Ranveer Allahbadia: ಅಲ್ಲಾಬಾದಿಯಾ ಅಶ್ಲೀಲ ಮಾತು, ಸಂಸತ್​​ನಲ್ಲೂ ಚರ್ಚೆ, ಹಲವೆಡೆ ಎಫ್​ಐಆರ್​
x
ರಣವೀರ್ ಅಲ್ಲಾಬಾಡಿಯಾ.

Ranveer Allahbadia: ಅಲ್ಲಾಬಾದಿಯಾ ಅಶ್ಲೀಲ ಮಾತು, ಸಂಸತ್​​ನಲ್ಲೂ ಚರ್ಚೆ, ಹಲವೆಡೆ ಎಫ್​ಐಆರ್​

Ranveer Allahbadia: ಹಲವು ಸಂಸದರು ರಣವೀರ್ ವಿರುದ್ಧ ದೂರು ಸಲ್ಲಿಸಿದ್ದು, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿ ರಣವೀರ್‌ಗೆ ಸಮನ್ಸ್ ಜಾರಿ ಮಾಡಲಿದೆ.


ನವದೆಹಲಿ: ಜನಪ್ರಿಯ ವಿಡಿಯೊ ಕಾರ್ಯಕ್ರಮ "ಇಂಡಿಯಾಸ್ ಗಾಟ್ ಟ್ಯಾಲೆಂಟ್"ನಲ್ಲಿ ನೈತಿಕತೆಯ ಎಲ್ಲ ಸೀಮೆಗಳನ್ನು ಮೀರಿ ಪೋಷಕರ ಲೈಂಗಿಕತೆಯ ಬಗ್ಗೆ ಮಾತನಾಡಿದ್ದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾಗೆ(Ranveer Allahbadia) ಹಲವಾರು ಸಂಕಷ್ಟಗಳು ಎದುರಾಗಿವೆ. ರಣವೀರ್ ಹೇಳಿಕೆಗೆ ಬಗ್ಗೆ ವ್ಯಾಪಕ ಆಕ್ರೋಶ ಭುಗಿಲೆದ್ದಿದ್ದು ಮಂಗಳವಾರ ಈ ವಿವಾದವು ಸಂಸತ್​ನಲ್ಲೂ ಚರ್ಚೆಯಾಯಿತು. .

ಹಲವು ಸಂಸದರು ರಣವೀರ್ ವಿರುದ್ಧ ದೂರು ಸಲ್ಲಿಸಿದ್ದು, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿ ರಣವೀರ್‌ಗೆ ಸಮನ್ಸ್ ಜಾರಿ ಮಾಡಲಿದೆ. ಹಾಗೇನಾದರೂ ಆದರೆ ರಣವೀರ್‌ ಸಂಸದೀಯ ಸಮಿತಿ ಮುಂದೆ ಹಾಜರಾಗಿ ತನಿಖೆ ಎದುರಿಸಬೇಕಾಗುತ್ತದೆ.

ಶಿವಸೇನೆ ಉದ್ಧವ್ ಠಾಕ್ರೆ ಬಣದ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರೂ ಸಂಸತ್‌ನಲ್ಲಿ ಈ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. "ಹಾಸ್ಯದ ಹೆಸರಲ್ಲಿ ಮಿತಿ ಮೀರಿದ ಅವಹೇಳನಕಾರಿ ಭಾಷೆ ಬಳಕೆ ಯಾವ ಕಾರಣಕ್ಕೂ ಒಪ್ಪಲಾಗದು. ವೇದಿಕೆ ಸಿಕ್ಕಿತು ಎಂದಾಕ್ಷಣ ಏನು ಬೇಕಿದ್ದರೂ ಮಾತನಾಡಬಹುದು ಎಂದರ್ಥವಲ್ಲ. ಅಲ್ಲದೇ ರಣವೀರ್ ಕೋಟ್ಯಂತರ ಚಂದಾದಾರರನ್ನುಹೊಂದಿರುವ ವ್ಯಕ್ತಿ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ರಣವೀರ್‌ಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸ್ಥಾಯಿ ಸಮಿತಿ ಸದಸ್ಯೆಯಾಗಿ ಈ ವಿಚಾರವನ್ನು ನಾನು ಖಂಡಿತಾ ಎತ್ತುತ್ತೇನೆ" ಎಂದಿದ್ದಾರೆ.

ಮುಂಬೈ, ಗುವಾಹಟಿಯಲ್ಲಿ ಎಫ್ಐಆರ್

ರಣವೀರ್ ವಿರುದ್ಧ ಮುಂಬೈ ಮತ್ತು ಗುವಾಹಟಿಯಲ್ಲಿ ಎಫ್​ಐಆರ್​​ ದಾಖಲಾಗಿದೆ. ರಣವೀರ್ ಮಾತ್ರವಲ್ಲದೆ ಇಂಡಿಯಾಸ್ ಗಾಟ್ ಟ್ಯಾಲೆಂಟ್‌ ಶೋದಲ್ಲಿರುವ ಸಮಯ್ ರೈನಾ, ಅಪೂರ್ವ ಮಖೀಜಾ ಸೇರಿದಂತೆ ಇತರರ ವಿರುದ್ಧವೂ ದೂರು ದಾಖಲಿಸಲಾಗಿದೆ. ಇನ್ನೊಂದೆಡೆ ಅಶ್ಲೀಲತೆಗೆ ಪ್ರಚೋದನೆ ನೀಡಿರುವ ಆರೋಪದಲ್ಲಿ ರಣವೀರ್, ಆಶಿಷ್ ಚಂಚ್ಲಾನಿ, ಜಸ್ ಪ್ರೀತ್ ಸಿಂಗ್, ಮಖೀಜಾ, ರೈನಾ ಮತ್ತಿತರರ ವಿರುದ್ಧ ರಾಜ್ಯ ಪೊಲೀಸರು ಎಫ್ಐಆರ್ ದಾಖಲಿಸಿರುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಏನಿದು ವಿವಾದ?

ಕಾರ್ಯಕ್ರಮದ ವಿಡಿಯೋ ತುಣುಕೊಂದು ಇತ್ತೀಚೆಗೆ ವೈರಲ್ ಆಗಿತ್ತು. ಅದರಲ್ಲಿ ಸ್ಪರ್ಧಿಯೊಬ್ಬರಿಗೆ ರಣವೀರ್ ಅಲ್ಲಾಬಾಡಿಯಾ, "ನೀವು ನಿಮ್ಮ ಬದುಕಿನುದ್ದಕ್ಕೂ ನಿಮ್ಮ ಪೋಷಕರು ಪ್ರತಿದಿನ ರಾತ್ರಿ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುತ್ತಾ ಇರುತ್ತೀರಾ ಅಥವಾ ನೀವು ಮಧ್ಯಪ್ರವೇಶಿಸಿ ಶಾಶ್ವತವಾಗಿ ನಿಲ್ಲಿಸಿಬಿಡುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.

ರಣವೀರ್ ಅವರ ನೈತಿಕತೆ ಮೀರಿದ ವರ್ತನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಯಿತು. ಬೆನ್ನಲ್ಲೇ ರಣವೀರ್ ಅವರು ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿ ಕ್ಷಮೆ ಯಾಚಿಸಿದ್ದಾರೆ. ಆದರೆ, ಅದನ್ನು ಜನರು ಪರಿಗಣಿಸಿಲ್ಲ. ರಣವೀರ್ ಇನ್ ಸ್ಟಾಗ್ರಾಂನಲ್ಲಿ 45 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದು, ಯೂಟ್ಯೂಬ್‌ನಲ್ಲಿ 1.05 ಕೋಟಿ ಚಂದಾದಾರರಿದ್ದಾರೆ.

Read More
Next Story