ಆರೆಸ್ಸೆಸ್ ನಾಯಕನ ಲೇಖನ:ಮಹಾರಾಷ್ಟ್ರದಲ್ಲಿ ಬಿಜೆಪಿ, ಎನ್‌ಸಿಪಿ ನಡುವೆ ವಾಕ್ಸಮರ
x

ಆರೆಸ್ಸೆಸ್ ನಾಯಕನ ಲೇಖನ:ಮಹಾರಾಷ್ಟ್ರದಲ್ಲಿ ಬಿಜೆಪಿ, ಎನ್‌ಸಿಪಿ ನಡುವೆ ವಾಕ್ಸಮರ


ಆರ್ಗನೈಸರ್ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದು ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ. ಹಿರಿಯ ಆರ್‌ಎಸ್‌ಎಸ್ ನಾಯಕ ರತನ್ ಶಾರ್ದಾ ಅವರು ಲೇಖನದಲ್ಲಿ‌ ಚುನಾವಣೆಯಲ್ಲಿ ಅಜಿತ್ ಪವಾರ್ ಅವರ ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಬಿಜೆಪಿಯನ್ನು ಟೀಕಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಕೇವಲ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಈ ಕಳಪೆ ಪ್ರದರ್ಶನ ಸಾಕಷ್ಟು ಟೀಕೆಗೊಳಗಾಗಿದೆ. ಆರ್ಗನೈಸರ್ ವಾರಪತ್ರಿಕೆ ಯಲ್ಲಿನ ಲೇಖನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.

ಆರ್‌ಎಸ್‌ಎಸ್ ಹಿರಿಯ ನಾಯಕ ರತನ್ ಶಾರ್ದಾ, ʻಈ ತಪ್ಪು ಕ್ರಮವನ್ನು ಏಕೆ ತೆಗೆದುಕೊಳ್ಳಲಾಯಿತು? ಇದರಿಂದ ಕಾಂಗ್ರೆಸ್ ಸಿದ್ಧಾಂತದ ವಿರುದ್ಧ ಹೋರಾಟ ನಡೆಸಿ, ಕಿರುಕುಳ ಅನುಭವಿಸಿದ ಬಿಜೆಪಿ ಬೆಂಬಲಿಗರಿಗೆ ನೋವಾಗಿದೆ. ಒಂದೇ ಏಟಿಗೆ ಬಿಜೆಪಿ ತನ್ನ ಬ್ರ್ಯಾಂಡ್ ಮೌಲ್ಯವನ್ನು ಕಡಿಮೆ ಮಾಡಿಕೊಂಡಿತು. ಅನವಶ್ಯಕ ರಾಜಕೀಯ ಮತ್ತು ಕೈಚಳಕಕ್ಕೆ ಇದು ಉದಾಹರಣೆ. ತಡವಾಗಿ ಬಂದವರಿಗೆ ಅವಕಾಶ ಕಲ್ಪಿಸಲು ಉತ್ತಮವಾಗಿ ಕಾರ್ಯನಿರ್ವಹಿಸಿದ ಸಂಸದರನ್ನು ನಿರ್ಲಕ್ಷಿಸಲಾಯಿತು,ʼ ಎಂದು ಬರೆದಿದ್ದರು.

ಎನ್‌ಸಿಪಿ ಯುವ ಘಟಕದ ಆಕ್ರೋಶ: ಎನ್‌ಸಿಪಿ ಯುವ ಘಟಕದ ನಾಯಕ ಸೂರಜ್ ಚವಾಣ್‌ ಪ್ರತಿಕ್ರಿಯಿಸಿ, ʻಬಿಜೆಪಿ ಉತ್ತಮ ಸಾಧನೆ ಮಾಡಿದಾಗ, ಆರ್‌ಎಸ್‌ಎಸ್‌ಗೆ ಕ್ರೆಡಿಟ್ ನೀಡಲಾಗುತ್ತದೆ. ಆದರೆ, ಸೋಲಿಗೆ ಅಜಿತ್ ಪವಾರ್ ಕಾರಣ ಎನ್ನಲಾಗುತ್ತದೆ,ʼ ಎಂದು ಟೀಕಿಸಿದರು.

ಎನ್‌ಸಿಪಿಯ ರಾಜ್ಯಸಭೆ ಸದಸ್ಯ ಮತ್ತು ಹಿರಿಯ ನಾಯಕ ಪ್ರಫುಲ್ ಪಟೇಲ್,ʻಲೇಖನ ಬಿಜೆಪಿಯ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ಅದನ್ನು ಆ ರೀತಿಯಲ್ಲಿ ಅರ್ಥೈಸಬಾರದು,ʼ ಎಂದು ಸಮಾಧಾನಗೊಳಿಸುವ ಮಾತು ಆಡಿದರು.

ಆದರೆ, ಸೂರಜ್ ಚವಾಣ್ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ನಾಯಕ ಪ್ರವೀಣ್ ದಾರೇಕರ್, ʻಆರ್‌ಎಸ್‌ಎಸ್ ಅವರೆಲ್ಲರಿಗೂ ತಂದೆಯಂತೆ. ಎನ್‌ಸಿಪಿ ಬಗ್ಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎನ್‌ಡಿಎ ಸಭೆ ಇಂತಹ ವಿಷಯಗಳ ಬಗ್ಗೆ ಚರ್ಚಿಸಲು ಸೂಕ್ತ ವೇದಿಕೆ,ʼ ಎಂದಿದ್ದಾರೆ.

ಎಂಒಎಸ್ ಹುದ್ದೆಗೆ ಎನ್‌ಸಿಪಿ ತಿರಸ್ಕಾರ: ಈ ಲೇಖನಕ್ಕೆ ಮುನ್ನವೇ ಎರಡು ಪಕ್ಷಗಳ ನಡುವೆ ಭಿನ್ನಾಭಿಪ್ರಾಯದ ಲಕ್ಷಣ ಕಂಡುಬಂದಿತ್ತು. ಎನ್‌ಡಿಎ ಸರ್ಕಾರದಲ್ಲಿ ರಾಜ್ಯ ಸಚಿವ ಸ್ಥಾನವನ್ನು ಎನ್‌ಸಿಪಿ ತಿರಸ್ಕರಿಸಿದೆ. ʻಪ್ರಫುಲ್ ಪಟೇಲ್ ಅವರು ಯುಪಿಎ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಆದ್ದರಿಂದ ಕಿರಿಯ ಸಚಿವ ಸ್ಥಾನವನ್ನು ಸ್ವೀಕರಿಸಲು ಸಾಧ್ಯವಿಲ್ಲ,ʼ ಎಂದು ಎನ್‌ಸಿಪಿ ಹೇಳಿತ್ತು.

ಕೇವಲ ಒಂದು ಲೋಕಸಭೆ ಸ್ಥಾನದಲ್ಲಿ ಗೆದ್ದಿರುವ ಎನ್‌ಸಿಪಿಯೊಂದಿಗೆ ಮೈತ್ರಿ ಮುಂದುವರಿಸಬೇಕೇ ಎಂದು ಬಿಜೆಪಿ ಗಂಭೀರವಾಗಿ ಪರಿಗಣಿಸುತ್ತಿದೆ ಎಂಬ ಊಹಾಪೋಹವಿದೆ. ಬಿಜೆಪಿ 2019ರಲ್ಲಿ ಗೆದ್ದ 303 ಸ್ಥಾನಗಳಿಗಿಂತ 63 ಕಡಿಮೆ ಸ್ಥಾನ ಗಳಿಸಿದೆ. ಪ್ರತಿಯಾಗಿ ಕಾಂಗ್ರೆಸ್ ಬಲವಾಗುತ್ತಿದೆ. 2014 ರಲ್ಲಿ 44, 2019 ರಲ್ಲಿ 52 ರಿಂದ 2024 ರಲ್ಲಿ 99 ಸ್ಥಾನ ಗೆದ್ದಿದೆ.

ದುರಹಂಕಾರ ಸಲ್ಲದು: ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಅವರು ಜೈಪುರ ಸಮೀಪದ ಕನೋಟಾದಲ್ಲಿ ಗುರುವಾರ (ಜೂನ್ 13) ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ʻಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಪ್ರದರ್ಶನಕ್ಕೆ ದುರಹಂಕಾರ ಕಾರಣ ಎಂದು ಹೇಳಿದ್ದರು. ʻರಾಮನ ಭಕ್ತರು ಕ್ರಮೇಣ ಅಹಂಕಾರಿಯಾದರು. ಅತಿ ದೊಡ್ಡ ಪಕ್ಷವೆಂದು ದುರಹಂಕಾರದಿಂದ ಘೋಷಿಸಿಕೊಂಡ ಪಕ್ಷವನ್ನು ರಾಮನು 241 ಕ್ಕೆ ನಿಲ್ಲಿಸಿದನು,ʼಎಂದು ಅವರು ಹೇಳಿದರು.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಾರ್ವಜನಿಕ ಸೇವೆಯಲ್ಲಿ ನಮ್ರತೆಯ ಮಹತ್ವದ ಬಗ್ಗೆ ಹೇಳಿದ ಕೆಲವೇ ದಿನಗಳಲ್ಲಿ ಇಂದ್ರೇಶ್‌ ಕುಮಾರ್‌ ಅವರ ಈ ಹೇಳಿಕೆ ಬಂದಿದೆ. ʻನಿಜವಾದ ಸೇವಕನು ಘನತೆಯನ್ನು ಕಾಪಾಡಿಕೊಳ್ಳುತ್ತಾನೆ. ಕೆಲಸ ಮಾಡುವಾಗ ಶಿಷ್ಟಾಚಾರವನ್ನು ಪಾಲಿಸುತ್ತಾನೆ. ‘ನಾನೇ ಈ ಕೆಲಸ ಮಾಡಿದೆ’ ಎಂದು ಅಹಂಕಾರ ಪಡುವುದಿಲ್ಲ. ಅಂತಹ ವ್ಯಕ್ತಿಯನ್ನು ಮಾತ್ರ ನಿಜವಾದ ಸೇವಕ ಎಂದು ಕರೆಯಬಹುದು,ʼ ಎಂದು ಭಾಗವತ್ ಹೇಳಿದ್ದರು.

Read More
Next Story