ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಮಹಿಳೆಯರ ಖಾತೆಗೆ 1 ಲಕ್ಷ ರೂ.: ರಾಹುಲ್‌
x

ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಮಹಿಳೆಯರ ಖಾತೆಗೆ 1 ಲಕ್ಷ ರೂ.: ರಾಹುಲ್‌


ಏಪ್ರಿಲ್‌ 8- ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ಅವರು, ಪಕ್ಷದ ಸರ್ಕಾರ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ 1 ಲಕ್ಷ ರೂ. ವರ್ಗಾಯಿಸುತ್ತದೆ ಎಂದು ಘೋಷಿಸಿದರು.

ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಆದಿವಾಸಿಗಳನ್ನುಉದ್ದೇಶಿಸಿ ಮಾತನಾಡಿದ ರಾಹುಲ್, ನೀವು ಭೂಮಿಯ ಮೂಲ ಮಾಲೀಕರು. ಆದರೆ, ಸಮುದಾಯದ ಯಾವುದೇ ವ್ಯಕ್ತಿ ದೇಶದ ಅಗ್ರ 200 ಕಂಪನಿಗಳ ಪ್ರವರ್ತಕರಲ್ಲಿ ಅಥವಾ ಹಿರಿಯ ಆಡಳಿತದ ಭಾಗವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿ ಶಿಷ್ಯವೃತ್ತಿ: ಮಾಂಡ್ಲಾ ಲೋಕಸಭೆ ಕ್ಷೇತ್ರದ ಭಾಗವಾದ ಸಿಯೋನಿ ಜಿಲ್ಲೆಯ ಧನೋರಾದಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಚಿಸಿದರೆ, ನಿರುದ್ಯೋಗಿ ಯುವಕರಿಗೆ ಶಿಷ್ಯವೃತ್ತಿ ಖಾತ್ರಿಗೊಳಿಸಲಾಗುವುದು. ಅವರು ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಹೊಸ ಕಾನೂನು ತರುತ್ತೇವೆ. ಆಗ ಅವರು 1 ಲಕ್ಷ ರೂ. ಭತ್ಯೆ ಪಡೆಯುತ್ತಾರೆ. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರ ಕಾರ್ಯನಿರ್ವಹಣೆ ಉತ್ತಮವಾಗಿದ್ದರೆ ಅದೇ ಸ್ಥಳದಲ್ಲಿ ಕೆಲಸ ಸಿಗುತ್ತದೆʼ ಎಂದು ಹೇಳಿದರು.

ಭೂಮಿ ಮೇಲೆ ಸ್ಥಳೀಯರ ಹಕ್ಕು: ʻಕಾಂಗ್ರೆಸ್ ಒಂದು ವರ್ಷದಲ್ಲಿ ಸ್ಥಳೀಯರ ಜಮೀನಿನ ಹಕ್ಕು ಇತ್ಯರ್ಥಪಡಿಸಲಿದೆ. ಎಸ್‌ಸಿ-ಎಸ್‌ಟಿ , ಹಿಂದುಳಿದ ವರ್ಗಗಳು ಮತ್ತು ಬಡ ಕುಟುಂಬಗಳ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 1 ಲಕ್ಷ ರೂ. ವರ್ಗಾವಣೆಯಂಥ ಕ್ರಮಗಳನ್ನು ಉಲ್ಲೇಖಿಸಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ದ್ವಿಗುಣಗೊಳಿಸಲಾಗುವುದುʼ ಎಂದು ಹೇಳಿದರು.

ʻಉದ್ಯೋಗದಲ್ಲಿ ಗುತ್ತಿಗೆ ಪದ್ಧತಿ ಕೊನೆಗಾಣಿಸುತ್ತೇವೆ. ಸರ್ಕಾರಿ ವಲಯದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ರೈತರಿಗೆ ಬೆಳೆಗಳಿಗೆ ಸೂಕ್ತ ಎಂಎಸ್‌ಪಿ ಸಿಗುವಂತೆ ಮಾಡಲು ಕಾನೂನು ರೂಪಿಸಲಿದೆʼ ಎಂದು ತಿಳಿಸಿದರು.

'ವನವಾಸಿʼಗಳಲ್ಲ: ʻಬುಡಕಟ್ಟು ಜನಾಂಗದವರನ್ನು ಆದಿವಾಸಿಗಳು ಎಂದು ಕರೆಯುವ ಬದಲು ಬಿಜೆಪಿ ಉದ್ದೇಶಪೂರ್ವಕವಾಗಿ ಅವರನ್ನು ʻವನವಾಸಿಗಳುʼ (ಅರಣ್ಯ ನಿವಾಸಿಗಳು) ಎಂದು ಕರೆಯುತ್ತಿದೆ. ಗಿರಿಜನರ ಭೂಮಿಯನ್ನು ಕೈಗಾರಿಕೋದ್ಯಮಿಗಳಿಗೆ ನೀಡಲು ಬಯಸುತ್ತದೆ. ಆದಿವಾಸಿ ಎಂದರೆ ಭೂಮಿಯ ಯಜಮಾನ. ಅವರು ಭೂಮಿ, ನೀರು, ಕಾಡು ಮತ್ತು ಸಂಪತ್ತಿನ ಮೂಲ ಮಾಲೀಕರು. ದೇಶದ ಜನಸಂಖ್ಯೆಯಲ್ಲಿ ಶೇ. 8 ಕ್ಕಿಂತ ಹೆಚ್ಚು ಬುಡಕಟ್ಟು ಜನಾಂಗದವರು ಇದ್ದಾರೆ. 90 ಐಎಎಸ್ ಅಧಿಕಾರಿಗಳ ಪೈಕಿ ಒಬ್ಬ ಆದಿವಾಸಿ ಅಧಿಕಾರಿ ಇದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಒಬ್ಬ ಆದಿವಾಸಿ ಮಾಲೀಕರನ್ನು ಅಥವಾ ಸಮುದಾಯದ ಸುದ್ದಿ ನಿರೂಪಕರನ್ನು ನನಗೆ ತೋರಿಸಿ,ʼ ಎಂದು ಕೇಳಿದರು.

ಬಿಜೆಪಿಯ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ವಿರುದ್ಧ ಬುಡಕಟ್ಟು ಮೀಸಲು ಕ್ಷೇತ್ರದಿಂದ ಮಾಜಿ ಸಚಿವ ಹಾಗೂ ಶಾಸಕ ಓಂಕಾರ್ ಸಿಂಗ್ ಮರ್ಕಮ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

Read More
Next Story