ತುರ್ತುಪರಿಸ್ಥಿತಿಯ ಉಲ್ಲೇಖವನ್ನು ತಪ್ಪಿಸಬಹುದಿತ್ತು: ರಾಹುಲ್
x
ನವದೆಹಲಿಯಲ್ಲಿ ಗುರುವಾರ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ.

ತುರ್ತುಪರಿಸ್ಥಿತಿಯ ಉಲ್ಲೇಖವನ್ನು ತಪ್ಪಿಸಬಹುದಿತ್ತು: ರಾಹುಲ್


ನವದೆಹಲಿ, ಜೂನ್ 27- ಸ್ಪೀಕರ್ ಓಂ ಬಿರ್ಲಾ ಅವರನ್ನು ಗುರುವಾರ ಭೇಟಿ ಮಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಸ್ಪೀಕರ್ ತುರ್ತುಪರಿಸ್ಥಿತಿ ಬಗ್ಗೆ ಮಾಡಿದ ಉಲ್ಲೇಖಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇದು ಸ್ಪಷ್ಟ ರಾಜಕೀಯ ಮತ್ತು ಇದನ್ನು ತಪ್ಪಿಸಬಹುದಿತ್ತು ಎಂದು ಹೇಳಿದರು.

ಸಂಸತ್ ಭವನದಲ್ಲಿ ನಡೆದ ಸಭೆ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ .ವೇಣುಗೋಪಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಸೌಜನ್ಯದ ಭೇಟಿ. ಈ ಸಂದರ್ಭದಲ್ಲಿ ಸ್ಪೀಕರ್ ಅವರು ತುರ್ತು ಪರಿಸ್ಥಿತಿ ಕುರಿತು ಮಾಡಿದ ಉಲ್ಲೇಖವನ್ನು ರಾಹುಲ್‌ ಅವರು ಪ್ರಸ್ತಾಪಿಸಿದ್ದಾರೆ,ʼ ಎಂದರು.

ʻಇದು ಸೌಜನ್ಯದ ಭೇಟಿ. ಸ್ಪೀಕರ್ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಘೋಷಿಸಿದರು; ಆನಂತರ ಇಂಡಿಯ ಒಕ್ಕೂಟದ ನಾಯಕರೊಂದಿಗೆ ಸ್ಪೀಕರ್ ಅವರನ್ನು ಭೇಟಿ ಮಾಡಿದರು,ʼ ಎಂದು ಹೇಳಿದರು.

ʻಸದನದಲ್ಲಿ ತುರ್ತುಪರಿಸ್ಥಿತಿ ಬಗ್ಗೆ ಮಾಡಿದ ಉಲ್ಲೇಖವನ್ನು ಪ್ರಸ್ತಾಪಿಸಲಾಯಿತೇ?ʼ ಎಂಬ ಪ್ರಶ್ನೆಗೆ ವೇಣುಗೋಪಾಲ್, ʻಸಂಸತ್ತಿನ ಕಾರ್ಯ ನಿರ್ವಹಣೆ ಬಗ್ಗೆ ಹಲವು ವಿಷಯಗಳನ್ನು ಚರ್ಚಿಸಿದ್ದೇವೆ. ಸಹಜವಾಗಿ, ಈ ವಿಷಯವೂ ಪ್ರಸ್ತಾಪವಾಯಿತು.ಸ್ಪೀಕರ್ ಈ ಉಲ್ಲೇಖವನ್ನು ತಪ್ಪಿಸಬಹುದಿತ್ತು ಎಂದು ರಾಹುಲ್‌ ಹೇಳಿದರು,ʼ ಎಂದರು.

ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಬಳಿಕ ಬಿರ್ಲಾ, ತುರ್ತುಪರಿಸ್ಥಿತಿ ಪ್ರಧಾನಿ ಇಂದಿರಾಗಾಂಧಿ ಅವರು ಸಂವಿಧಾನದ ಮೇಲೆ ನಡೆ ಸಿದ ದಾಳಿ ಎಂದು ಖಂಡಿಸುವ ನಿರ್ಣಯವನ್ನು ಬುಧವಾರ ಓದಿ ಬಿರುಗಾಳಿ ಎಬ್ಬಿಸಿದ್ದರು. ಹೇಳಿಕೆಗೆ ಕಾಂಗ್ರೆಸ್ ಸದಸ್ಯರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.

ರಾಹುಲ್‌ ಗಾಂಧಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡ ನಂತರ ಸ್ಪೀಕರ್ ಜೊತೆ ಮೊದಲ ಭೇಟಿ ಇದಾಗಿದೆ. ಅವರ ಜೊತೆಗೆ ಎಸ್‌ಪಿಯ ಧರ್ಮೇಂದ್ರ ಯಾದವ್, ಡಿಎಂಕೆಯ ಕನಿಮೋಳಿ, ಶಿವಸೇನೆಯ (ಎಸ್‌ಪಿ) ಸುಪ್ರಿಯಾ ಸುಳೆ ಮತ್ತು ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಇನ್ನಿತರರು ಇದ್ದರು.

Read More
Next Story