Record-Breaking Year for Indian Agriculture: Foodgrain Production Hits All-Time High in 2024–25
x

ಸಾಂದರ್ಭಿಕ ಚಿತ್ರ

ದೇಶದ ಕೃಷಿ ವಲಯದಲ್ಲಿ ಸುವರ್ಣಾಧ್ಯಾಯ: ಆಹಾರ ಧಾನ್ಯ ಉತ್ಪಾದನೆಯಲ್ಲಿ ಸಾರ್ವಕಾಲಿಕ ದಾಖಲೆ

2024-25ನೇ ಸಾಲಿನಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆಯು 357.73 ದಶಲಕ್ಷ ಟನ್‌ಗಳಿಗೆ ತಲುಪಿದೆ. ಕಳೆದ 2023-24ನೇ ಸಾಲಿನಲ್ಲಿ ಈ ಪ್ರಮಾಣ 332.30 ದಶಲಕ್ಷ ಟನ್‌ಗಳಷ್ಟಿತ್ತು.


Click the Play button to hear this message in audio format

ಭಾರತದ ಕೃಷಿ ಕ್ಷೇತ್ರವು ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ್ದು, 2024-25ನೇ ಸಾಲಿನಲ್ಲಿ ದೇಶದ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹಿಂದೆಂದೂ ಕಾಣದಂತಹ ಅಭೂತಪೂರ್ವ ಏರಿಕೆ ಕಂಡುಬಂದಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಅಂತಿಮ ಅಂದಾಜು ವರದಿಯ ಪ್ರಕಾರ, ದೇಶದಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆಯು ಹೊಸ ದಾಖಲೆಯನ್ನು ಬರೆದಿದೆ.

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಡುಗಡೆ ಮಾಡಿದ ವರದಿಯಂತೆ, 2024-25ನೇ ಸಾಲಿನಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆಯು 357.73 ದಶಲಕ್ಷ ಟನ್‌ಗಳಿಗೆ ತಲುಪಿದೆ. ಕಳೆದ 2023-24ನೇ ಸಾಲಿನಲ್ಲಿ ಈ ಪ್ರಮಾಣ 332.30 ದಶಲಕ್ಷ ಟನ್‌ಗಳಷ್ಟಿತ್ತು. ಅಂದರೆ ಒಂದೇ ವರ್ಷದಲ್ಲಿ ಉತ್ಪಾದನೆಯಲ್ಲಿ ಸುಮಾರು ಶೇ.8ರಷ್ಟು (25.43 ದಶಲಕ್ಷ ಟನ್) ಭರ್ಜರಿ ಏರಿಕೆಯಾಗಿದೆ. ಇದು ದೇಶದ ಕೃಷಿ ಇತಿಹಾಸದಲ್ಲೇ ಒಂದು ಮಹತ್ವದ ಸಾಧನೆಯಾಗಿದೆ.

ದಶಕದ ಸಾಧನೆ: 106 ದಶಲಕ್ಷ ಟನ್ ಹೆಚ್ಚಳ

ಕಳೆದ ಹತ್ತು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ಭಾರತದ ಕೃಷಿ ವಲಯದ ಪ್ರಗತಿ ಸ್ಪಷ್ಟವಾಗುತ್ತದೆ. 2015-16ರಲ್ಲಿ ದೇಶದ ಆಹಾರ ಧಾನ್ಯ ಉತ್ಪಾದನೆ 251.54 ದಶಲಕ್ಷ ಟನ್‌ಗಳಷ್ಟಿತ್ತು. ಪ್ರಸ್ತುತ ಇದು 357.73 ದಶಲಕ್ಷ ಟನ್‌ಗಳಿಗೆ ಏರಿಕೆಯಾಗುವ ಮೂಲಕ, ಕಳೆದ ಒಂದು ದಶಕದಲ್ಲಿ ಬರೋಬ್ಬರಿ 106 ದಶಲಕ್ಷ ಟನ್‌ಗಳಷ್ಟು ಅಧಿಕ ಉತ್ಪಾದನೆ ಸಾಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಕೃಷಿ ಪರ ನೀತಿಗಳು ಮತ್ತು ಯೋಜನೆಗಳು ಈ ಪ್ರಗತಿಗೆ ಕಾರಣ ಎಂದು ಸಚಿವರು ಬಣ್ಣಿಸಿದ್ದಾರೆ.

ಭತ್ತ ಮತ್ತು ಗೋಧಿ ಪ್ರಮಾಣ

ದೇಶದ ಪ್ರಮುಖ ಆಹಾರ ಬೆಳೆಗಳಾದ ಭತ್ತ (ಅಕ್ಕಿ) ಮತ್ತು ಗೋಧಿ ಉತ್ಪಾದನೆಯಲ್ಲಿಯೂ ಹೊಸ ದಾಖಲೆ ನಿರ್ಮಾಣವಾಗಿದೆ. 2024-25ನೇ ಸಾಲಿನಲ್ಲಿ ಅಕ್ಕಿ ಉತ್ಪಾದನೆಯು 1,501.84 ಲಕ್ಷ ಟನ್‌ಗಳಿಗೆ ತಲುಪಿದ್ದು, ಕಳೆದ ವರ್ಷಕ್ಕಿಂತ (1,378.25 ಲಕ್ಷ ಟನ್) 123.59 ಲಕ್ಷ ಟನ್‌ಗಳಷ್ಟು ಹೆಚ್ಚಾಗಿದೆ. ಅದೇ ರೀತಿ, ಗೋಧಿ ಉತ್ಪಾದನೆಯು 1,179.45 ಲಕ್ಷ ಟನ್‌ಗಳಿಗೆ ಏರಿಕೆಯಾಗಿದ್ದು, ಕಳೆದ ವರ್ಷದ 1,132.92 ಲಕ್ಷ ಟನ್‌ಗಳಿಗೆ ಹೋಲಿಸಿದರೆ 46.53 ಲಕ್ಷ ಟನ್‌ಗಳಷ್ಟು ಹೆಚ್ಚಳ ದಾಖಲಿಸಿದೆ.

ಬೇಳೆಕಾಳುಗಳಲ್ಲಿ ಸ್ವಾವಲಂಬನೆಯತ್ತ

ಸರ್ಕಾರದ 'ಎಣ್ಣೆಕಾಳು ಮಿಷನ್' ಮತ್ತು 'ಬೇಳೆಕಾಳುಗಳ ಸ್ವಾವಲಂಬನೆ ಮಿಷನ್' ಯೋಜನೆಗಳು ನಿರೀಕ್ಷಿತ ಫಲಿತಾಂಶ ನೀಡಿವೆ. ಒಟ್ಟು ಎಣ್ಣೆಕಾಳುಗಳ ಉತ್ಪಾದನೆ 429.89 ಲಕ್ಷ ಟನ್‌ಗಳಿಗೆ ತಲುಪಿದ್ದು, ಕಳೆದ ವರ್ಷಕ್ಕಿಂತ ಶೇ.8ಕ್ಕೂ ಹೆಚ್ಚು ಏರಿಕೆಯಾಗಿದೆ. ವಿಶೇಷವಾಗಿ ಸೋಯಾಬೀನ್ (152.68 ಲಕ್ಷ ಟನ್) ಮತ್ತು ಕಡಲೆಕಾಯಿ (119.42 ಲಕ್ಷ ಟನ್) ಉತ್ಪಾದನೆಯಲ್ಲಿ ದಾಖಲೆಯ ಪ್ರಗತಿ ಕಂಡುಬಂದಿದೆ. ತೊಗರಿ, ಹೆಸರು, ಮತ್ತು ಕಡಲೆ ಕಾಳುಗಳ ಉತ್ಪಾದನೆಯಲ್ಲೂ ಗಮನಾರ್ಹ ಹೆಚ್ಚಳವಾಗಿದ್ದು, ಇದು ಆಮದು ಅವಲಂಬನೆಯನ್ನು ತಗ್ಗಿಸುವಲ್ಲಿ ಸಹಕಾರಿಯಾಗಲಿದೆ.

ಸಿರಿಧಾನ್ಯ ಮತ್ತು ವಾಣಿಜ್ಯ ಬೆಳೆಗಳ ಪ್ರಗತಿ

ಪೌಷ್ಟಿಕಾಂಶದ ಕಣಜ ಎಂದೇ ಕರೆಯಲ್ಪಡುವ ಸಿರಿಧಾನ್ಯಗಳ ಉತ್ಪಾದನೆಯು 185.92 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಮೆಕ್ಕೆಜೋಳದ ಉತ್ಪಾದನೆಯೂ 434.09 ಲಕ್ಷ ಟನ್‌ಗಳಿಗೆ ತಲುಪಿದೆ. ವಾಣಿಜ್ಯ ಬೆಳೆಗಳಾದ ಕಬ್ಬು (4,546.11 ಲಕ್ಷ ಟನ್) ಮತ್ತು ಹತ್ತಿ (297.24 ಲಕ್ಷ ಬೇಲ್) ಉತ್ಪಾದನೆಯೂ ಆಶಾದಾಯಕವಾಗಿದೆ.

Read More
Next Story