ರಾಮಕೃಷ್ಣ ಮಿಷನ್ ಮುಖ್ಯಸ್ಥ ಸ್ವಾಮಿ ಸ್ಮರಣಾನಂದ ನಿಧನ
ಮಾ.26- ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಅವರು ವಯೋಸಹಜ ಕಾಯಿಲೆಗಳಿಂದ ಮಂಗಳವಾರ ರಾತ್ರಿ ನಿಧನರಾದರು.
ಸ್ಮರಣಾನಂದ(94) ಅವರು ಸ್ವಾಮಿ ವಿವೇಕಾನಂದರಿಂದ ಸ್ಥಾಪಿಸಲ್ಪಟ್ಟ ರಾಮಕೃಷ್ಣ ಮಿಷನ್‌ನ 16 ನೇ ಅಧ್ಯಕ್ಷರಾಗಿದ್ದರು. ʻರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ನ ಅಧ್ಯಕ್ಷ ಮಹಾರಾಜ್ ಅವರು ಇಂದು ರಾತ್ರಿ 8.14 ಕ್ಕೆ ಮಹಾಸಮಾಧಿಯನ್ನುಸೇರಿದರುʼ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಜನವರಿ 29 ರಂದು ಕೋಲ್ಕತ್ತಾದ ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನಕ್ಕೆ ದಾಖಲಿಸಲಾಯಿತು. ಆನಂತರ ಉಸಿರಾಟದ ಸಮಸ್ಯೆಯಿಂದಾಗಿ ಮಾರ್ಚ್ 3 ರಂದು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಧಾನಿ ಶ್ರದ್ಧಾಂಜಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಮರಣಾನಂದ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಎಕ್ಸ್ ನ ಪೋಸ್ಟ್‌ನಲ್ಲಿ ಪ್ರಧಾನಿ,ʻ ಅವರು ಅಸಂಖ್ಯಾತ ಹೃದಯಗಳು ಮತ್ತು ಮನಸ್ಸಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರ ಸಹಾನುಭೂತಿ ಮತ್ತು ಬುದ್ಧಿವಂತಿಕೆಯು ಮುಂದಿನ ಪೀಳಿಗೆಗೂ ಸ್ಫೂರ್ತಿ ನೀಡಲಿದೆ. ನಾನು ಬೇಲೂರು ಮಠಕ್ಕೆ ಭೇಟಿ ನೀಡಿದ್ದೇನೆ. ಕೆಲವು ವಾರಗಳ ಹಿಂದೆ ಕೋಲ್ಕತ್ತಾದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದ್ದೆʼ ಎಂದಿದ್ದಾರೆ.
ʻಜಗತ್ತಿನಾದ್ಯಂತ ಲಕ್ಷಾಂತರ ಭಕ್ತರಿಗೆ ಸಾಂತ್ವನದ ಮೂಲವಾಗಿ ಉಳಿಯುತ್ತಾರೆ. ರಾಮಕೃಷ್ಣ ಪರಮಹಂಸರ ಹಿಂಬಾಲಕರಿಗೆ ಅಧ್ಯಾತ್ಮಿಕ ನಾಯಕತ್ವವನ್ನು ನೀಡಿದ್ದಾರೆʼ ಎಂದು ಸಿಎಂ ಹೇಳಿದರು.
ಬುಧವಾರ ರಾತ್ರಿ 9 ಗಂಟೆಗೆ ಹೌರಾದ ಬೇಲೂರು ಮಠದ ಪ್ರಧಾನ ಕಚೇರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ರಾಮಕೃಷ್ಣ ಮಿಷನ್ ತಿಳಿಸಿದೆ.