Kolkata rape & murder| ಸಿಬಿಐನಿಂದ ಹೊಸ  ವರದಿ ಕೇಳಿದ ಸುಪ್ರೀಂ
x

Kolkata rape & murder| ಸಿಬಿಐನಿಂದ ಹೊಸ ವರದಿ ಕೇಳಿದ ಸುಪ್ರೀಂ

ವಿಧಿವಿಜ್ಞಾನ ಪರೀಕ್ಷೆಗಳು ಬಲಿಪಶು ಮತ್ತು ಬಂಧಿತ ನಾಗರಿಕ ಸ್ವಯಂಸೇವಕನ ಡಿಎನ್‌ಎ ಹೊಂದಾಣಿಕೆಯನ್ನು ದೃಢೀಕರಿಸುತ್ತವೆ. ಆದರೆ ʻಸಾಕ್ಷ್ಯಗಳ ಕೊರತೆʼಯಿಂದ ಸಂಪೂರ್ಣ ಚಿತ್ರಣ ದೊರೆಯುತ್ತಿಲ್ಲ ಎಂದು ಸಿಬಿಐ ಹೇಳಿದೆ.


ಕೋಲ್ಕತ್ತಾದ ಆರ್‌.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಸ್ವಯಂ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌, ಸಿಬಿಐನಿಂದ ಮುಂದಿನ ಮಂಗಳವಾರದೊಳಗೆ ಹೊಸ ವಸ್ತುಸ್ಥಿತಿ ವರದಿಯನ್ನು ಕೇಳಿದೆ. ʻಕರ್ತವ್ಯವನ್ನು ಕಡೆಗಣಿಸಿ ಪ್ರತಿಭಟನೆ ಕೂಡದುʼ ಎಂದಿರುವ ಸುಪ್ರೀಂ ಕೋರ್ಟ್‌, ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ವೈದ್ಯರಿಗೆ ಸೂಚಿಸಿದೆ.

ಮಂಗಳವಾರ ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗಬೇಕು. ಕರ್ತವ್ಯಕ್ಕೆ ಹಾಜರಾದವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಪಶ್ಚಿಮ ಬಂಗಾಳ ಸರ್ಕಾರವು ವೈದ್ಯರ ಸುರಕ್ಷತೆ ಮತ್ತು ರಕ್ಷಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವರಲ್ಲಿಆತ್ಮವಿಶ್ವಾಸ ಮೂಡಿಸಬೇಕು. ಇದಕ್ಕಾಗಿ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ಮುಖ್ಯಸ್ಥರು ಸರ್ಕಾರಿ ವೈದ್ಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿನ ಪರಿಸ್ಥಿತಿಯನ್ನು ಪರಾಮರ್ಶಿಸಬೇಕು ಮತ್ತು ಅಗತ್ಯ ರಕ್ಷಣೆ ನೀಡಬೇಕು ಎಂದು ಹೇಳಿದೆ.

ʻಏನಾಗುತ್ತಿದೆ ಎನ್ನುವುದು ನಮಗೆ ಗೊತ್ತಿದೆ. ಮೊದಲು ಕರ್ತವ್ಯಕ್ಕೆ ಹಾಜರಾಗಿ. ಜಿಲ್ಲಾಧಿಕಾರಿ ಮತ್ತು ಎಸ್ಪಿ ನಿಮಗೆ ರಕ್ಷಣೆ ನೀಡಲಿದ್ದಾರೆ,ʼ ಎಂದು ಹೇಳಿತು.

ವೈದ್ಯೆಯ ಶವ ವಶಪಡಿಸಿಕೊಂಡು ನಿಖರವಾಗಿ ಒಂದು ತಿಂಗಳು ಕಳೆದಿದೆ. ಆದರೆ, ಅಪರಾಧಕ್ಕೆ ಕಾರಣವೇನು ಎಂಬುದರ ಬಗ್ಗೆ ಸುಳಿವು ಸಿಕ್ಕಿಲ್ಲ. ರಾಜಧಾನಿ ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದಾದ್ಯಂತ ಪ್ರತಿಭಟನೆಗಳು ಮುಂದುವರಿದಿದೆ.

ಮು.ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಇಂದು ವಿಚಾರಣೆ ನಡೆಸುತ್ತಿದೆ.

ನ್ಯಾಯಾಲಯದಲ್ಲಿ ಈವರೆಗೆ: ಸುಪ್ರೀಂ ಕೋರ್ಟ್ ಎಫ್‌ಐಆರ್ ದಾಖಲಿಸುವಲ್ಲಿನ ವಿಳಂಬದ ಬಗ್ಗೆ ಕೋಲ್ಕತ್ತಾ ಪೊಲೀಸರನ್ನು ಆಗಸ್ಟ್ 22 ರಂದು ತರಾಟೆಗೆ ತೆಗೆದುಕೊಂಡಿತು. ʻಅತ್ಯಂತ ಚಿಂತೆಗೀಡು ಮಾಡುವಂತದ್ದುʼ ಎಂದು ಹೇಳಿತ್ತು. ಘಟನೆಗಳ ಅನುಕ್ರಮ ಮತ್ತು ಅದರ ಕಾರ್ಯವಿಧಾನದ ಔಪಚಾರಿಕತೆಯ ಸಮಯವನ್ನು ಪ್ರಶ್ನಿಸಿತ್ತು.

ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಂಹಿತೆಯನ್ನು ರೂಪಿಸಲು 10 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ (ಎನ್ ಟಿಎಫ್‌) ಅನ್ನು ರಚಿಸಿತ್ತು.

ಘಟನೆಯನ್ನು ‌ʻಭಯಾನಕʼ ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್, ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಮತ್ತು ದಾಂಧಲೆ ನಡೆಸಿ ಸರ್ಕಾರಿ ಸೌಲಭ್ಯವನ್ನು ಧ್ವಂಸ ಮಾಡಲು ಅವಕಾಶ ನೀಡಿದ್ದಕ್ಕೆ ರಾಜ್ಯ ಸರ್ಕಾರವನ್ನು ಖಂಡಿಸಿತ್ತು.

ಸಾಕ್ಷ್ಯಾಧಾರ ಕೊರತೆ: ಸಿಬಿಐ- ಕಲ್ಕತ್ತಾ ಹೈಕೋರ್ಟ್ ಆಗಸ್ಟ್ 13 ರಂದು ಕೋಲ್ಕತ್ತಾ ಪೊಲೀಸರಿಂದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತು. ಅಪರಾಧದ ಸ್ಥಳದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಸಂಪೂರ್ಣ ಚಿತ್ರಣ ಸಾಧ್ಯವಾಗುತ್ತಿಲ್ಲ. ಇದು ತನಿಖೆ ಮೇಲೆ ಪರಿಣಾಮ ಬೀರಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.

ಈ ಸಂಬಂಧ ಮರುದಿನ ಪೊಲೀಸರು ಕೋಲ್ಕತ್ತಾ ಪೊಲೀಸ್ ನಾಗರಿಕ ಸ್ವಯಂಸೇವಕ ಸಂಜೋಯ್ ರಾಯ್ ಅವರನ್ನು ಬಂಧಿಸಿದರು. ಆಸ್ಪ ತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರು ಆ.10ರಂದು ಸೆಮಿನಾರ್ ಕೊಠಡಿಯ ಸಮೀಪವಿರುವ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯವನ್ನು ಕೆಡವಲು ಆದೇಶ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಪಿಡಬ್ಲ್ಯುಡಿ ಈ ಭಾಗವನ್ನು ಕೆಡವಿರುವುದರಿಂದ ಪ್ರಮುಖ ಪುರಾವೆಗಳು ಕಳೆದುಹೋಗಿವೆ ಎಂದು ಹೇಳಲಾಗಿದೆ.

ಘೋಷ್, ಇತರ ವೈದ್ಯರು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮತ್ತು ಪ್ರಮುಖ ಆರೋಪಿ ಸಂಜಯ್ ರಾಯ್ ಸೇರಿದಂತೆ ಸಾಕ್ಷಿಗಳನ್ನು ಸಿಬಿಐ ಪ್ರಶ್ನಿಸಿದೆ.

ವಿಧಿವಿಜ್ಞಾನ ಪರೀಕ್ಷೆ: ʻಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ. ಹಾಗಾಗಿ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಸಾಂದ ರ್ಭಿಕ ಪುರಾವೆ, ಜನರ ಹೇಳಿಕೆಗಳು ಮತ್ತು ಡಿಎನ್‌ಎ ಪುರಾವೆ ಪ್ರಕಾರ ಲೈಂಗಿಕ ದೌರ್ಜನ್ಯದಲ್ಲಿ ಅನೇಕ ವ್ಯಕ್ತಿಗಳ ಒಳಗೊಂಡಿಲ್ಲ. ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ(ಸಿಎಫ್‌ಎಸ್‌ಎಲ್) ನಡೆಸಿದ ವಿಧಿವಿಜ್ಞಾನ ಪರೀಕ್ಷೆಗಳು ವೈದ್ಯೆ ಮತ್ತು ರಾಯ್‌ ಡಿಎನ್‌ಎ ಹೊಂದಾಣಿಕೆಯನ್ನು ದೃಢಪಡಿಸಿವೆ,ʼ ಎಂದು ಹೇಳಿದರು.

ʻವೈದ್ಯೆ ಮತ್ತು ರಾಯ್‌ನಿಂದ ಸಂಗ್ರಹಿಸಿದ ಮಾದರಿಗಳ ಪ್ರತ್ಯೇಕ ಡಿಎನ್‌ಎ ಪ್ರೊಫೈಲಿಂಗ್ ಮತ್ತು ಅಪರಾಧದ ಸ್ಥಳದಿಂದ ವಶಪಡಿಸಿಕೊಂಡ ಇತರ ಸಾಕ್ಷ್ಯಗಳು ಸಿಎಫ್‌ಎಸ್‌ಎಲ್ ವರದಿಯನ್ನು ದೃಢಪಡಿಸಿದವೆ,ʼ ಎಂದು ಹೇಳಿದರು.

ಮೃತರ ಪೋಷಕರು ಕೂಡ ಸಾಕ್ಷ್ಯಗಳನ್ನು ನಾಶ ಮಾಡಲಾಗಿದೆ ಎಂದು ಆರೋಪಿಸಿದ್ದರು.

Read More
Next Story