ಭಾರಿ ಮಳೆ: ದೆಹಲಿ ಕಂಗಾಲು,ವಿಮಾನ ನಿಲ್ದಾಣದ ಚಾವಣಿ ಕುಸಿದು ವ್ಯಕ್ತಿ ಸಾವು
ಸುರಿದ ಭಾರಿ ಮಳೆಯಿಂದ ದೆಹಲಿಯ ಜನರು ಕಂಗಾಲಾಗಿದ್ದಾರೆ.
ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಚಾವಣಿ ಕುಸಿದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ನಗರದಾದ್ಯಂತ ಮನೆಗಳು ಜಲಾವೃತ ಗೊಂಡು, ವಾಹನಗಳು ಮುಳುಗಿದವು ಮತ್ತು ವ್ಯಾಪಕವಾದ ಟ್ರಾಫಿಕ್ ಜಾಮ್ ನಿಂದ ವಾಹನಗಳು ಮೈಲುಗಟ್ಟಲೆ ನಿಂತಿದ್ದವು.
ಮುಂಜಾನೆ ಮಳೆಯಿಂದ ರಾಜಧಾನಿ ವ್ಯಾಪಕ ಹಾನಿಗೀಡಾಗಿದ್ದು, ಮುಂದಿನ ಸೂಚನೆಯವರೆಗೆ ಟರ್ಮಿನಲ್ 1 ರಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಕಚೇರಿ, ಶಾಲೆ ಅಥವಾ ಕಾಲೇಜಿಗೆ ತೆರಳುತ್ತಿದ್ದ ಸಾವಿರಾರು ಮಂದಿ ಗಂಟೆಗಟ್ಟಲೆ ದಾರಿಯಲ್ಲಿ ಸಿಲುಕಿಕೊಂಡರು.
ಪ್ರಗತಿ ಮೈದಾನದ ಸುರಂಗ ಸೇರಿದಂತೆ ಪ್ರಮುಖ ಸುರಂಗಗಳನ್ನು ಮುಚ್ಚಲಾಗಿದೆ. ಹೌಜ್ ಖಾಸ್, ದಕ್ಷಿಣ ವಿಸ್ತರಣೆ ಮತ್ತು ಮಯೂರ್ ವಿಹಾರ್‌ನ ಎತ್ತರದ ಪ್ರದೇಶಗಳು ಸೇರಿದಂತೆ ನಗರದಾದ್ಯಂತ ಮನೆಗಳಿಗೆ ನೀರು ನುಗ್ಗಿದೆ.
ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಮಾಹಿತಿ ಪ್ರಕಾರ, ಕಳೆದ 20-30 ಗಂಟೆಗಳಲ್ಲಿ ನಗರದ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್‌ನಲ್ಲಿ 228.1 ಮಿಮೀ, ಲೋಧಿ ರಸ್ತೆಯ ಮೌಸಮ್ ಭವನದಲ್ಲಿ 192.8 ಮಿಮೀ, ರಿಡ್ಜ್‌ನಲ್ಲಿ 150.4 ಮಿಮೀ, ಪಾಲಮ್‌ನಲ್ಲಿ 106.6 ಮಿಮೀ ಮತ್ತು ಅಯಾನಗರದಲ್ಲಿ 66.3 ಮಿಮೀ ಮಳೆ ದಾಖಲಾಗಿದೆ.
ಐಎಂಡಿ ಪ್ರಕಾರ, ಒಂದು ದಿನದಲ್ಲಿ 124.5 ಮತ್ತು 244.4 ಮಿಮಿ ನಡುವಿನ ಮಳೆ ಅತಿ ಹೆಚ್ಚು. ಮುಂಗಾರು ಆಗಮಿಸಿದೆ ಎಂದು ಹೇಳಿದ ಬಳಿಕ ಮುಂಜಾನೆ 3 ಗಂಟೆ ಸುಮಾರಿಗೆ ಮಳೆ ಸುರಿಯಲಾರಂಭಿಸಿತು.
ಟರ್ಮಿನಲ್ 1ರಲ್ಲಿ ದುರಂತ: ಟರ್ಮಿನಲ್ 1 ರಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ನಿರ್ಗಮನ ಪ್ರದೇಶದಲ್ಲಿನ ಚಾವಣಿ ಕುಸಿದು, ಹಲವಾರು ಜನರು ಸಿಕ್ಕಿಬಿದ್ದರು ಮತ್ತು ಒಬ್ಬರು ಮೃತಪಟ್ಟರು. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.
ಚಾವಣಿಯಲ್ಲದೆ, ಬೆಂಬಲ ತೊಲೆ ಕುಸಿದು, ಟರ್ಮಿನಲ್‌ನ ಪ್ರಯಾಣಿಕರು ಆಗಮನ ಮತ್ತು ನಿರ್ಗಮನ ಪ್ರದೇಶದಲ್ಲಿ ನಿಲ್ಲಿಸಿದ ಕಾರುಗಳಿಗೆ ಹಾನಿಯಾಗಿದೆ. ಹಾನಿಗೀಡಾದ ವಾಹನಗಳ ಒಳಗೆ ಯಾರೂ ಸಿಲುಕಿಲ್ಲ ಎಂದು ಖಚಿತಪಡಿಸಿಕೊಳ್ಳಲು ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.
ʻಮುಂದಿನ ಸೂಚನೆ ಬರುವವರೆಗೆ ಟರ್ಮಿನಲ್ 1ರಿಂದ ವಿಮಾನ ಕಾರ್ಯಾಚರಣೆ ನಿಲ್ಲಿಸಲಾಗಿದೆ. ವಿಮಾನಗಳ ಸುಗಮ ಕಾರ್ಯಾಚರಣೆಗಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ,ʼ" ಎಂದು ನಾಗರಿಕ ವಿಮಾನಯಾನ ಸಚಿವಾಲಯ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.
ಸಚಿವರಿಂದ ಪರಿಸ್ಥಿತಿಯ ಮೇಲ್ವಿಚಾರಣೆ: ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ʻಟರ್ಮಿನಲ್ 1 ರಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿದ್ದಾರೆ. ಪಾರುಗಾಣಿಕೆ ಕಾರ್ಯಾಚರಣೆ ನಡೆಯುತ್ತಿದೆ,ʼ ಎಂದು ಎಕ್ಸ್ ನಲ್ಲಿ ಹೇಳಿದರು. 1ನೇ ಟರ್ಮಿನಲ್ ನಲ್ಲಿ ಇಂಡಿಗೋ ಮತ್ತು ಸ್ಪೈಸ್‌ಜೆಟ್ ನ ದೇಶಿ ಕಾರ್ಯಾಚರಣೆ ಮಾತ್ರ ನಡೆಯುತ್ತದೆ. ವಿಮಾನ ನಿಲ್ದಾಣದ ಮೂರು ಟರ್ಮಿನಲ್‌ಗಳಿಂದ ಪ್ರತಿದಿನ ಸುಮಾರು 1,400 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ.
ʻಟರ್ಮಿನಲ್ 1 ರ ಹಾನಿಯಿಂದ ವಿಮಾನ ಕಾರ್ಯಾಚರಣೆ ಮೇಲೆ ಪರಿಣಾಮ ಉಂಟಾಗಿದೆ,ʼ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.
ʻಪ್ರಯಾಣಿಕರು ಟರ್ಮಿನಲ್ ಪ್ರವೇಶಿಸಲು ಸಾಧ್ಯವಾಗದ ಕಾರಣ, ವಿಮಾನಗಳನ್ನು ರದ್ದುಗೊಳಿಸಲಾಗುತ್ತಿದೆ. ಈಗಾಗಲೇ ಟರ್ಮಿನಲ್‌ನಲ್ಲಿರುವ ಪ್ರಯಾಣಿಕರು ತಮ್ಮ ಯೋಜಿತ ವಿಮಾನಗಳನ್ನು ಹತ್ತಲು ಸಾಧ್ಯವಾಗುತ್ತದೆ,ʼ ಎಂದು ಇಂಡಿಗೋ ತಿಳಿಸಿದೆ.
ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಸ್ಪೈಸ್‌ಜೆಟ್, ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದೆ. ದುರಂತದಲ್ಲಿ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜಾರ ಘೋಷಿಸಿದ್ದಾರೆ.
ಮೂವರು ಕಾರ್ಮಿಕರು ಸಿಲುಕಿರುವ ಶಂಕೆ: ನೈಋತ್ಯ ದೆಹಲಿಯ ವಸಂತ್ ವಿಹಾರ್ ಪ್ರದೇಶದಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದಿದ್ದು, ಮೂವರು ಕಾರ್ಮಿಕರು ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್) ಅಧಿಕಾರಿಗಳ ಪ್ರಕಾರ, ಬೆಳಗ್ಗೆ 5.30 ಕ್ಕೆ ಗೋಡೆ ಕುಸಿತದ ಬಗ್ಗೆ ಕರೆ ಬಂದಿತು. ಐದು ಅಗ್ನಿಶಾಮಕ ಟೆಂಡರ್‌ಗಳನ್ನು ಕಳಿಸಲಾಯಿತು. ಮೂವರು ಕಾರ್ಮಿಕರು ಕೆಸರಿನಲ್ಲಿ ಸಿಲುಕಿರುವ ಶಂಕೆ ಇದೆ. ಆದರೆ ನಿಖರ ಸಂಖ್ಯೆ ಪತ್ತೆಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎನ್‌ಡಿಆರ್‌ಎಫ್, ಡಿಡಿಎಂಎ, ನಾಗರಿಕ ಏಜೆನ್ಸಿಗಳು, ಅಗ್ನಿಶಾಮಕ ಮತ್ತು ಪೊಲೀಸರ ರಕ್ಷಣಾ ತಂಡಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಮಿಕರು ಆಳವಾದ ಹೊಂಡಕ್ಕೆ ಇಳಿದಿದ್ದಾರೆ. ಕ್ರೇನ್‌ಗಳನ್ನು ಬಳಸಲಾಗುತ್ತಿದ್ದು, ಪಂಪ್‌ಗಳ ಸಹಾಯದಿಂದ ನೀರನ್ನು ತೆಗೆಯಲಾಗುತ್ತಿದೆ ಎಂದು ಹೇಳಿದರು.
ಅಧಿಕಾರಿಗಳ ಸಭೆ: ಪರಿಸ್ಥಿತಿ ಅವಲೋಕಿಸಲು ದೆಹಲಿ ಸರ್ಕಾರ ಮಧ್ಯಾಹ್ನ ತುರ್ತು ಸಭೆ ಕರೆದಿದೆ. ಎಲ್ಲಾ ಕ್ಯಾಬಿನೆಟ್ ಸಚಿವರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ್ವಾರಕಾ ಮತ್ತು ಜಂಗ್ಪುರ ಸೇರಿದಂತೆ ಅನೇಕ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡಿದೆ. ಮಿಂಟೋ ರಸ್ತೆ ಮತ್ತು ಆಜಾದ್ ಮಾರ್ಕೆಟ್ ಅಂಡರ್‌ಪಾಸ್‌ಗಳಂತಹ ಪ್ರಮುಖ ವಿಸ್ತರಣೆಗಳನ್ನು ಮುಚ್ಚಲಾಗಿದೆ.
ಅನೇಕ ಜನವಸತಿ ಪ್ರದೇಶಗಳಲ್ಲಿ ಜನ ಸೊಂಟ ಮಟ್ಟದ ಆಳದ ನೀರಿನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.
ಎಎಪಿ ವಿರುದ್ಧ ಬಿಜೆಪಿ ದಾಳಿ: ಜಲಾವೃತವಾದ ಬೀದಿಯಲ್ಲಿ ಬಿಜೆಪಿ ಕೌನ್ಸಿಲರ್ ರವೀಂದರ್ ಸಿಂಗ್ ನೇಗಿ ದೋಣಿ ಸಂಚಾರ ನಡೆಸಿದ ವಿಡಿಯೋ ಕಾಣಿಸಿಕೊಂಡಿದೆ. ʻಕಳೆದ ಒಂದು ತಿಂಗಳಿನಿಂದ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಹೋರಾಟ ನಡೆಸುತ್ತಿದ್ದೇವೆ. ಆದರೆ ದೆಹಲಿ ಸರ್ಕಾರ ಏನೂ ಮಾಡಲಿಲ್ಲ. ಇದರಿಂದ ಇಡೀ ನಗರ ಜಲಾವೃತವಾಗಿದೆ,ʼ ಎಂದು ದೂರಿದ್ದಾರೆ.
ನೀರಿನ ಅಭಾವದ ಬಗ್ಗೆ ಅನಿರ್ದಿಷ್ಟಾವಧಿ ಉಪವಾಸ ನಡೆಸಿದ ದೆಹಲಿ ಸಚಿವೆ ಅತಿಶಿ ವಿರುದ್ಧ ವಾಗ್ದಾಳಿ ನಡೆಸಿ,ʼ ಅವರು ನೀರಿನ ಸಮಸ್ಯೆ ಬಗ್ಗೆ ಪ್ರತಿಭಟಿಸುತ್ತಿದ್ದಾರೆ. ಆದರೆ, ಮಾನ್ಸೂನ್‌ಗೆ ಮುನ್ನ ಚರಂಡಿ ಸ್ವಚ್ಛಗೊಳಿಸದ ಕಾರಣ ರಾಜಧಾನಿ ಜಲಾವೃತಗೊಂಡಿದೆʼ ಎಂದಿದ್ದಾರೆ. ಮಥುರಾ ರಸ್ತೆಯಲ್ಲಿರುವ ಅತಿಶಿ ಅವರ ನಿವಾಸಕ್ಕೆ ನೀರು ನುಗ್ಗುತ್ತಿರುವ ಚಿತ್ರಗಳನ್ನು ಸಹ ಬಿಜೆಪಿ ಹಂಚಿಕೊಂಡಿದೆ.
ಸಂಚಾರ ಸಲಹೆ: ಕರ್ತವ್ಯ ಪಥ್, ಐಟಿಒ, ವೀರ್ ಬಂದಾ ಬೈರಾಗಿ ಮಾರ್ಗ, ಹೊರ ವರ್ತುಲ ರಸ್ತೆ, ಆಜಾದ್ ಮಾರುಕಟ್ಟೆ ಅಂಡರ್‌ಪಾಸ್, ಧೌಲಾ ಕುವಾನ್ ಫ್ಲೈಓವರ್, ಮಿಂಟೋ ರಸ್ತೆ ಮತ್ತು ಇತರ ಪ್ರದೇಶಗಳಲ್ಲಿ ಪರ್ಯಾಯ ಮಾರ್ಗ ಬಳಸಲು ಪೊಲೀಸರು ಸೂಚಿಸಿದ್ದಾರೆ. ದೆಹಲಿ ಮೆಟ್ರೋ ರೈಲು ನಿಗಮವು ಯಶೋಭೂಮಿ ಸೆಕ್ಟರ್ 25 ದ್ವಾರಕಾದಲ್ಲಿ ಪ್ರವೇಶ ಮತ್ತು ನಿರ್ಗಮನ ಗೇಟ್‌ಗಳನ್ನು ಮುಚ್ಚಿದೆ. ದೆಹಲಿ ಏರೋಸಿಟಿ ಮೆಟ್ರೋ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಶಟಲ್ ಸೇವೆಯನ್ನು ಸ್ಥಗಿತಗೊಳಿಸಿದೆ.
ದೆಹಲಿಯ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಸಚಿವ ಸೌರಭ್ ಭಾರದ್ವಾಜ್, ಯಮುನಾ ನದಿ ಸುಲಲಿತವಾಗಿ ಹರಿಯುವುದರಿಂದ ಈ ವರ್ಷ ಯಾವುದೇ ಪ್ರವಾಹ ಉಂಟಾಗುವುದಿಲ್ಲ ಎಂದು ಹೇಳಿದ್ದರು.