ರಾಜ್‌ಕೋಟ್ ಗೇಮ್ ಝೋನ್ ಬೆಂಕಿ: 4ನೇ ಸಹ ಮಾಲೀಕನ ಬಂಧನ
x
ರಾಜ್‌ಕೋಟ್‌ನ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 27 ಮಂದಿ ಸಾವಿಗೀಡಾಗಿದ್ದಾರೆ.

ರಾಜ್‌ಕೋಟ್ ಗೇಮ್ ಝೋನ್ ಬೆಂಕಿ: 4ನೇ ಸಹ ಮಾಲೀಕನ ಬಂಧನ


ರಾಜ್‌ಕೋಟ್‌ನ ಟಿಆರ್‌ಪಿ ಗೇಮ್ ಝೋನ್ ಮಾಲೀಕರಲ್ಲಿ ಒಬ್ಬರು ಬೆಂಕಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ಕನೇ ಸಹ ಮಾಲೀಕನನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.

ಮೃತರನ್ನು ಪ್ರಕಾಶ್ ಹಿರಾನ್ ಎಂದು ಗುರುತಿಸಲಾಗಿದೆ. ಬೆಂಕಿ ದುರಂತದ ನಂತರ ಸಹೋದರ ಸಂಪರ್ಕಕ್ಕೆ ಸಿಗುತ್ತಿಲ್ಲ. ಫೋನ್ ಸ್ವಿಚ್ ಆಫ್ ಆಗಿದೆ ಮತ್ತು ಅವರ ಕಾರು ಆಟದ ವಲಯದಲ್ಲಿ ಪತ್ತೆಯಾಗಿದೆ ಎಂದು ಸಹೋದರ ಜಿತೇಂದ್ರ ಹಿರಾನ್ ಪೊಲೀಸರಿಗೆ ದೂರು ನೀಡಿದ್ದರು. ಮೇ 25 ರಂದು ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ 27 ಜನರು ಸಾವಿಗೀಡಾಗಿದ್ದಾರೆ.

ವಿಧಿವಿಜ್ಞಾನ ವರದಿಯಿಂದ ಖಚಿತ: ವಿಧಿ ವಿಜ್ಞಾನ ವಿಭಾಗವು ಪ್ರಕಾಶ್ ಅವರ ತಾಯಿಯ ಡಿಎನ್ಎ ಮಾದರಿಯನ್ನು ಪರಿಶೀಲಿಸಿ, ಪ್ರಕಾಶ್ ಹಿರಾನ್ ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿತು. ಜ್ವಾಲೆಯಿಂದ ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ ಮತ್ತು ಮೃತರನ್ನು ಗುರುತಿಸಲು ಅಧಿಕಾರಿಗಳು ಡಿಎನ್‌ಎ ವಿಶ್ಲೇಷಣೆಯನ್ನು ಬಳಸುತ್ತಿದ್ದಾರೆ.

ʻಎಫ್‌ಐಆರ್‌ನಲ್ಲಿ ಹೆಸರಿಸಿದ ಆರು ಜನರಲ್ಲಿ ಒಬ್ಬರಾದ ಪ್ರಕಾಶ್ ಹಿರಾನ್ ಬೆಂಕಿಯಲ್ಲಿ ಮೃತಪಟ್ಟಿದ್ದಾರೆ. ಮೃತರಲ್ಲಿ ಒಬ್ಬರ ಡಿಎನ್ಎ ಮಾದರಿಯು ಹಿರಾನ್ ಅವರ ಕುಟುಂಬದೊಂದಿಗೆ ಹೊಂದಿಕೆಯಾಯಿತು,ʼ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಪ್ರಕಾಶ್ ಹಿರಾನ್ ಅವರು ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಶೇ.60 ರಷ್ಟು ಪಾಲು ಹೊಂದಿದ್ದರು. ಗುಜರಾತ್ ಪೊಲೀಸರ ಎಫ್‌ಐಆರ್‌ನಲ್ಲಿದ್ದ 6 ಆರೋಪಿಗಳಲ್ಲಿ ಒಬ್ಬರು.

ಇನ್ನೊಬ್ಬ ಪಾಲುದಾರ ಬಂಧನ: ಆಟದ ವಲಯವನ್ನು ನಿರ್ವಹಿಸುತ್ತಿದ್ದ ರೇಸ್‌ವೇ ಎಂಟರ್‌ಪ್ರೈಸಸ್‌ನ ಪಾಲುದಾರ ಕಿರಿತ್‌ಸಿನ್ಹ್ ಜಡೇಜಾ ಅವರನ್ನು ಮಂಗಳವಾರ ತಡರಾತ್ರಿ ರಾಜ್‌ಕೋಟ್-ಕಲವಾಡ್ ರಸ್ತೆಯಿಂದ ಬಂಧಿಸಲಾಗಿದೆ ಎಂದು ರಾಜ್‌ಕೋಟ್ ಪೊಲೀಸ್ ಉಪ ಆಯುಕ್ತ (ಅಪರಾಧ) ಪಾರ್ಥರಾಜ್‌ಸಿನ್ಹ್ ಗೋಹಿಲ್ ತಿಳಿಸಿದ್ದಾರೆ.

ಈಮೊದಲು ಧವಲ್ ಠಕ್ಕರ್, ಯುವರಾಜ್‌ ಸಿನ್ಹ್ ಸೋಲಂಕಿ, ರಾಹುಲ್ ರಾಥೋಡ್ ಮತ್ತು ಆಟದ ವಲಯದ ವ್ಯವಸ್ಥಾಪಕ ನಿತಿನ್ ಜೈನ್ ಅವರನ್ನು ಬಂಧಿಸಿದ್ದರು. ಅವರನ್ನು ಎರಡು ವಾರಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಎಸ್‌ಐಟಿ ತನಿಖೆ: ಘಟನೆಯ ತನಿಖೆಗೆ ಗುಜರಾತ್ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) 25 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದೆ ಮತ್ತು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ʻಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಪ್ರಾಥಮಿಕ ತನಿಖೆ ನಡೆಸಿ, ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದೇವೆ,ʼ ಎಂದು ಎಸ್‌ಐಟಿ ಮುಖ್ಯಸ್ಥ ಸುಭಾಷ್ ತ್ರಿವೇದಿ ಹೇಳಿದ್ದಾರೆ. ಈವರೆಗೆ 25 ಶವಗಳನ್ನು ಗುರುತಿಸಿ, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story