
ಪತಂಜಲಿ ವಿರುದ್ಧ ನಿಂದನೆ ಜಾಹೀರಾತು ಪ್ರಕರಣ ಮುಕ್ತಾಯ
ಆಧುನಿಕ ವೈದ್ಯಶಾಸ್ತ್ರದ ವಿರುದ್ಧ ರಾಮದೇವ್ ಮತ್ತು ಪತಂಜಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಐಎಂಎ 2022 ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ದಾರಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ರಾಮ್‌ದೇವ್, ಅವರ ಸಹಾಯಕ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ಲಿಮಿಟೆಡ್ ಸಲ್ಲಿಸಿದ ಕ್ಷಮಾಪಣೆಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದ್ದು, ಮಂಗಳವಾರ ನಿಂದನೆ ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ರಾಮ್‌ದೇವ್, ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ್ ಲಿ. ನೀಡಿದ ಮುಚ್ಚಳಿಕೆ ಆಧಾರದ ಮೇಲೆ ನ್ಯಾಯಾಲಯವು ನಿಂದನೆ ಪ್ರಕರಣವನ್ನು ಮುಕ್ತಾಯಗೊಳಿಸಿದೆ ಎಂದು ವಕೀಲ ಗೌತಮ್ ತಾಲೂಕ್ದಾರ್ ಹೇಳಿದರು.
ಮೇ 14 ರಂದು ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು.
ಕೋವಿಡ್ ಲಸಿಕೆ ಅಭಿಯಾನ ಆಧುನಿಕ ವೈದ್ಯಕೀಯ ವ್ಯವಸ್ಥೆ ವಿರುದ್ಧ ನಿಂದನೆಯನ್ನು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು.
ʻಸಂಸ್ಥೆ ತಯಾರಿಸುವ ಮತ್ತು ಮಾರಾಟ ಮಾಡುವ ಉತ್ಪನ್ನಗಳ ಜಾಹೀರಾತು ಅಥವಾ ಬ್ರ್ಯಾಂಡಿಂಗ್‌ಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಉಲ್ಲಂಘಿಸುವುದಿಲ್ಲ. ತನ್ನ ಔಷಧಿಗಳ ಪರಿಣಾಮಕಾರಿತ್ವವನ್ನು ಹೇಳಿಕೊಳ್ಳುವ ಅಥವಾ ಯಾವುದೇ ಔಷಧ ವ್ಯವಸ್ಥೆ ವಿರುದ್ಧ ಪ್ರಾಸಂಗಿಕ ಹೇಳಿಕೆಗಳನ್ನು ಯಾವುದೇ ರೂಪದಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಿಲ್ಲ,ʼ ಎಂದು ನವೆಂಬರ್ 21, 2023 ರಲ್ಲಿ ಪತಂಜಲಿ ಆಯುರ್ವೇದವನ್ನು ಪ್ರತಿನಿಧಿಸುವ ವಕೀಲರು ನೀಡಿರುವ ಭರವಸೆಯನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ಪತಂಜಲಿ ಅಂತಹ ಭರವಸೆಗೆ ಬದ್ಧವಾಗಿರಬೇಕಿದೆ ಎಂದು ಕೋರ್ಟ್ ಹೇಳಿದೆ.
ನಿರ್ದಿಷ್ಟ ಭರವಸೆಯನ್ನು ಈಡೇರಿಸದೆ ಇರುವುದು ಮತ್ತು ಆನಂತರ ಸಂಸ್ಥೆ ನೀಡಿದ ಹೇಳಿಕೆಗಳು ಸುಪ್ರೀಂ ಕೋರ್ಟ್ ನ್ನು ಕೆರಳಿಸಿತು. ಸಂಸ್ಥೆ ಮೇಲೆ ಏಕೆ ನಿಂದನೆ ಪ್ರಕ್ರಿಯೆ ಪ್ರಾರಂಭಿಸಬಾರದು ಎಂಬ ಕಾರಣ ಕೇಳಿ ನೋಟಿಸ್ ನೀಡಿತ್ತು.