ರಾಜ್ಯಸಭೆ ಉಪಚುನಾವಣೆ: ಹರಿಯಾಣದಿಂದ ಬಿಜೆಪಿ ಅಭ್ಯರ್ಥಿ ಕಿರಣ್ ಚೌಧರಿ
x

ರಾಜ್ಯಸಭೆ ಉಪಚುನಾವಣೆ: ಹರಿಯಾಣದಿಂದ ಬಿಜೆಪಿ ಅಭ್ಯರ್ಥಿ ಕಿರಣ್ ಚೌಧರಿ


ಚಂಡೀಗಢ: ಹರಿಯಾಣದಿಂದ ರಾಜ್ಯಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಿರಣ್ ಚೌಧರಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.

ವಿಧಾನಸಭೆ ಸಂಕೀರ್ಣದಲ್ಲಿ ಅವರು ನಾಮಪತ್ರ ಸಲ್ಲಿಸಿದಾಗ, ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಹಲವಾರು ಬಿಜೆಪಿ ಶಾಸಕರು ಉಪಸ್ಥಿತರಿದ್ದರು.

ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಅವರು ಪಕ್ಷಾಂತರ ಮಾಡಿದ ಎರಡು ತಿಂಗಳ ನಂತರ, ಅವರನ್ನು ಬಿಜೆಪಿ ಉಪ ಚುನಾವಣೆ ಕಣಕ್ಕೆ ಇಳಿಸಿದೆ. ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲವನ್ನು ಪರಿಗಣಿಸಿದರೆ, ಅವರ ಗೆಲುವು ನಿಶ್ಚಿತ.

ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಅವರು ರೋಹ್ಟಕ್‌ನಿಂದ ಲೋಕಸಭೆಗೆ ಆಯ್ಕೆಯಾದ ನಂತರ, ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕಿದೆ. ಶಾಸಕಿ, ಹರಿಯಾಣದ ಮಾಜಿ ಸಚಿವೆ ಚೌಧರಿ( 69) ಕಳೆದ ಜೂನ್‌ನಲ್ಲಿ ಪುತ್ರಿ ಶ್ರುತಿ ಮತ್ತು ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು. ಅವರು ವಿಧಾನಸಭೆಯಲ್ಲಿ ತೋಷಮ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಒಂಬತ್ತು ರಾಜ್ಯಗಳಲ್ಲಿ ಖಾಲಿ ಇರುವ 12 ರಾಜ್ಯಸಭೆ ಸ್ಥಾನಗಳಿಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನ. ನಾಮಪತ್ರಗಳ ಪರಿಶೀಲನೆ ಆಗಸ್ಟ್ 22 ರಂದು ನಡೆಯಲಿದ್ದು, ಆಗಸ್ಟ್ 27 ರವರೆಗೆ ನಾಮಪತ್ರ ಹಿಂಪಡೆಯಬಹುದು. ಅಗತ್ಯ ಬಿದ್ದರೆ ಸೆಪ್ಟೆಂಬರ್ 3ರಂದು ಹರ್ಯಾಣ ವಿಧಾನಸಭಾ ಸೆಕ್ರೆಟರಿಯೇಟ್ ನಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.

ಚೌಧರಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, 90 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 41, ಕಾಂಗ್ರೆಸ್ 28, ಜೆಜೆಪಿ 10, ಐವರು ಸ್ವತಂತ್ರರು, ಐಎನ್‌ಎಲ್‌ಡಿ ಮತ್ತು ಹರಿಯಾಣ ಲೋಕಿತ್ ಪಾರ್ಟಿ (ಎಚ್‌ಎಲ್‌ಪಿ)ಯ ತಲಾ ಒಬ್ಬರು ಮತ್ತು ನಾಲ್ಕು ಸ್ಥಾನಗಳು ಖಾಲಿ ಇವೆ. ಬಿಜೆಪಿಗೆ ಸ್ವತಂತ್ರ ಶಾಸಕ ನಯನ್ ಪಾಲ್ ರಾವತ್ ಮತ್ತು ಎಚ್‌ಎಲ್‌ಪಿ ಶಾಸಕ ಗೋಪಾಲ್ ಕಾಂಡ ಅವರ ಬೆಂಬಲವಿದೆ. ಮೂವರು ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.

ರಾಜ್ಯಸಭೆ ಸ್ಥಾನಕ್ಕೆ ಪಕ್ಷಕ್ಕೆ ಸಂಖ್ಯಾಬಲ ಇಲ್ಲದ ಕಾರಣ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಈ ಹಿಂದೆ ಹೇಳಿದ್ದರು.

Read More
Next Story