ಹೊಸೂರು ರಸ್ತೆಯಲ್ಲಿ ಆರಂಭವಾಗಲಿದೆ ರಾಮೇಶ್ವರಂ ಕೆಫೆ: ಇದು ಮಾಮೂಲಿ ಹೋಟೆಲ್‌ ಅಲ್ಲ!
x

ಹೊಸೂರು ರಸ್ತೆಯಲ್ಲಿ ಆರಂಭವಾಗಲಿದೆ ರಾಮೇಶ್ವರಂ ಕೆಫೆ: ಇದು ಮಾಮೂಲಿ ಹೋಟೆಲ್‌ ಅಲ್ಲ!

ದುಬೈ, ಮುಂಬೈ, ಪುಣೆ, ಅಹಮದಾಬಾದ್, ಸೂರತ್‌ನಲ್ಲೂ ಸ್ಥಾಪನೆಯಾಗಲಿದೆ ರಾಮೇಶ್ವರಂ ಕೆಫೆ. ಮಾಲೀಕ ರಾಘವೇಂದ್ರ ರಾವ್‌ ಅವರ ಜತೆ ʼದ ಪೆಡರಲ್‌ʼ ಡೆಪ್ಯೂಟಿ ನ್ಯೂಸ್‌ ಎಡಿಟರ್‌ ರಜನೀಶ್‌ ವಿಲಕುಡಿ ನಡೆಸಿದ ಸಂದರ್ಶನ ಇಲ್ಲಿದೆ.


ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಆಗುವುದಕ್ಕೆ ʼರಾಮೇಶ್ವರಂ ಕೆಫೆʼಯೂ ಕಾರಣ ಎನ್ನುವಷ್ಟು ಜನಪ್ರಿಯತೆ ಪಡೆದಿದೆ ಈ ಹೋಟೆಲ್‌. ಈ ಕೆಫೆಯ ಅಭಿಮಾನಿಗಳು ಮತ್ತು ದೂಷಿಸುವವರು ಎಂಬ ಎರಡು ವರ್ಗವಿದೆ. ಅಭಿಮಾನಿಗಳು ಇಲ್ಲಿನ ದುಬಾರಿ ದರದ ಹೊರತಾಗಿಯೂ ಆಹಾರವನ್ನು ಮೆಚ್ಚಿದರೆ, ಅನೇಕರು "ಮಿತಿಮೀರಿದ ಪ್ರಚಾರ,ʼʼ ಮತ್ತು "ಅತಿಯಾದ ತುಪ್ಪದ ಬಳಕೆ " ಎಂದು ಹೇಳುತ್ತಿದ್ದಾರೆ. ಇವೆಲ್ಲದರ ನಡುವೆಯೂ ಕಡಿಮೆ ಅವಧಿಯಲ್ಲಿ ಈ ರೆಸ್ಟೋರೆಂಟ್‌ ಮಾಡಿರುವ ಸಾಧನೆ ಮೆಚ್ಚಲೇಬೇಕು. ಕೇವಲ ನಾಲ್ಕು ವರ್ಷಗಳಲ್ಲಿ ಐದು ಶಾಖೆಗಳು ಆರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಅದು ದೇಶದ ಗಡಿ ಮೀರಿ ಹೋಗುವ ನಿರೀಕ್ಷೆಯಿದೆ.

ಬೆಂಗಳೂರಿನಲ್ಲಿ ಸಿಟಿಆರ್, ವಿದ್ಯಾರ್ಥಿ ಭವನ (ಅದರ ಮಾಲೀಕರು ಒಂದೇ ಶಾಖೆಗೆ ದೃಢವಾಗಿ ಅಂಟಿಕೊಂಡಿದ್ದಾರೆ) ಮತ್ತು 100 ವರ್ಷ ಹಳೆಯ ಎಂಟಿಆರ್ ( ದೇಶ, ವಿದೇಶಗಳಲ್ಲಿ ಅನೇಕ ಶಾಖೆಗಳಿವೆ) ನಂಥ ಪಾರಂಪರಿಕ ರೆಸ್ಟೋರೆಂಟ್‌ಗಳ ನಡುವೆ ರಾಮೇಶ್ವರಂ ಕೆಫೆ ಯಶಸ್ಸು ಗಳಿಸಿದ್ದು ದೊಡ್ಡ ಸಂಗತಿಯೇ ಹೌದು. ಇದೀಗ ರಾಮೇಶ್ವರಂ ಕೆಫೆಯವರ ಹೆದ್ದಾರಿ ಶಾಖೆಯೊಂದು ತೆರೆಯಲಿದೆ ಎಂಬುದೇ ಬಿಸಿ ಬಿಸಿ ಮಸಾಲೆ ದೋಸೆಯಂಥ ಸುದ್ದಿ. ಅದು ಹೊಸೂರು ರಸ್ತೆಯ ಬಳಿ. ಅದು ದೊಡ್ಡ ಯೋಜನೆ.


ಮೆಕ್ಯಾನಿಕಲ್ ಎಂಜಿನಿಯರ್ ರಾಘವೇಂದ್ರ ರಾವ್ ಮತ್ತು ಐಐಎಂ ಅಹಮದಾಬಾದ್ ವಿದ್ಯಾರ್ಥಿನಿ ದಿವ್ಯಾ ರಾವ್‌ ಅವರು ನಡೆಸುವ ರಾಮೇಶ್ವರಂ ಕೆಫೆ ಕಳೆದ ಮಾರ್ಚ್‌ನಲ್ಲಿ ದೇಶಾದ್ಯಂತ ಸುದ್ದಿಯಾಗಿತ್ತು. ಅದಕ್ಕೆ ಕಾರಣ ಬೆಂಗಳೂರಿನ ವೈಟ್‌ಫೀಲ್ಡ್‌ ಶಾಖೆಯಲ್ಲಿ ನಡೆದ ಸ್ಫೋಟ.


ರಾಘವೇಂದ್ರ ರಾವ್‌ ಅವರು ʼದ ಫೆಡರಲ್‌ನ ಡೆಪ್ಯೂಟಿ ನ್ಯೂಸ್‌ ಎಡಿಟರ್‌ ರಜನೀಶ್‌ ವಿಲಕುಡಿ ಅವರನ್ನು ಭೇಟಿಯಾದ ವೇಳೆ ತಿಳಿಸಿದ ಕೆಲವು ಸಂಗತಿಗಳು ಸಂದರ್ಶನ ರೂಪದಲ್ಲಿ ಇಲ್ಲಿ ನೀಡಲಾಗಿದೆ.

ರಾಘವೇಂದ್ರ ರಾವ್: ಆ ಸ್ಫೋಟದ ಭಯಾನಕ ಘಟನೆಯ ನಂತರ ನಮ್ಮ ಭದ್ರತಾ ವ್ಯವಸ್ಥೆಯನ್ನು ನವೀಕರಿಸಿದ್ದೇವೆ. ಇನ್ನೂ ಒಳ್ಳೆಯ ಸುದ್ದಿಯೆಂದರೆ ನಾವು ಮುಂದೆ ಸಾಗಿದ್ದೇವೆ ಮತ್ತು ನಮ್ಮ ಆಹಾರ, ಮೆನು ಮತ್ತು ಸ್ಥಳಗಳೊಂದಿಗೆ ಮತ್ತಷ್ಟು ಪ್ರಯೋಗ ಮಾಡುತ್ತಿದ್ದೇವೆ. ಇಡೀ ದಕ್ಷಿಣ ಭಾರತವನ್ನು ಪ್ರತಿನಿಧಿಸುವುದು ಮತ್ತು ಭಾರತೀಯ ಮತ್ತು ಜಾಗತಿಕ ಖಾದ್ಯಗಳನ್ನು ಪೂರೈಸುವುದು ನಮ್ಮ ಉದ್ದೇಶ" ʼದ ಫೆಡರಲ್‌ʼ ಜತೆ ಮಾತನಾಡುತ್ತಾ ರಾಘವೇಂದ್ರ ರಾವ್ ಅವರು ಹೇಳುತ್ತಾರೆ.

ಇಂದಿರಾನಗರ 100 ಅಡಿ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತಿದ್ದು ಇಲ್ಲಿನ ಜನರು ರುಚಿಕರ ಭಕ್ಷ್ಯಗಳನ್ನು ಸವಿಯಲು ಬರಲಿದ್ದಾರೆ ಎಂಬುದು ಅವರು ವಿಶ್ವಾಸ .

ತುಪ್ಪದ ಬಳಕೆ ಅತಿಯಾಯಿತು ಮತ್ತು ಈ ಕುರಿತ ಟ್ರೋಲ್‌ಗೆ ಏನು ಹೇಳುತ್ತೀರಿ?

ರಾಘವೇಂದ್ರ ರಾವ್: (ನಗುವೇ ಮೊದಲ ಉತ್ತರ). ಟ್ರೋಲ್ ಗಳ ಬಗ್ಗೆ ನನಗೆ ತಿಳಿದಿದೆ. ನಾವು ನಮ್ಮ ಗ್ರಾಹಕರಿಂದ ಪ್ರತಿಕ್ರಿಯೆ ಪಡೆಯುತ್ತೇವೆ. ಹೌದು, ತುಪ್ಪವನ್ನು ಉದಾರವಾಗಿ ಬಳಸುವುದು ನಮ್ಮ ಪ್ರಜ್ಞಾಪೂರ್ವಕ ನಿರ್ಧಾರ. ಅದಕ್ಕೊಂದು ಕಾರಣವಿದೆ.

ನಮ್ಮ ಪೂರ್ವಜರನ್ನು ನೋಡಿದರೆ, ಅವರು ಹೆಚ್ಚಾಗಿ ತುಪ್ಪ ಮತ್ತು ಸಾಂಪ್ರದಾಯಿಕ ಎಣ್ಣೆಗಳಾದ ಎಳ್ಳು ಅಥವಾ ತೆಂಗಿನ ಎಣ್ಣೆಯನ್ನು ಅಡುಗೆಗೆ ಬಳಸುತ್ತಿದ್ದರು. ನಮ್ಮ ಮನೆಯಲ್ಲೂ ತುಪ್ಪವನ್ನು ಬಳಸದೆ ಇರುವ ದಿನವೇ ಇಲ್ಲ. ನಾವು ಏನನ್ನು ತಿನ್ನುತ್ತೇವೆ ಮತ್ತು ನಂಬುತ್ತೇವೆಯೋ ಅದನ್ನೇ ನಾವು ಬಡಿಸುತ್ತೇವೆ.



ಸಂಸ್ಕರಿಸಿದ ತೈಲವನ್ನು ಬಳಸದಿರಲು ನಾವು ನಿರ್ಧರಿಸಿದ್ದೇವೆ. ತುಪ್ಪವು ಆ ಅರ್ಥದಲ್ಲಿ ಆರೋಗ್ಯಕರ. ಜೊತೆಗೆ ಅದು ನೀಡುವ ರುಚಿಯೂ ಅಪಾರ. ನಾವು ನಮ್ಮ ಪಲ್ಯಗಳಿಗೆ ತೆಂಗಿನ ಎಣ್ಣೆಯನ್ನು (ಕೇರಳದಿಂದ ತಂದು) ಬಳಸುತ್ತೇವೆ . ನಾವು ದೇಶದ ಅತ್ಯುತ್ತಮವಾದ ನಂದಿನಿ ತುಪ್ಪವನ್ನು ಮಾತ್ರ ಬಳಸುತ್ತೇವೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಂತರ ನಾವು ನಂದಿನಿಯ ಅತಿದೊಡ್ಡ ಖರೀದಿದಾರರು.

ಬಹಿರಂಗಪಡಿಸಲು ಸಾಧ್ಯವಾದರೆ, ನೀವು ಪ್ರತಿದಿನ ಎಷ್ಟು ತುಪ್ಪ ಬಳಸುತ್ತೀರಿ?

ರಾಘವೇಂದ್ರ ರಾವ್: ಸಾಸಿವೆಯಿಂದ ಹಿಟ್ಟಿನವರೆಗೆ, ಎಣ್ಣೆಯಿಂದ ಮಸಾಲಾದಿಂದ ತುಪ್ಪದವರೆಗೆ ನಾವು ಬಳಸುವ ಪ್ರತಿಯೊಂದು ವಸ್ತುಗಳಿಗೂ ಲೆಕ್ಕ ಇದೆ. ಸುಮಾರು 35-40 ದೋಸೆಗಳಿಗೆ ನಾವು 1 ಲೀಟರ್ ತುಪ್ಪ ಬಳಸುತ್ತೇವೆ. ಆದರೆ, ಪ್ರತಿಯೊಂದು ಹನಿಯೂ ಲೆಕ್ಕಕ್ಕೆ ಸಿಗುವುದಿಲ್ಲ.

ನಾಲ್ಕು ವರ್ಷಗಳಲ್ಲಿ ಹೈದರಾಬಾದ್ ಸೇರಿದಂತೆ ಐದು ಶಾಖೆಗಳು. ನಿಮ್ಮ ಯಶಸ್ಸನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಅಪಾರ ಕಠಿಣ ಪರಿಶ್ರಮ + ಸ್ಮಾರ್ಟ್ ಕಾರ್ಯಾಚರಣೆಗಳು + ತಾಜಾ ಆಹಾರ. ಮಾಲೀಕರಾಗಿ, ನಾವು ಪ್ರತಿದಿನ ಸುಮಾರು 17-18 ಗಂಟೆಗಳ ಕಾಲ ಕೆಲಸ ಮಾಡುತ್ತೇವೆ. ನಾನು ಆಡಳಿತ ಮತ್ತು ನನ್ನ ಪತ್ನಿ ಹಣಕಾಸು ವ್ಯವಸ್ಥೆ ನೋಡಿಕೊಳ್ಳುತ್ತಾಳೆ.

ಅಡುಗೆಮನೆ ನನ್ನ ವ್ಯಾಪ್ತಿಗೆ ಸೇರಿದ್ದು.ಪತ್ನಿಗೆ ಅನುಮತಿ ಇಲ್ಲ (ನಗು). ಹಣಕಾಸಿನ ವಿಷಯಕ್ಕೆ ಬಂದಾಗ ಆಕೆ ಉಸ್ತುವಾರಿ ವಹಿಸುತ್ತಾಳೆ. ನಾವು ಪಾಳಿಗಳಲ್ಲಿ 24x7 ಕೆಲಸ ಮಾಡುವ ತಂಡ ಹೊಂದಿದ್ದೇವೆ. ಮಿತಿ ಮೀರಿ ಯಾರಲ್ಲಿಯೂ ಕೆಲಸ ಮಾಡಿಸುವುದಿಲ್ಲ. ನಾವು ಅನೇಕ ಕಾರ್ಯಗಳಿಗಾಗಿ ವಿಭಿನ್ನ ತಂಡಗಳನ್ನು ಸ್ಥಾಪಿಸಿದ್ದೇವೆ. ಉದಾಹರಣೆಗೆ, 'ಡೀಪ್ ಕ್ಲೀನಿಂಗ್' ಗಾಗಿ ರೆಸ್ಟೋರೆಂಟ್ ಅನ್ನು ಒಂದು ಗಂಟೆ ಮುಚ್ಚುತ್ತೇವೆ ಮತ್ತು ಅದನ್ನು ನಿರ್ವಹಿಸಲೆಂದೇ ಒಂದು ತಂಡವಿದೆ.

ಕರ್ನಾಟಕ ಸರ್ಕಾರ 24x7 ರೆಸ್ಟೋರೆಂಟ್‌ಗಳಿಗೆ ಅನುಮತಿ ನೀಡಿದರೆ, ಹೋಟೆಲ್‌ ತೆರೆಯುವಿರಾ?

ಖಂಡಿತವಾಗಿಯೂ, ನಾವು ಯಾವಾಗಲೂ 24x7 ಹೋಟೆಲ್‌ ತೆರೆದಿಡಲು ಬಯಸುತ್ತೇವೆ. ಪೊಲೀಸ್ ಇಲಾಖೆ ಇನ್ನೂ ಅಂತಿಮ ಅನುಮೋದನೆ ನೀಡಬೇಕಾಗಿದೆ. ನಮ್ಮ ಸಂಘವು ಮಾತುಕತೆ ನಡೆಸುತ್ತಿದೆ.

ಇದನ್ನು ಸುಲಭವಾಗಿ ಮಾಡಬಹುದು, ಮತ್ತು ಎಲ್ಲಾ ಮಳಿಗೆಗಳನ್ನು 24x7, 365 ದಿನಗಳು ತೆರೆಯಲು ಸಾಧ್ಯವಿದೆ. ನಮ್ಮ ಹೋಟೆಲ್‌ಗಳಿಗೆ ಬಾಗಿಲುಗಳಿಲ್ಲ. ಯಾವಾಗ ಬೇಕಾದರೂ ಒಳಗೆ ಹೋಗಿ ತಾಜಾ ಆಹಾರ ಸೇವಿಸಬಹುದು.

ಮುಂಜಾನೆ 3-4 ಗಂಟೆಗೆ ಜನ ಬರುತ್ತಾರೆ ಎಂಬ ನಂಬಿಕೆ ಇದೆಯೇ?

ನಗರದ ವೈವಿಧ್ಯತೆ ನೋಡಿದರೆ ಅದು ಸಾಧ್ಯವಿದೆ. ನಮ್ಮ ಕೆಲವು ಗ್ರಾಹಕರು ಅಂತಾರಾಷ್ಟ್ರೀಯ ಪ್ರಯಾಣಿಕರು. ಅವರಿಗೆ ರಾತ್ರಿ ಹಗಲೆನ್ನುವುದು ಇಲ್ಲ.

ನಾವು ಬೆಳಿಗ್ಗೆ 5 ಗಂಟೆಗೆ ತೆರೆದಾಗ ಕೆಲಸ ಮುಗಿಸಿ ಮನೆಗೆ ಹೋಗುವ ಮಂದಿ ಇರುತ್ತಾರೆ. 12ರ ನಂತರ ಯುವ ಜನಸಮೂಹವು ದೋಸೆ ಅಥವಾ ಪೊಂಗಲ್‌ ತಿಂದು ಕಾಫಿ ಕುಡಿದು ಮಾತು ಕತೆ ನಡೆಸುವುದನ್ನು ನಿರೀಕ್ಷಿಸಬಹುದು.

ನಿಮ್ಮ ಹೋಟೆಲ್‌ಗೆ ಒಮ್ಮೆ ಬಂದವರು ಮತ್ತೆ ಬರುತ್ತಾರಾ?

ಮತ್ತೆ ಮತ್ತೆ ಬರುವ ಗ್ರಾಹಕರೇ ನಮ್ಮ ಶಕ್ತಿ. ಯಾವುದೇ ಹೋಟೆಲ್ ವ್ಯವಹಾರಕ್ಕೆ, ಅದು ಅತ್ಯಗತ್ಯ. ನೀವು ನಿಮ್ಮ ಗ್ರಾಹಕರನ್ನು ಮರಳಿ ಬರುವಂತೆ ಮಾಡಬೇಕು. ವೈಟ್ ಫೀಲ್ಡ್ ನಲ್ಲಿ ಯುವ ಜೋಡಿಗಳು ಹೆಚ್ಚಿದ್ದರೆ ರಾಜಾಜಿನಗರಲ್ಲಿ ಕುಟುಂಬದ ಜತೆ ಬರುವವರಿದ್ದಾರೆ. ಇಂದಿರಾನಗರ ಮತ್ತು ಜೆಪಿ ನಗರ ಇದರ ಮಿಶ್ರಣ.

ನೀವು ಕೇಂದ್ರೀಕೃತ ಅಡುಗೆಮನೆ ಹೊಂದಿಲ್ಲ, ಪ್ರತಿ ಶಾಖೆಯುಲ್ಲಿ ನಿಮ್ಮ ಸ್ಥಿರತೆ ಹೇಗಿರುತ್ತದೆ?

ಪ್ರತಿ ರೆಸ್ಟೋರೆಂಟ್ ಅಡುಗೆಮನೆಯನ್ನು ಹೊಂದಿರಬೇಕು. ಅಲ್ಲಿ ಆಹಾರವನ್ನು ಹೊಸದಾಗಿ ತಯಾರಿಸಿ ಬಡಿಸಬೇಕು ಎಂಬುದೇ ನಮ್ಮ ನಿರ್ಧಾರ. ಪ್ರತಿ 30 ನಿಮಿಷಗಳಿಗೊಮ್ಮೆ ಚಟ್ನಿಗಳನ್ನು ಪುಡಿ ಮಾಡುತ್ತೇವೆ. ಹಿಟ್ಟಿನ ವಿಷಯದಲ್ಲೂ ತಾಜಾತನ ಇದ್ದೇ ಇದೆ.

ನಮ್ಮಂತಹ ಕ್ಷಿಪ್ರ ಸೇವೆಯ ಔಟ್ಲೆಟ್‌ನಲ್ಲಿ ಯಾವುದೇ ತಂತ್ರಜ್ಞಾನ ಬಳಸಿದರೂ ಮಾನವನ ನೆರವು ಬೇಕೇಬೇಕು. ಹೀಗಾಗಿ ನಾವು ಆಹಾರ ಬೇಯಿಸಿ 5 ಗಂಟೆಗಳ ನಂತರ ಬಡಿಸುವುದಿಲ್ಲ.ಇಂದಿನ ತಿನಿಸು ನಾಳೆ ಕೊಡುವುದಿಲ್ಲ. ಅಳತೆಗೆ ತಕ್ಕ ಹಾಗೆ ಮಾಡುತ್ತೇವೆ. ಉಳಿದ ಆಹಾರವನ್ನು ಸರಿಯಾಗಿ ನಿರ್ವಹಣೆ ಮಾಡುತ್ತೇವೆ.


ಪ್ರತಿ ಮಳಿಗೆಗೆ ನಮ್ಮ ಹೂಡಿಕೆ ಸುಮಾರು 15 ಕೋಟಿ ರೂಪಾಯಿ. ನಮ್ಮ ಒಟ್ಟು ಸ್ಥಳದ ಕೇವಲ ಶೇಕಡಾ 30 ಮಾತ್ರ ಊಟಕ್ಕಾಗಿ ಮೀಸಲಿಡಲಾಗಿದೆ. ಉಳಿದವು ಲಾಜಿಸ್ಟಿಕ್ಸ್, ಅಡುಗೆ ಮತ್ತು ಸಂಗ್ರಹಣೆಗಾಗಿದೆ. ನಾವು ರಾಜಿ ಮಾಡಿಕೊಂಡಿದ್ದರೆ ನಾನು ಇನ್ನಷ್ಟು ಜಾಗವನ್ನು ತಿಂಡಿ ತಿನ್ನಲೆಂದೇ ಬಳಸಬಹುದಾಗಿತ್ತು.

ಜನರು ನೆಲದ ಮೇಲೆ ಅಥವಾ ಮೆಟ್ಟಿಲುಗಳ ಮೇಲೆ ಕುಳಿತು ಆಹಾರವನ್ನು ಸೇವಿಸುವುದನ್ನು ನೋಡುವುದು ತಮಾಷೆ ಎನಿಸುವುದಿಲ್ಲವೇ?

ಜನರು ಸಾಂಪ್ರದಾಯಿಕ ರೀತಿಯಲ್ಲಿ ಆಹಾರ ಸೇವಿಸಬೇಕು ಎಂಬುದು ನಮ್ಮ ಬಯಕೆ. ಕುಳಿತುಕೊಂಡು ಮಾತನಾಡುತ್ತಾ ತಿನ್ನಬೇಕು. ಈ ಪರಿಕಲ್ಪನೆ ಸ್ವಲ್ಪ ಮಟ್ಟಿಗೆ ದೈವಾರ್ಪಣೆಯಂತಿದೆ. ನಮ್ಮ ಕಲ್ಪನೆಯನ್ನು ಜನ ಸ್ವೀಕರಿಸಿದ್ದಾರೆ.

ಇತರ ರಾಜ್ಯಗಳಿಂದ ಹೆಚ್ಚಿನ ಭಕ್ಷ್ಯಗಳನ್ನು ಸೇರಿಸುವ ಮೂಲಕ ನೀವು ನಿಮ್ಮ ಮೆನುವಿನಲಿ ಪ್ರಯೋಗ ಮಾಡುವಂತಿದೆ.

ಇತ್ತೀಚೆಗೆ, ನಾವು ದಕ್ಷಿಣದ ಎಲ್ಲಾ ರಾಜ್ಯಗಳ ಭಕ್ಷ್ಯಗಳನ್ನು ಸೇರಿಸಿಕೊಂಡು ಥಾಲಿಯನ್ನು ಸಿದ್ಧಪಡಿಸಿದ್ದೇವೆ. (ಇದನ್ನು ಅನ್ನ ಲಕ್ಷ್ಮಿ ಎಂದು ಕರೆಯಲಾಗುತ್ತದೆ) ದೋಸೆಯನ್ನು ತಮಿಳುನಾಡು ಸಾಂಬಾರ್ ಮತ್ತು ಕರ್ನಾಟಕ ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ನಾವು ಕೇರಳ ಕಡಲ ಕರಿಯನ್ನೂ (ಕಪ್ಪು ಕಡಲೆ) ಸೇರಿಸಿದ್ದೇವೆ. ಖಾಲಿ ದೋಸೆಗೆ ಚೆನ್ನಾಗಿ ಹೊಂದುತ್ತದೆ . ಪೂತರೇಕುಲು ಆಂಧ್ರದ ಪ್ರಸಿದ್ಧ ಸಿಹಿತಿಂಡಿ ಮತ್ತು ಇತ್ತೀಚೆಗೆ ಮಲೆನಾಡು ತಂಬುಳಿಯೂ ಸೇರಿದೆ.

ನಮ್ಮ ಥಾಲಿಯಲ್ಲಿ ಎಲ್ಲಾ ದಕ್ಷಿಣ ರಾಜ್ಯಗಳ 20+ ಐಟಂಗಳಿವೆ. ಉಪ್ಪಿಟ್ಟು /ಖಾರಾ ಬಾತ್‌ಗೆ ಕರ್ನಾಟಕ ಅತ್ಯುತ್ತಮವಾಗಿದ್ದರೆ, ತಮಿಳುನಾಡು ಪೊಂಗಲ್ ಗೆ ಸೋಲೇ ಇಲ್ಲ. ನೀರ್ ಚಟ್ನಿಯೊಂದಿಗೆ ಕರ್ನಾಟಕ ಶೈಲಿಯ ತರಿ ಇಡ್ಲಿಯೂ ನೆಚ್ಚಿನದು. ಜನರು ಬೆಳಿಗ್ಗೆ ತರಿ ಇಡ್ಲಿ (ರವೆ), ರಾತ್ರಿ ಸಾಮಾನ್ಯ ಇಡ್ಲಿ (ತಟ್ಟೆ) ಇಷ್ಟಪಡುತ್ತಾರೆ. ನಾವು ಅಂತಹ ಮಾದರಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತೇವೆ. ಖಾದ್ಯವನ್ನು ಪರಿಚಯಿಸುವ ಮೊದಲು, ನಮ್ಮ 500 ಸದಸ್ಯರ ತಂಡವು ಅದರ ಬಗ್ಗೆ ಸರಣಿ ಚರ್ಚೆಗಳನ್ನು ನಡೆಸುತ್ತದೆ.

ನಿಮ್ಮ ಹೈದರಾಬಾದ್ ಶಾಖೆಯ ಕತೆಯೇನು? ಮುಂದೇನು?

ನಾವು ಹೊಸ ಪ್ರದೇಶಗಳಿಗೆ ವಿಸ್ತರಿಸುತ್ತಿದ್ದೇವೆ. ಪ್ರತಿಯೊಂದು ರಾಜ್ಯವನ್ನು ಒಳಗೊಳ್ಳುವ ದೊಡ್ಡ ದಕ್ಷಿಣದ ಭಾರತದ ಆಹಾರವನ್ನು ನೀಡುವುದು ನಮ್ಮ ಉದ್ದೇಶ. ನಾನು ಅಂಬಾನಿ ಕುಟುಂಬದ ಮದುವೆಗೆ (ರಾಮೇಶ್ವರಂ ಕೆಫೆ ಸೌತ್ ಫುಡ್ ಕೌಂಟರ್ ನಡೆಸುತ್ತಿತ್ತು) ಇದ್ದಾಗ ನಮ್ಮ ಆಹಾರಕ್ಕೆ ದೊರೆತ ಪ್ರತಿಕ್ರಿಯೆಯನ್ನು ನೋಡಿ ಖುಷಿಯಾಯಿತು. ಕಳೆದ ಕೆಲವು ದಶಕಗಳಿಂದ ದಕ್ಷಿಣದ ಪಾಕಪದ್ಧತಿಯ ಬಗ್ಗೆ ಜಾಗತಿಕವಾಗಿ ಆಸಕ್ತಿ ಹೆಚ್ಚುತ್ತಿದೆ.

ದುಬೈ ಖಂಡಿತವಾಗಿಯೂ ನಮ್ಮ ಗುರಿಯಲ್ಲಿದೆ. ಮುಂಬೈ ಮತ್ತು ಪುಣೆಯ ಬಗ್ಗೆಯೂ ಉತ್ಸುಕರಾಗಿದ್ದೇವೆ. ಗುಜರಾತ್ (ಅಹಮದಾಬಾದ್, ಸೂರತ್) ನಾವು ಹೊಂದಿರುವ ಯೋಜನೆಯಾಗಿದೆ. ಬೆಂಗಳೂರಿನಲ್ಲಿ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಒಂದು ತಿಂಗಳಲ್ಲಿ ತೆರೆಯುತ್ತದೆ) ಮತ್ತು ಹೆಣ್ಣೂರು ರಸ್ತೆಯಲ್ಲಿ ಎರಡು ಹಾಗೂ ಹೊಸೂರು ರಸ್ತೆಯಲ್ಲಿಯೂ ಹೋಟೆಲ್‌ ಆರಂಭವಾಗಲಿದೆ.

ಹಾಗಾದರೆ ಅದು ಮೊದಲ ಹೆದ್ದಾರಿ ಶಾಖೆಯೇ ?

ಹೌದು, ಇದು ಒಂದು ಬೃಹತ್ ಯೋಜನೆ ಮತ್ತು ನಾವೆಲ್ಲರೂ ಅದರ ಬಗ್ಗೆ ಉತ್ಸುಕರಾಗಿದ್ದೇವೆ. ಇದು ನಾವು ಇಲ್ಲಿಯವರೆಗೆ ಮಾಡಿದ್ದಕ್ಕಿಂತ ಸಂಪೂರ್ಣ ಭಿನ್ನ. ಒಂದು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಇದು ಹಗಲಿನಲ್ಲಿ 10,000 ಕ್ಕೂ ಹೆಚ್ಚು ಜನರಿಗೆ ಸ್ಥಳಾವಕಾಶ ಕಲ್ಪಿಸುವ ಬೃಹತ್ ಊಟದ ಸ್ಥಳ ಹೊಂದಿರುತ್ತದೆ.

ಹಳೆಯ ದಿನಗಳಂತೆ ಜನರು ನೆಲದ ಮೇಲೆ ಕುಳಿತುಕೊಳ್ಳಲು ಮತ್ತು ಬಾಳೆ ಎಲೆಯ ಊಟವನ್ನು ಬಡಿಸಲು ದೊಡ್ಡ ಸಭಾಂಗಣವನ್ನು ಸ್ಥಾಪಿಸುವಂತಹ ಅನೇಕ ಆಲೋಚನೆಗಳಿವೆ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಸ್ಥಳಾವಕಾಶವಿದೆ. ಇದು ಹೊಸ ಪ್ರಯೋಗವಾಗಿದೆ. ನಿರ್ಮಾಣ ನಡೆಯುತ್ತಿದೆ ಇದು ನಮ್ಮ ಅತಿದೊಡ್ಡ ಯೋಜನೆ.

ಕರ್ನಾಟಕದ ಹೊರಗಡೆ ಹೋಟೆಲ್‌ ಪ್ರಾರಂಭಿಸುವಾಗ ದೊರೆತ ಅನುಭವ ಹೇಗಿತ್ತು? ಅಲ್ಲಿನ ಜನರ ರುಚಿಯೇ ಬೇರೆಯಾಗಿರುವಾಗ

ಇದು ಒಂದು ಸವಾಲು. ಮತ್ತು ನಾವು ಮೆನುವನ್ನು ಸ್ವಲ್ಪ ಬದಲಾಯಿಸಿದ್ದೇವೆ. ಕುತೂಹಲಕಾರಿಯಾಗಿ, ನಾವು ಮಸಾಲೆ ಪ್ರಮಾಣ ಹೆಚ್ಚಿಸಬೇಕಾಗಿತ್ತು. ನಾವು ಬೆಂಗಳೂರಿನಲ್ಲಿ 100 ಗ್ರಾಂ ಮೆಣಸಿನ ಪುಡಿಯನ್ನು ಪಲ್ಯಕ್ಕೆ ಹಾಕಿದರೆ, ಅದು ಅಲ್ಲಿ 400 ಗ್ರಾಂ ಬೇಕಾಗುತ್ತದೆ. ನಾವು ಕೆಲವು ನೂರು ಕಿಲೋಮೀಟರ್ ಪ್ರಯಾಣಿಸುವಾಗ ಆಹಾರ ಪದ್ಧತಿ ಬದಲಾಗುತ್ತದೆ. ಆ ನಿರೀಕ್ಷೆಗಳನ್ನು ಹೊಂದಿಸುವುದು ದೊಡ್ಡ ಸವಾಲು. ನಮ್ಮಂತಹ ಅಪಾಯಕಾರಿ ವ್ಯವಹಾರದಲ್ಲಿ, ಪ್ರತಿ ದಿನವೂ ಸವಾಲು.

Read More
Next Story