ರುಬಿಯಾ ಸಯೀದ್ ಅಪಹರಣ ಕೇಸ್: 36 ವರ್ಷಗಳ ನಂತರ ಸಿಬಿಐ ಬಲೆಗೆ ಬಿದ್ದ ಆರೋಪಿ
x

ರುಬಿಯಾ ಸಯೀದ್ ಅಪಹರಣ ಕೇಸ್: 36 ವರ್ಷಗಳ ನಂತರ ಸಿಬಿಐ ಬಲೆಗೆ ಬಿದ್ದ ಆರೋಪಿ

1989ರಲ್ಲಿ ಲಾಲ್ ಚೌಕ್‌ನ ಆಸ್ಪತ್ರೆಯಿಂದ ನೌಗಾಂವ್‌ನಲ್ಲಿರುವ ಮನೆಗೆ ತೆರಳುತ್ತಿದ್ದಾಗ ರುಬಿಯಾ ಅವರನ್ನು ಅಪಹರಿಸಲಾಗಿತ್ತು. ಈ ಕೃತ್ಯದ ಹಿಂದೆ ಪ್ರತ್ಯೇಕತಾವಾದಿ ಉಗ್ರಗಾಮಿ ಸಂಘಟನೆ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ಕೈವಾಡವಿತ್ತು.


Click the Play button to hear this message in audio format

ದೇಶವನ್ನೇ ಬೆಚ್ಚಿಬೀಳಿಸಿದ್ದ ಅಂದಿನ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಬರೋಬ್ಬರಿ 36 ವರ್ಷಗಳ ಬಳಿಕ ಪ್ರಮುಖ ಆರೋಪಿಯೊಬ್ಬನನ್ನು ಕೇಂದ್ರೀಯ ತನಿಖಾ ದಳ (CBI) ಸೋಮವಾರ ಬಂಧಿಸಿದೆ.

ಬಂಧಿತನನ್ನು ಶಫತ್ ಅಹ್ಮದ್ ಶುಂಗ್ಲು (Shafat Ahmad Shungloo) ಎಂದು ಗುರುತಿಸಲಾಗಿದೆ. ಈತನ ಸುಳಿವು ನೀಡಿದವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಸಾಕ್ಷಿಗಳ ಹೇಳಿಕೆ ಮತ್ತು ಸ್ವತಃ ರುಬಿಯಾ ಸಯೀದ್ ನೀಡಿದ ಹೇಳಿಕೆಯ ಆಧಾರದ ಮೇಲೆ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಈತನ ಹೆಸರನ್ನು ಉಲ್ಲೇಖಿಸಿತ್ತು. ಇದೀಗ ಶ್ರೀನಗರದಲ್ಲಿ ಈತನನ್ನು ಬಂಧಿಸಲಾಗಿದ್ದು, ಜಮ್ಮುವಿನ 'ಟಾಡಾ' (TADA) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಘಟನೆಯ ಕರಾಳ ಇತಿಹಾಸ

1989ರಲ್ಲಿ ಲಾಲ್ ಚೌಕ್‌ನ ಆಸ್ಪತ್ರೆಯಿಂದ ನೌಗಾಂವ್‌ನಲ್ಲಿರುವ ಮನೆಗೆ ತೆರಳುತ್ತಿದ್ದಾಗ ರುಬಿಯಾ ಅವರನ್ನು ಅಪಹರಿಸಲಾಗಿತ್ತು. ಈ ಕೃತ್ಯದ ಹಿಂದೆ ಪ್ರತ್ಯೇಕತಾವಾದಿ ಉಗ್ರಗಾಮಿ ಸಂಘಟನೆ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ಕೈವಾಡವಿತ್ತು. ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಇದರ ನೇತೃತ್ವ ವಹಿಸಿದ್ದ. ರುಬಿಯಾ ಬಿಡುಗಡೆಗೆ ಬದಲಾಗಿ ಕೇಂದ್ರ ಸರ್ಕಾರ ಅಂದು ಐವರು ಉಗ್ರರನ್ನು ಜೈಲಿನಲ್ಲಿ ಬಿಡುಗಡೆ ಮಾಡಬೇಕಾಯಿತು. ಅಚ್ಚರಿಯೆಂದರೆ, ಅಂದು ಬಿಡುಗಡೆಯಾದ ಉಗ್ರರೇ ಮುಂದೆ 1999ರಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನ (IC-814) ಹೈಜಾಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಯಾಸಿನ್ ಮಲಿಕ್ ಜೈಲಿನಲ್ಲಿ

ಈ ಪ್ರಕರಣದ ಪ್ರಮುಖ ಆರೋಪಿ ಯಾಸಿನ್ ಮಲಿಕ್, ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ 2023ರ ಮೇ ತಿಂಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದು, ಪ್ರಸ್ತುತ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಅಂದಿನ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಉಗ್ರರ ಬಿಡುಗಡೆಯನ್ನು ವಿರೋಧಿಸಿದ್ದರು ಎನ್ನಲಾಗಿದೆ. ಅವರ ಪುತ್ರ ಒಮರ್ ಅಬ್ದುಲ್ಲಾ ಈ ಬಗ್ಗೆ ಪ್ರತಿಕ್ರಿಯಿಸಿ, "ಗೃಹ ಸಚಿವರ ಮಗಳಿಗಾಗಿ ಉಗ್ರರನ್ನು ಬಿಟ್ಟಿದ್ದನ್ನು ಉದಾಹರಣೆಯಾಗಿಟ್ಟುಕೊಂಡು, ಕಂದಹಾರ್ ವಿಮಾನ ಹೈಜಾಕ್ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು," ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Read More
Next Story