ರೈಲ್ವೆ ಖಾಸಗೀಕರಣ ಇಲ್ಲ: ವೈಷ್ಣವ್
ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಸೇವೆ ಒದಗಿಸಲು ಗಮನಹರಿಸುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ (ಅಕ್ಟೋಬರ್ 4) ಹೇಳಿದರು.
400 ರೂ.ಗಿಂತ ಕಡಿಮೆ ವೆಚ್ಚದಲ್ಲಿ 1,000 ಕಿಮೀವರೆಗೆ ಪ್ರಯಾಣ ಮಾಡಬಹುದು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಗುರಿ ಎಂದು ಸಚಿವರು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಹೇಳಿದರು.
ʻಮುಂದಿನ ಐದು ವರ್ಷಗಳಲ್ಲಿ ರೈಲ್ವೆ ಸಂಪೂರ್ಣ ಬದಲಾವಣೆಗೆ ಒಳಗಾಗಲಿದೆ. ವಂದೇ ಭಾರತ್ ಮತ್ತು ನಮೋ ಭಾರತ್‌ನಂತಹ ರೈಲುಗಳು ಹಾಗೂ ಕವಚ ರೈಲು ರಕ್ಷಣೆ ಅಳವಡಿಕೆ ಬದಲಾವಣೆಗೆ ಕೊಡುಗೆ ನೀಡುತ್ತವೆ ಎಂದು ಹೇಳಿದರು.
ರೈಲ್ವೆ ಸಂರಕ್ಷಣಾ ಪಡೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ,ʼ ರೈಲ್ವೆಯ ಖಾಸಗೀಕರಣದ ಪ್ರಶ್ನೆಯೇ ಇಲ್ಲ. ರೈಲ್ವೆ ಮತ್ತು ರಕ್ಷಣೆ ದೇಶದ ಬೆನ್ನೆಲುಬುಗಳಾಗಿದ್ದು, ಅವನ್ನು ರಾಜಕೀಯದಿಂದ ದೂರವಿಡಬೇಕು ಎಂದು ಇಂಥ ವದಂತಿ ಹಬ್ಬಿಸುವವರಿಗೆ ತಿಳಿಸಲು ಇಚ್ಛಿಸುತ್ತೇನೆ,ʼ ಎಂದು ಹೇಳಿದರು.
ರೈಲ್ವೆಯ ರಾಜಕೀಕರಣ ಕೊನೆ: ʻ ಪ್ರಧಾನಿ ರೈಲ್ವೆಯ ರಾಜಕೀಕರಣವನ್ನು ನಿಲ್ಲಿಸಿದ್ದಾರೆ. ಕಾರ್ಯಕ್ಷಮತೆ, ಸುರಕ್ಷತೆ, ತಂತ್ರಜ್ಞಾನ ಮತ್ತು ಎಲ್ಲರಿಗೂ ಕೈಗೆಟಕುವ ದರದಲ್ಲಿ ಸೇವೆ ಒದಗಿಸುವತ್ತ ಗಮನ ಹರಿಸಲಾಗಿದೆ. ರೈಲ್ವೆ ಬಜೆಟ್ ಪ್ರಸ್ತುತ 2.5 ಲಕ್ಷ ಕೋಟಿ ರೂ. ಇದೆ. ಕಳೆದ 10 ವರ್ಷದಲ್ಲಿ 31,000 ಕಿಮೀ ಹೊಸ ಹಳಿ ಅಳವಡಿಸಲಾಗಿದೆ. ಇದು ಫ್ರಾನ್ಸ್‌ನ ಸಂಪೂರ್ಣ ರೈಲು ಜಾಲಕ್ಕಿಂತ ಅಧಿಕ,ʼ ಎಂದು ಹೇಳಿದರು.