ಎಂಎಸ್‌ಪಿ ಸಮಿತಿ ವರದಿ ಶೀಘ್ರದಲ್ಲೇ ಬಹಿರಂಗ: ಸಚಿವ ಚೌಹಾಣ್
ಎನ್‌ಡಿಎ 3.0 ಸರ್ಕಾರದ ಮೊದಲ 100 ದಿನಗಳ ಸಾಧನೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ಕೃಷಿಯ ಆಧುನೀಕರಣ ಮತ್ತು ರೈತರ ತೊಡಗಿಸಿಕೊಳ್ಳುವಿಕೆಯನ್ನು ಸುಧಾರಿಸುವ ಗುರಿ ಇರುವ ಹೊಸ ಉಪಕ್ರಮಗಳನ್ನು ಅನಾವರಣಗೊಳಿಸಿದರು.
ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡ ನಂತರ ರಚಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಮಿತಿ ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಹೇಳಿದ್ದಾರೆ.
ಎನ್‌ಡಿಎ 3.0 ಸರ್ಕಾರದ ಮೊದಲ 100 ದಿನಗಳ ಸಾಧನೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ಕೃಷಿಯ ಆಧುನೀಕರಣ ಮತ್ತು ರೈತರ ತೊಡಗಿಸಿಕೊಳ್ಳುವಿಕೆಯನ್ನು ಸುಧಾರಿಸುವ ಗುರಿ ಇರುವ ಹೊಸ ಉಪಕ್ರಮಗಳನ್ನು ಅನಾವರಣಗೊಳಿಸಿದರು.
ಮಾಜಿ ಕೃಷಿ ಕಾರ್ಯದರ್ಶಿ ಸಂಜಯ್ ಅಗರವಾಲ್ ನೇತೃತ್ವದ ಎಂಎಸ್‌ಪಿ ಸಮಿತಿ ಈವರೆಗೆ ಎರಡು ಡಜನ್‌ಗಿಂತಲೂ ಹೆಚ್ಚು ಸಭೆ ಮತ್ತು ಕಾರ್ಯಾಗಾರಗಳನ್ನು ನಡೆಸಿದೆ. ಸಮಿತಿ ಸದಸ್ಯರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ನಾವು ಶೀಘ್ರದಲ್ಲೇ ವರದಿಯನ್ನು ಸಾರ್ವಜನಿಕ ಗೊಳಿಸು ತ್ತೇವೆ ಎಂದು ಹೇಳಿದರು.
ಕೃಷಿ ಆವಿಷ್ಕಾರಗಳನ್ನು ರೈತರಿಗೆ ಪ್ರಸಾರ ಮಾಡುವ 'ಆಧುನಿಕ್ ಕೃಷಿ ಚೌಪಲ್' ಅಕ್ಟೋಬರ್‌ನಿಂದ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ. ʻಕಿಸಾನ್ ಸಂವಾದʼ ಕಾರ್ಯಕ್ರಮದಲ್ಲಿ ಸಚಿವರು ರೈತರು ಮತ್ತು ಕೃಷಿ ಮುಖಂಡರೊಂದಿಗೆ ವಾರಕ್ಕೊಮ್ಮೆ ಸಂವಾದ ನಡೆಸಲಿದ್ದಾರೆ.
ʻಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ತ್ರಿಕೋನ ಕಾರ್ಯತಂತ್ರ ಅನುಸರಿಸುತ್ತಿದೆ. ಕೈಗೆಟಕುವ ಬೆಲೆಯಲ್ಲಿ ಒಳ ಸುರಿಗಳ ಸಕಾಲಿಕ ಪೂರೈಕೆ, ರೈತರ ಆದಾಯ ಹೆಚ್ಚಳ ಮತ್ತು ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಖಚಿತಪಡಿಸಿಕೊಳ್ಳಲು ಗಮನಹರಿಸಲಾಗಿದೆ. ಹವಾಮಾನ ಬದಲಾವಣೆಯ ಪರಿಣಾಮ ಎದುರಿಸಬಲ್ಲ 109ಕ್ಕೂ ಅಧಿಕ ಪ್ರಭೇದಗಳನ್ನು ಬಿಡುಗಡೆ ಮಾಡಲಾಗಿದೆ,ʼ ಎಂದು ಹೇಳಿದರು.
ʻಯೂರಿಯಾ ಅಲ್ಲದ ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲು ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮೂಲಕ ಬೆಳೆ ವಿಮೆ ನೀಡಲಾಗುತ್ತಿದೆ. ಪಿಎಂ ಕಿಸಾನ್ ಅರ್ಹ ರೈತರಿಗೆ ವಾರ್ಷಿಕ 6,000 ರೂ. ನೀಡಲಾಗುತ್ತಿದೆ. ಖಾರೀಫ್ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದೆ. ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣ್ ಅಭಿಯಾನ (PM-AASHA)ದಡಿ ಬೆಲೆ ಬೆಂಬಲ ಯೋಜನೆಯನ್ನು ಮುಂದುವರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ,ʼ ಎಂದು ವಿವರಿಸಿದರು.
ಜಿಎಂ ಹತ್ತಿ ಕುರಿತ ಪ್ರಶ್ನೆಗೆ,ʻಇದು ಸೂಕ್ಷ್ಮ ವಿಷಯ. ವ್ಯಾಪಕ ಸಮಾಲೋಚನೆಗಳ ನಂತರ ಅನುಮೋದನೆ ನೀಡಲಾಗುವುದು,ʼ ಎಂದು ಹೇಳಿದರು.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಾಗ ಸಮಿತಿ ರಚಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಎಂಟು ತಿಂಗಳ ನಂತರ ಜುಲೈ 2022 ರಲ್ಲಿ ಸಮಿತಿಯನ್ನು ರಚಿಸಲಾಯಿತು.