
ಮನೆ ಖರೀದಿಗಿಂತ ಬಾಡಿಗೆ ಮನೆ ಲೇಸು: ನಿಖಿಲ್ ಕಾಮತ್
ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟು ಹಾಕಿದ ಝೆರೋಧಾ ಸಂಸ್ಥಾಪಕನ ಹೇಳಿಕೆ
ಮನೆಯೊಂದನ್ನು ಖರೀದಿಸುವುದಕ್ಕಿಂತ ಬಾಡಿಗೆ ಮನೆಗೆ ಆದ್ಯತೆ ನೀಡುವುದಾಗಿ ಝೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಹೇಳಿದ್ದು,ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ರಿಯಲ್ ಎಸ್ಟೇಟ್ ಮೌಲ್ಯವನ್ನು ಸುಮ್ಮನೆ ಉಬ್ಬಿಸಲಾಗಿದೆ ಎಂದು ತಾವು ನಂಬಿರುವುದರಿಂದ ಮನೆ ಖರೀದಿಗೆ ಬದಲು ಬಾಡಿಗೆಗೆ ಆದ್ಯತೆ ನೀಡುವುದಾಗಿ ಹೇಳಿದ್ದರು. ಯುವಜನಾಂಗ ಸ್ಥಿರಾಸ್ತಿಗಳನ್ನು ಹೊಂದಲು ಇಚ್ಛಿಸದ ಮತ್ತು ಗೃಹ ಸಾಲದಂತಹ ಆರ್ಥಿಕ ಹೊರೆಗಳಿಂದ ಮುಕ್ತವಾಗಿರಲು ಆದ್ಯತೆ ನೀಡುತ್ತಿದ್ದ ಕಾಲವೊಂದಿತ್ತು. ಆದರೆ, ಸಾಂಕ್ರಾಮಿಕದ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವುದು ಹೊಸ ರೂಢಿಯಾದಾಗ ಮಿಲೇನಿಯಲ್‌ಗಳು ತಮ್ಮ ಆದ್ಯತೆಗಳನ್ನು ಪುನರ್ವಿಮರ್ಶಿಸಲು ಪ್ರಾರಂಭಿಸಿದರು. ರಿಯಲ್ ಎಸ್ಟೇಟ್ ನಲ್ಲಿ ಆಸಕ್ತಿ ಹೆಚ್ಚಳಗೊಂಡು, ಉತ್ತಮ ಸಂಪರ್ಕ ಹೊಂದಿರುವ ಮತ್ತು ಉತ್ತಮ ಹೂಡಿಕೆಯಾದ ವಿಶಾಲ ಆಸ್ತಿ ಬಗ್ಗೆ ಆಸಕ್ತಿ ಹೆಚ್ಚಿದ್ದನ್ನು ರಿಯಲ್ ಎಸ್ಟೇಟ್ ಡೆವಲಪರ್ ಗಳು ಬಳಸಿಕೊಂಡರು ಎಂದು ತಜ್ಞರು ಹೇಳುತ್ತಾರೆ.
ಆದರೆ, ನಿಖಿಲ್ ವಿಭಿನ್ನವಾಗಿ ಯೋಚಿಸುತ್ತಾನೆ. ಪ್ರಿಂಟ್‌ಗೆ ನೀಡಿದ ಸಂದರ್ಶನದಲ್ಲಿ 37 ವರ್ಷ ವಯಸ್ಸಿನ ಅವರು, ಪ್ರಸ್ತುತ ಮೌಲ್ಯಮಾಪನ ರೀತಿಗಳು ಹಾಸ್ಯಾಸ್ಪದ ಮತ್ತು ಹಿಂದುಳಿದಿವೆ ಎಂದು ಹೇಳುತ್ತಾರೆ. ತಾವು ಆಸ್ತಿಯನ್ನು ಖರೀದಿಸುವುದಿಲ್ಲ. ಬಡ್ಡಿ ದರ ಹೀಗಿರುವಾಗ, ಮನೆ ಮತ್ತು ಕಚೇರಿಗಳ ದರ ಹೆಚ್ಚಾಗುವುದರಲ್ಲಿ ಅರ್ಥವಿಲ್ಲ ಎಂದು ಹೇಳುತ್ತಾರೆ.
ತಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಸನಿಹದಲ್ಲಿ ಅದು ಬದಲಾಗಲಿದೆ ಎಂದು ಅವರು ಭಾವಿಸುವುದಿಲ್ಲ.ಅವರ ಮನೆಯಲ್ಲಿ ಪೋಷಕರು ವಾಸಿಸುತ್ತಿದ್ದಾರೆ ಮತ್ತು ಭಾವನಾತ್ಮಕ ಕಾರಣಗಳಿಗಾಗಿ ಅದನ್ನು ಉಳಿಸಿಕೊಂಡಿರುವುದಾಗಿ ಹೇಳಿದರು. ಆದರೆ, ಅವರ ಪ್ರಕಾರ ಮನೆಯನ್ನು ಖರೀದಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ, ಅದರಿಂದ ಬರುವ ಬಾಡಿಗೆಯು ಹೂಡಿಕೆಗಿಂತ ಗಮನಾರ್ಹವಾಗಿ ಕಡಿಮೆ ಇರುತ್ತದೆʼ. ವಿಡಿಯೋದಲ್ಲಿನ ಅವರ ವ್ಯಾಖ್ಯಾನಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಬಾಡಿಗೆ ಮನೆಯಲ್ಲಿರುವ ನಿರ್ಧಾರವನ್ನು ಬೆಂಬಲಿಸಿದರೆ, ಇತರರು ಮನೆಯನ್ನು ಖರೀದಿಸುವುದು ದೀರ್ಘಾವಧಿಯಲ್ಲಿ ಹೆಚ್ಚು ಪ್ರಯೋಜನಕಾರಿ ಕ್ರಮ ಎಂದು ಹೇಳಿದರು.
ಬೆಂಗಳೂರಿನ ಕಾಗದ ಸಂಪತ್ತು:
ಬೆಂಗಳೂರಿನ ಸಂಪತ್ತು ಕಾಗದದ ಹಣವೇ ಹೊರತು ನಿಜವಾದ ಹಣವಲ್ಲ ಎಂದು ಕಾಮತ್ ಗೇಲಿ ಮಾಡಿದರು. 2023 ರ ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅವರ ಪ್ರಕಾರ, ಬೆಂಗಳೂರು ಕಾಗದದ ಸಂಪತ್ತನ್ನು ಹೆಚ್ಚು ಹೊಂದಿದೆ ಮತ್ತು ಕಡಿಮೆ ಖರ್ಚು ಮಾಡಬಹುದಾದ ಸಂಪತ್ತನ್ನು ಹೊಂದಿದೆ. ಟೆಕ್ ಕಂಪನಿಗಳಲ್ಲಿ ಕೆಲಸ ಮಾಡುವವರು, ಸ್ಟಾಕ್ ಆಯ್ಕೆಗಳು ಮತ್ತು ಇತರ ಕಾಗದದ ರೂಪದ ಸಂಪತ್ತು ಹೊಂದಿದ್ದಾರೆ. ಕಾಗದದ ಹಣವು ಸಂಪತ್ತಿನ ಭ್ರಮೆಯನ್ನು ಹುಟ್ಟಿಸುತ್ತದೆ ಎಂದು ಹೇಳಿದರು.
ಆರ್ಥಿಕ ಸ್ವಾತಂತ್ರ್ಯಕ್ಕಾಗಿ ದುರಾಸೆ: ಆರ್ಥಿಕ ಸ್ವಾವಲಂಬನೆಯ ಕನಸು ಹೊಂದಿದ್ದ ಕಾಮತ್, 10ನೇ ತರಗತಿ ನಂತರ ಶಾಲೆ ಬಿಟ್ಟರು. 17 ನೇ ವಯಸ್ಸಿನಲ್ಲಿ ಕಾಲ್ ಸೆಂಟರ್ ನಲ್ಲಿ ಸೇರಿಕೊಂಡು, ಸಂಪಾದಿಸಲು ಪ್ರಾರಂಭಿಸಿದರು. ಅವರ ಮೊದಲ ಸಂಬಳ 8,000 ರೂ. ಆದರೆ, ಸ್ನೇಹಿತರು ಕಾಲೇಜಿನಿಂದ ಪದವಿ ಪಡೆದಾಗ ಮತ್ತು ಮೊದಲ ಉದ್ಯೋಗಕ್ಕೆ ಸೇರಿದಾಗ, ತಾನು ʻವಿಚಲಿತನಾದೆʼ ಎಂದು ಸಂದರ್ಶನದಲ್ಲಿ ಹೇಳಿದರು. ಎಲ್ಲರಿಗೂ ಅವಕಾಶ ನೀಡುವ ಉದ್ಯೋಗದ ಸುತ್ತಲಿನ ಸಾಮಾಜಿಕ ಕಳಂಕದ ಬಗ್ಗೆ ಅವರು ಮಾತನಾಡಿದರು.
ಕಾಲ್ ಸೆಂಟರ್ ಉದ್ಯೋಗಕ್ಕೆ ಪದವಿ ಅಥವಾ ನಿರ್ದಿಷ್ಟ ಪರಿಣತಿ ಅಥವಾ ಪ್ರಾವೀಣ್ಯತೆ ಅಗತ್ಯವಿಲ್ಲ. ಕಾಲ್ ಸೆಂಟರ್‌ನಲ್ಲಿ ತಿಂಗಳಿಗೆ 1 ಲಕ್ಷ ರೂ. ಗಳಿಸಿದರೂ, ತಿಂಗಳಿಗೆ 25,000 ರೂ. ಗಳಿಸುವ ವೈದ್ಯರಿಗೆ ಹೆಚ್ಚು ಸಾಮಾಜಿಕ ಸ್ವೀಕಾರಾರ್ಹತೆ ಸಿಗುತ್ತದೆ. ಆದ್ದರಿಂದ, ಅವರ ಸಹಪಾಠಿಗಳು ವೈದ್ಯರು ಅಥವಾ ಇಂಜಿನಿಯರ್ ಆದಾಗ, ʻಸ್ವಲ್ಪ ವಿಚಲಿತನಾದೆʼ ಎಂದು ಒಪ್ಪಿಕೊಂಡರು.