರವರೆಗೆ ತೆರೆದಿರು ತ್ತದೆ. ಸಾಯಿ ಭಕ್ತರು ಪ್ರತಿದಿನವೂ, ವಿಶೇಷವಾಗಿ, ಗುರುವಾರ 4,000 ರಿಂದ 5,000 ಮಂದಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ,ʼ ಎಂದು ಹೇಳಿದರು.
ಸಾಯಿಬಾಬಾ ಭಕ್ತ ವಿವೇಕ್ ಶ್ರೀವಾಸ್ತವ ಮಾತನಾಡಿ, ʻಸಾಯಿಬಾಬಾ ಅವರ ಮೂರ್ತಿಯನ್ನು ತೆಗೆಸಿರುವುದು ಅತ್ಯಂತ ದುಃಖಕರ ಘಟನೆ,ʼ ಎಂದರು.
ʻಈ ಘಟನೆ ಲಕ್ಷಾಂತರ ಸಾಯಿ ಭಕ್ತರ ನಂಬಿಕೆಗೆ ಘಾಸಿ ತಂದಿದೆ.ಎಲ್ಲ ದೇವರೂ ಒಂದೇ. ಪ್ರತಿಯೊಬ್ಬರಿಗೂ ದೇವರನ್ನು ಅವರು ನಂಬುವ ಯಾವುದೇ ರೂಪದಲ್ಲಿ ಪೂಜಿಸುವ ಹಕ್ಕಿದೆ. ಹಿಂದೂ ಅಥವಾ ಮುಸ್ಲಿಮ್ ಎಂಬ ವಿಭಜನೆ ಸೃಷ್ಟಿಸಿದವರು ನಾವೇ. ದೇವರು ಮನುಷ್ಯರ ನಡುವೆ ಭೇದ ಮಾಡುವುದಿಲ್ಲ,ʼ ಎಂದು ಹೇಳಿದರು.