
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ
ಶಬರಿಮಲೆ ಚಿನ್ನಾಭರಣ ಕಳ್ಳತನ ಪ್ರಕರಣ: ಮುಖ್ಯ ಅರ್ಚಕ ಕಂಡರಾರು ರಾಜೀವರು ಬಂಧನ, ಆಸ್ಪತ್ರೆಗೆ ದಾಖಲು
ಪ್ರಕರಣವು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿರುವುದರಿಂದ ಆಡಳಿತಾರೂಢ ಸಿಪಿಐ(ಎಂ) ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ಅತ್ಯಂತ ಎಚ್ಚರಿಕೆಯ ನಿಲುವು ತಳೆದಿವೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಚಿನ್ನಾಭರಣ ಕಳ್ಳತನ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಮುಖ್ಯ ಅರ್ಚಕ (ತಂತ್ರಿ) ಕಂಡರಾರು ರಾಜೀವರು ಅವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ, ಅವರು ತೀವ್ರ ಅಸ್ವಸ್ಥಗೊಂಡು ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯು ಕೇರಳದ ರಾಜಕೀಯ ವಲಯದಲ್ಲಿ ಭಾರಿ ಪ್ರತಿರೋಧ ಮತ್ತು ಪರ-ವಿರೋಧದ ಚರ್ಚೆಗಳಿಗೆ ನಾಂದಿ ಹಾಡಿದೆ.
ಕಳೆದ ಶುಕ್ರವಾರ (ಜನವರಿ 9) ಎಸ್‌ಐಟಿ (SIT) ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಕಂಡರಾರು ರಾಜೀವರು ಅವರನ್ನು ತಿರುವನಂತಪುರಂನ ವಿಶೇಷ ಜಿಲ್ಲಾ ಉಪ ಜೈಲಿನಲ್ಲಿ ಇರಿಸಲಾಗಿತ್ತು. ಶನಿವಾರ ಮುಂಜಾನೆ ಅವರು ಎದೆಯುರಿ ಮತ್ತು ಅಸ್ವಸ್ಥತೆಯ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಅವರನ್ನು ಕೂಡಲೇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯಕೀಯ ತಪಾಸಣೆಯ ವೇಳೆ ಅವರ ಹೃದಯ ಬಡಿತದಲ್ಲಿ ಏರುಪೇರು ಕಂಡುಬಂದಿದ್ದು, ಪ್ರಸ್ತುತ ಅವರನ್ನು ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, "ನಾನು ಈಗ ಏನನ್ನೂ ಹೇಳುವುದಿಲ್ಲ" ಎಂದು ಮೌನ ವಹಿಸಿದ್ದಾರೆ.
ಕಾಂಗ್ರೆಸ್ ಮತ್ತು ಸಿಪಿಐ(ಎಂ) ಎಚ್ಚರಿಕೆಯ ಹೆಜ್ಜೆ
ಪ್ರಕರಣವು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿರುವುದರಿಂದ ಆಡಳಿತಾರೂಢ ಸಿಪಿಐ(ಎಂ) ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ಅತ್ಯಂತ ಎಚ್ಚರಿಕೆಯ ನಿಲುವು ತಳೆದಿವೆ. "ಕಾನೂನಿನ ಮುಂದೆ ಎಲ್ಲರೂ ಸಮಾನರು" ಎಂದು ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಆದರೆ, ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರು ಮತ್ತು ಮಾಜಿ ಸಚಿವರನ್ನೂ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇತ್ತ, ಕಾನೂನು ಸಚಿವ ಪಿ. ರಾಜೀವ್ ಅವರು, ಪ್ರಕರಣವು ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯುತ್ತಿರುವುದರಿಂದ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳುವ ಮೂಲಕ ಜಾಣ್ಮೆಯ ಮೌನ ವಹಿಸಿದ್ದಾರೆ.
ಬಿಜೆಪಿ ಮತ್ತು ಎನ್‌ಡಿಎ ತೀವ್ರ ವಾಗ್ದಾಳಿ
ಈ ವಿಚಾರದಲ್ಲಿ ಬಿಜೆಪಿ ಅತ್ಯಂತ ಆಕ್ರಮಣಕಾರಿ ನಿಲುವು ತಳೆದಿದೆ. ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಅವರು, ಸಿಪಿಐ(ಎಂ) ಮತ್ತು ಕಾಂಗ್ರೆಸ್ ಸೇರಿ ಭ್ರಷ್ಟರ ತಂಡವನ್ನು (ಕುರವ ಸಂಗಮಂ) ರಚಿಸಿವೆ ಎಂದು ಆರೋಪಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎದುರಾದ ಹಿನ್ನಡೆಯಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಎಲ್ಡಿಎಫ್ ಸರ್ಕಾರವು ಮುಖ್ಯ ಅರ್ಚಕರನ್ನು ಬಂಧಿಸುವ ನಾಟಕವಾಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. "ತಂತ್ರಿಗಳನ್ನು ಬಂಧಿಸಲಾಗಿದೆ, ಆದರೆ ವಿಚಾರಣೆ ಎದುರಿಸಿದ ಮಂತ್ರಿಗಳನ್ನು ಬಿಡುಗಡೆ ಮಾಡಲಾಗಿದೆ ಯಾಕೆ?" ಎಂದು ಅವರು ಪ್ರಶ್ನಿಸಿದ್ದಾರೆ.
ಜನೆವರಿ 14 ರಂದು ಪ್ರತಿಭಟನೆಗೆ ಕರೆ
ಶಬರಿಮಲೆ ಚಿನ್ನದ ಪ್ರಕರಣದ ನೈಜ ಸತ್ಯಾಂಶ ಹೊರಬರಲು ಸಿಬಿಐ ತನಿಖೆಯ ಅಗತ್ಯವಿದೆ ಎಂದು ಎನ್‌ಡಿಎ ನಾಯಕರು ಒತ್ತಾಯಿಸಿದ್ದಾರೆ. ಈ ಪ್ರಕರಣದ ವಿರುದ್ಧ ಪ್ರತಿಭಟನೆಯ ಭಾಗವಾಗಿ ಜನೆವರಿ 14 ರಂದು ಮಕರವಿಳಕ್ಕು ದಿನದಂದು ಕೇರಳದ ಪ್ರತಿ ಮನೆಗಳಲ್ಲಿ 'ಅಯ್ಯಪ್ಪ ಜ್ಯೋತಿ' ಬೆಳಗುವಂತೆ ಬಿಜೆಪಿ ಮತ್ತು ಎನ್‌ಡಿಎ ಕರೆ ನೀಡಿವೆ. ಈ ಪ್ರಕರಣವು ಈಗ ಕೇರಳದಲ್ಲಿ ಮುಂಬರುವ ಚುನಾವಣೆಗಳ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಲಿದ್ದು, ಭಕ್ತರ ಆಕ್ರೋಶಕ್ಕೆ ಯಾರು ಗುರಿಯಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

