
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ನೋಟ.
ಶಬರಿಮಲೆ ದರ್ಶನ ಮಾರ್ಗದಲ್ಲಿ ಮಾರ್ಚ್ 15ರಿಂದ ಪ್ರಾಯೋಗಿಕ ಬದಲಾವಣೆ
ಹೊಸ ವ್ಯವಸ್ಥೆಯ ಪ್ರಕಾರ, ಭಕ್ತರು 18 ಮೆಟ್ಟಿಲುಗಳನ್ನು ಹತ್ತಿದ ತಕ್ಷಣವೇ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತದೆ. ಇದರಿಂದ ದರ್ಶನದ ಸಮಯವನ್ನು 20ರಿಂದ 25 ಸೆಕೆಂಡುಗಳವರೆಗೆ ವಿಸ್ತರಿಸಲು ಸಾಧ್ಯವಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ದೇವರ ದರ್ಶನ ಮಾಡುವ ಪಥವನ್ನು ಮಾರ್ಚ್ 15ರಿಂದ ಪ್ರಾಯೋಗಿಕವಾಗಿ ಬದಲಾಯಿಸಲಾಗುತ್ತಿದೆ. ತ್ರಿವಾಂಕೂರ್ ದೇವಸ್ವಂ ಬೋರ್ಡ್ (TDB) ಈ ಮಹತ್ವದ ನಿರ್ಧಾರ ಪ್ರಕಟಿಸಿದೆ. ವಿಷು ಪೂಜೆ ಸಂದರ್ಭದಲ್ಲಿ 12 ದಿನಗಳ ಕಾಲ ಹೊಸ ದರ್ಶನದ ವ್ಯವಸ್ಥೆ ಪ್ರಯೋಗಾತ್ಮಕವಾಗಿ ಜಾರಿಗೆ ಬರಲಿದ್ದು, ಯಶಸ್ವಿಯಾದರೆ, ಮುಂದಿನ ಮಂಡಲಂ ಹಾಗೂ ಮಕರವಿಳಕ್ಕು ಉತ್ಸವದ ವೇಳೆಯೂ ಅದನ್ನು ಶಾಶ್ವತವಾಗಿ ಜಾರಿಗೆ ತರಲಾಗುವುದು ಎಂದು ಬೋರ್ಡ್ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ.
ಹಿಂದಿನ ಪಥದಲ್ಲಿ ಸಾಗಿದರೆ. 18 ಮೆಟ್ಟಿಲುಗಳನ್ನು ಏರಿದ ಬಳಿಕ ದೇವರ ದರ್ಶನಕ್ಕೆ ಕೇವಲ 5 ಸೆಕೆಂಡುಗಳಷ್ಟೇ ದೊರೆಯುತ್ತಿತ್ತು ಎಂದು ಭಕ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗ ಗುರುತಿಸಲಾಗಿದೆ. ದೇವಾಲಯದ ತಂತ್ರಿಗಳು ಮತ್ತು ಅಲ್ಲಿನ ಮುಖ್ಯಸ್ಥರುಗಳ ಜತೆ ಚರ್ಚೆ ನಡೆಸಿದ ಬಳಿಕ ಪ್ರಾಯೋಗಿಕವಾಗಿ ಹೊಸ ಮಾರ್ಗ ನಿಗದಿ ಮಾಡಲಾಗಿದೆ.
ಹೊಸ ವ್ಯವಸ್ಥೆಯ ಪ್ರಕಾರ, ಭಕ್ತರು 18 ಮೆಟ್ಟಿಲುಗಳನ್ನು ಹತ್ತಿದ ತಕ್ಷಣವೇ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತದೆ. ಇದರಿಂದ ದರ್ಶನದ ಸಮಯವನ್ನು 20ರಿಂದ 25 ಸೆಕೆಂಡುಗಳವರೆಗೆ ವಿಸ್ತರಿಸಲು ಸಾಧ್ಯವಿದೆ.
ಹಾಲಿ ವ್ಯವಸ್ಥೆಯಲ್ಲಿ, ಭಕ್ತರು 18 ಮೆಟ್ಟಿಲು ಹತ್ತಿದ ನಂತರ ಪಾರ್ಕೋರ್ ಸೇತುವೆಯ ಮೂಲಕ ಹೋಗಿ ದರ್ಶನ ಸರತಿಯಲ್ಲಿ ಕಾಯಬೇಕಾಗುತ್ತದೆ. ಇದರಿಂದ ಕೇವಲ ಕೆಲವು ಸೆಕೆಂಡುಗಳ ಕಾಲ ಮಾತ್ರ ದರ್ಶನ ಪಡೆಯಲು ಅವಕಾಶ ಸಿಗುತ್ತಿತ್ತು. ಹೀಗಾಗಿ ಲಕ್ಷಾಂತರ ಭಕ್ತರಲ್ಲಿ ಬಹುತೇಕರು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಹೊಸ ಮಾರ್ಗವನ್ನು ಕಂಡುಕೊಳ್ಳಲಾಗಿದೆ.
ಹಣದ ಕೊರತೆ
ಶಬರಿಮಲೆ ದೇವಾಲಯದ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಹಣದ ಕೊರತೆ ಇರುವ ಕಾರಣ, ಬೋರ್ಡ್ ಪಂಬಾದಲ್ಲಿ "ವಿಶ್ವ ಐಯ್ಯಪ್ಪ ಭಕ್ತರ ಸಭೆ" ಆಯೋಜಿಸಲು ತೀರ್ಮಾನಿಸಿದೆ. ಈ ಸಭೆಯಲ್ಲಿ ಸುಮಾರು 150 ಭಕ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದ್ದು, ದೇವಾಲಯದ ಅಭಿವೃದ್ಧಿಗೆ ಸಹಾಯ ಮಾಡಲು ಈ ಸಭೆ ಒಂದು ವೇದಿಕೆಯಾಗಲಿದೆ. ಮೇ ತಿಂಗಳಲ್ಲಿ ದೇವಾಲಯ ಪುನಃ ತೆರೆಯುವ ಸಂದರ್ಭದಲ್ಲಿ ಈ ಸಭೆ ನಡೆಯಲಿದೆ ಎಂದು ಬೋರ್ಡ್ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಮಾಹಿತಿ ನೀಡಿದ್ದಾರೆ.