
ವಕ್ಫ್ (ತಿದ್ದುಪಡಿ) ಮಸೂದೆ 2025 ಗೆ ರಾಜ್ಯಸಭೆಯಲ್ಲೂ ಅಂಗೀಕಾರ; ರಾಷ್ಟ್ರಪತಿ ಅಂಕಿತವಷ್ಟೇ ಬಾಕಿ
ರಾಜ್ಯಸಭೆಯಲ್ಲಿ ಈ ಮಸೂದೆಯ ಮೇಲೆ 14 ಗಂಟೆಗಳಿಗೂ ಹೆಚ್ಚು ಕಾಲ ತೀವ್ರ ಚರ್ಚೆ ನಡೆಯಿತು. ಇದು ಗುರುವಾರದಿಂದ ಶುಕ್ರವಾರ ಮುಂಜಾನೆ 4 ಗಂಟೆಯವರೆಗೆ ಮುಂದುವರಿಯಿತು.
ಸಂಸತ್ತಿನ ಎರಡೂ ಸದನಗಳಲ್ಲಿ ಎರಡು ದಿನಗಳ ಕಾಲ ನಡೆದ ಬಿಸಿಬಿಸಿ ಚರ್ಚೆಯ ನಂತರ, ವಕ್ಫ್ ಆಸ್ತಿಗಳ ನಿಯಂತ್ರಣ ಮತ್ತು ವಿವಾದಗಳ ಇತ್ಯರ್ಥದಲ್ಲಿ ವ್ಯಾಪಕ ಬದಲಾವಣೆಗಳನ್ನು ತರುವ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಗೆ ಶುಕ್ರವಾರ ಬೆಳಗಿನ ಜಾವ ರಾಜ್ಯಸಭೆಯಲ್ಲಿ ಬಹುಮತದಿಂದ ಅನುಮೋದನೆ ನೀಡಿತು.
ಮಸೂದೆಯನ್ನು ರಾಜ್ಯಸಭೆಯಲ್ಲಿ 128 ಸದಸ್ಯರು ಪರವಾಗಿ ಮತ್ತು 95 ಸದಸ್ಯರು ವಿರೋಧಿಸಿ ಮತ ಚಲಾಯಿಸುವ ಮೂಲಕ ಅಂಗೀಕರಿಸಿದರು.
ಗುರುವಾರ ಲೋಕಸಭೆಯಲ್ಲೂ ಮಸೂದೆಗೆ ಅನುಮೋದನೆ ದೊರೆತಿದ್ವು, ಗುರುವಾರ ಮುಂಜಾನೆ ಲೋಕಸಭೆಯಲ್ಲಿ ಇದನ್ನು ಅಂಗೀಕರಿಸಲಾಗಿತ್ತು. 288 ಸದಸ್ಯರು ಇದನ್ನು ಬೆಂಬಲಿಸಿದರು ಮತ್ತು 232 ಸದಸ್ಯರು ವಿರೋಧಿಸಿದರು. ಇದರಿಂದ ವಕ್ಫ್ ಮಸೂದೆಗೆ ಸಂಸತ್ತು ಒಪ್ಪಿಗೆ ನೀಡಿದಂತಾಗಿದ್ದು, ಇನ್ನು ರಾಷ್ಟ್ರಪತಿ ಅಂಕಿತವಷ್ಟೇ ಬಾಕಿ ಇದೆ.
ರಾಜ್ಯಸಭೆಯಲ್ಲಿ, ಅಂಗೀಕಾರವಾಗುವ ಮೊದಲು, ಇದು ವಿರೋಧ ಪಕ್ಷಗಳ ಒಗ್ಗಟ್ಟಿನಲ್ಲಿ ಬಹಿರಂಗ ಬಿರುಕು ವ್ಯಕ್ತವಾಯಿತು. ಎರಡು ಎನ್‌ಡಿಎ ಅಲ್ಲದ ಪಕ್ಷಗಳು ನಿಲುವಿನಲ್ಲಿ ಬದಲಾವಣೆಯನ್ನು ಸೂಚಿಸಿದವು. ಮಸೂದೆಯನ್ನು ವಿರೋಧಿಸಿದ ಬಿಜೆಡಿ ತನ್ನ ವಿಪ್ ಅನ್ನು ಹಿಂತೆಗೆದುಕೊಂಡಿತು ಮತ್ತು "ನ್ಯಾಯ, ಸಾಮರಸ್ಯ ಮತ್ತು ಎಲ್ಲಾ ಸಮುದಾಯಗಳ ಹಕ್ಕುಗಳ ಹಿತದೃಷ್ಟಿಯಿಂದ" ತಮ್ಮ ಆತ್ಮಸಾಕ್ಷಿಯ ಪ್ರಕಾರ ಮತ ಚಲಾಯಿಸಲು ತನ್ನ ಸಂಸದರಿಗೆ ಹೇಳಿತು. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಕೂಡ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿಲ್ಲ ಎಂದು ಹೇಳಿದೆ.
ಚರ್ಚೆಯು ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪಣೆಗಳನ್ನು ಕಂಡಿತು, ಇದು ಮಸೂದೆಯನ್ನು "ಮುಸ್ಲಿಂ ವಿರೋಧಿ" ಮತ್ತು "ಅಸಂವಿಧಾನಿಕ" ಎಂದು ಕರೆದಿದೆ. ಸರ್ಕಾರವು "ಐತಿಹಾಸಿಕ ಸುಧಾರಣೆ" ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರತಿಕ್ರಿಯಿಸಿತು.
ಮಸೂದೆಯ ಪ್ರಮುಖ ಅಂಶಗಳು
ಹೊಸ ಮಸೂದೆ ಪ್ರಕಾರ, ಜಿಲ್ಲಾಧಿಕಾರಿಗಳು ವಕ್ಫ್ ಆಸ್ತಿಗಳ ಸಮೀಕ್ಷೆ ನಡೆಸುತ್ತಾರೆ. ಇದರಿಂದ ವಕ್ಫ್ ಬೋರ್ಡ್ಗಳ ಅತಿಯಾದ ಅಧಿಕಾರ ಇಲ್ಲವಾಗುತ್ತದೆ. ವಕ್ಫ್ ಮಂಡಳಿಗಳಲ್ಲಿ ಎರಡು ಮುಸ್ಲಿಮೇತರ ಸದಸ್ಯರು ಮತ್ತು ಕೇಂದ್ರ ವಕ್ಫ್ ಕೌನ್ಸಿಲ್‌ನಲ್ಲಿ ಗರಿಷ್ಠ ನಾಲ್ಕು ಮುಸ್ಲಿಮೇತರ ಸದಸ್ಯರು (ಇಬ್ಭರು ಮಹಿಳೆಯರು ಸೇರಿದಂತೆ) ಕಡ್ಡಾಯವಾಗಿ ಇರುತ್ತಾರೆ. ಆಸ್ತಿಯನ್ನು ವಕ್ಫ್ ಎಂದು ಘೋಷಿಸುವ ಮಂಡಳಿಗಳ ನೇರ ಅಧಿಕಾರವನ್ನು ತೆಗೆದುಹಾಕಲಾಗುತ್ತದೆ. ಆಸ್ತಿ ನೋಂದಣಿಗಾಗಿ ಕೇಂದ್ರೀಕೃತ ಪೋರ್ಟಲ್ ಸ್ಥಾಪನೆ ಮತ್ತು ತಂತ್ರಜ್ಞಾನದ ಬಳಕೆ ಮಾಡಲಾಗುತ್ತದೆ. ವರ್ಷಕ್ಕೆ 1 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಗಳಿಸುವ ವಕ್ಫ್ ಸಂಸ್ಥೆಗಳಿಗೆ ರಾಜ್ಯ-ಪ್ರಾಯೋಜಿತ ಆಡಿಟ್ ಕಡ್ಡಾಯವಾಗಿರುತ್ತದೆ.
ಸರ್ಕಾರದ ಸಮರ್ಥನೆ
ಗೃಹ ಸಚಿವ ಅಮಿತ್ ಶಾ ಮಸೂದೆ ಕುರಿತು ಮಾತನಾಡಿ, "ಈ ಮಸೂದೆಯು ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಹೊಂದಿಲ್ಲ, ಇದು ಆಡಳಿತ ಸುಧಾರಣೆ ಮತ್ತು ಪಾರದರ್ಶಕತೆಗಾಗಿ ಮಾತ್ರ" ಎಂದು ಒತ್ತಿ ಹೇಳಿದ್ದಾರೆ. ಸಚಿವ ರಿಜಿಜು ಅವರು, "ಈ ಮಸೂದೆಯು ಶಿಯಾ, ಸುನ್ನಿ, ಬೋಹ್ರಾ, ಮಹಿಳೆಯರು ಮತ್ತು ಹಿಂದುಳಿದ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡುತ್ತದೆ" ಎಂದು ಸಮರ್ಥಿಸಿಕೊಂಡಿದ್ದಾರೆ. . ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಮಸೂದೆಯ ಅಂಗೀಕಾರವನ್ನು "ಸಾಮಾಜಿಕ-ಆರ್ಥಿಕ ನ್ಯಾಯ, ಸಮಗ್ರ ಬೆಳವಣಿಗೆ ಮತ್ತು ಪಾರದರ್ಶಕತೆಗಾಗಿ ಒಂದು ಮಹತ್ವದ ಕ್ಷಣ" ಎಂದು ಬಣ್ಣಿಸಿದ್ದಾರೆ. .
ವಿರೋಧ ಪಕ್ಷಗಳ ಆಕ್ಷೇಪ
ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಎಂಸಿ ಮತ್ತು ಎಐಎಂಐಎಂ ಸೇರಿದಂತೆ ವಿರೋಧ ಪಕ್ಷಗಳು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಈ ಮಸೂದೆಯು ಸಂವಿಧಾನದ ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಉಲ್ಲಂಘಿಸುತ್ತದೆ" ಎಂದು ಆರೋಪಿಸಿದ್ದಾರೆ. . ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ, "ಇದು ಆರ್ಟಿಕಲ್ 26ರ ಉಲ್ಲಂಘನೆಯಾಗಿದ್ದು, ಮುಸ್ಲಿಮರ ಹಕ್ಕುಗಳನ್ನು ಕಸಿಯುತ್ತದೆ" ಎಂದು ಟೀಕಿಸಿದರು. ಸೋನಿಯಾ ಗಾಂಧಿ ಅವರು ಇದನ್ನು "ಸಂವಿಧಾನದ ಮೇಲಿನ ದಾಳಿ" ಎಂದು ಕರೆದರು.
ಮಸೂದೆಯು ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಗೀಕಾರಕ್ಕಾಗಿ ಕಳುಹಿಸಲಾಗುತ್ತದೆ. ಅವರ ಅಂಗೀಕಾರದ ನಂತರ, ಇದು ಅಧಿಸೂಚನೆಯ ಮೂಲಕ ಕಾನೂನಾಗಿ ಜಾರಿಯಾಗಲಿದೆ.