ಕಂದಾಯ ಕಾರ್ಯದರ್ಶಿ ಸಂಜಯ್​ ಮಲ್ಹೋತ್ರಾ ಆರ್​ಬಿಐ ನೂತನ ಗವರ್ನರ್​
x

ಕಂದಾಯ ಕಾರ್ಯದರ್ಶಿ ಸಂಜಯ್​ ಮಲ್ಹೋತ್ರಾ ಆರ್​ಬಿಐ ನೂತನ ಗವರ್ನರ್​

ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್ ಅವರ ಸೇವಾವಧಿ ಮಂಗಳವಾರ (ಡಿಸೆಂಬರ್​ 10ರಂದು) ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಸಂಜಯ್​ ಮಲ್ಹೋತ್ರಾ ಅವರನ್ನು ಸಂಪುಟ ಉಪಸಮಿತಿ ನೇಮಕ ಮಾಡಿದೆ.


ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ಮುಂದಿನ ಗವರ್ನರ್ ಆಗಿ ಸರ್ಕಾರ ನೇಮಿಸಿದೆ. ಸಂಪುಟದ ನೇಮಕ ಸಮಿತಿ ಸೋಮವಾರ ಅನುಮೋದನೆ ನೀಡಿದೆ. ಶಕ್ತಿಕಾಂತ್ ದಾಸ್ ಅವರ ಅಧಿಕಾರಾವಧಿ ಮಂಗಳವಾರ (ಡಿಸೆಂಬರ್ 10) ಕೊನೆಗೊಳ್ಳಲಿದ್ದು, ಅವರು 2 ಅವಧಿಗೆ ಕೇಂದ್ರ ಬ್ಯಾಂಕ್ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು.

ಮಲ್ಹೋತ್ರಾ ಅವರು 1990ರ ಬ್ಯಾಚ್​ನ ರಾಜಸ್ಥಾನ ಕೇಡರ್​ನ ಐಎಎಸ್​ ಅಧಿಕಾರಿಯಾಗಿದ್ದಾರೆ. ಕಾನ್ಪುರದ ಇಂಡಿಯನ್ ಇನ್​ಸ್ಟಿಟ್ಯೂಪ್​ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಕಂಪ್ಯೂಟರ್ ಸೈನ್ಸ್​​ನಲ್ಲಿ ಪದವಿ ಪಡೆದ ಅವರು ಅಮೆರಿಕದ ಪ್ರಿನ್ಸ್​​ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಮಲ್ಹೋತ್ರಾ ಅವರು ವಿದ್ಯುತ್, ಹಣಕಾಸು ಮತ್ತು ತೆರಿಗೆ, ಮಾಹಿತಿ ತಂತ್ರಜ್ಞಾನ, ಗಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ, ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿ (ಕಂದಾಯ) ಆಗಿದ್ದಾರೆ. ಅವರ ಹಿಂದಿನ ನೇಮಕದಲ್ಲಿ, ಅವರು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಹಣಕಾಸು ಸೇವೆಗಳ ಇಲಾಖೆಯಲ್ಲಿ ಕಾರ್ಯದರ್ಶಿ ಹುದ್ದೆಯನ್ನು ಹೊಂದಿದ್ದರು.

ಮಲ್ಹೋತ್ತಾ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಹಣಕಾಸು ಮತ್ತು ತೆರಿಗೆಯಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ. ಅವರ ಪ್ರಸ್ತುತ ನಿಯೋಜನೆಯಲ್ಲಿ ಅವರು ನೇರ ಮತ್ತು ಪರೋಕ್ಷ ತೆರಿಗೆಗಳಿಗೆ ತೆರಿಗೆ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

Read More
Next Story