ರಾಯ್‌ಬರೇಲಿ ಉಳಿಸಿಕೊಂಡ ರಾಹುಲ್‌  ಗಾಂಧಿ; ವಯನಾಡಿನಿಂದ ಪ್ರಿಯಾಂಕಾ ಸ್ಪರ್ಧೆ
x

ರಾಯ್‌ಬರೇಲಿ ಉಳಿಸಿಕೊಂಡ ರಾಹುಲ್‌ ಗಾಂಧಿ; ವಯನಾಡಿನಿಂದ ಪ್ರಿಯಾಂಕಾ ಸ್ಪರ್ಧೆ


ರಾಹುಲ್ ಗಾಂಧಿ ಗೆದ್ದಿರುವ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಯಾವುದನ್ನು ಬಿಟ್ಟುಕೊಡಲಿದ್ದಾರೆ ಎನ್ನುವ ಬಗ್ಗೆ ಈಗ ಸ್ಪಷ್ಟ ಚಿತ್ರಣ ಸಿಕ್ಕಿದೆ. ಸಸ್ಪೆನ್ಸ್‌ಗೆ ತೆರೆ ಎಳೆದಿರುವ ಕಾಂಗ್ರೆಸ್ ಸೋಮವಾರ (ಜೂನ್ 17) ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ ಮತ್ತು ಕೇರಳದ ವಯನಾಡ್ ಕ್ಷೇತ್ರದಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದೆ.

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಪಕ್ಷದ ಉನ್ನತ ನಾಯಕತ್ವದ ಸಭೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಿದರು. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನವನ್ನು ರಾಹುಲ್ ಗಾಂಧಿ ವಹಿಸಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ.


ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಚರ್ಚೆಯಲ್ಲಿ ಉಪಸ್ಥಿತರಿದ್ದರು.

ಕ್ಷೇತ್ರ ಉಳಿಸಿಕೊಳ್ಳುವ ನಿರ್ಧಾರ ಸುಲಭವಾಗಿರಲಿಲ್ಲ. ಏಕೆಂದರೆ ಕಷ್ಟಕರ ಸಮಯದಲ್ಲಿ ವಯನಾಡಿನ ಜನರು ನನಗೆ ಅಪಾರ ಪ್ರೀತಿ ಮತ್ತು ಬೆಂಬಲವನ್ನು ನೀಡಿದ್ದಾರೆ ಮತ್ತು ಜೀವನದುದ್ದಕ್ಕೂ ಅವರಿಗೆ ಋಣಿಯಾಗಿರುತ್ತಾರೆ. ವಯನಾಡಿನ ಜನತೆಗೆ ನನ್ನ ಬಾಗಿಲು ಸದಾ ತೆರೆದಿರುತ್ತದೆ ಎಂದು ರಾಹುಲ್ ಹೇಳಿದರು.

ವಯನಾಡ್ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡುವುದನ್ನು ಮುಂದುವರಿಸುವುದಾಗಿ ಹಾಗೂ ಮತದಾರರಿಗೆ ತಾವು ನೀಡಿರುವ ಭರವಸೆಗಳನ್ನು ಈಡೇರಿಸುವುದಾಗಿ ರಾಹುಲ್ ಭರವಸೆ ನೀಡಿದರು. ಪ್ರಿಯಾಂಕಾ ಅವರ ವಿಜಯದ ಬಗ್ಗೆ ನನಗೆ ವಿಶ್ವಾಸವಿದೆ ಮತ್ತು ವಯನಾಡಿನ ಜನರು "ಇಬ್ಬರು ಸಂಸದರು - ಪ್ರಿಯಾಂಕಾ ಮತ್ತು ನಾನು" ಪಡೆಯುತ್ತಿರುವುದಕ್ಕೆ ಸಂತೋಷಪಡಬೇಕು ಎಂದು ಅವರು ಹೇಳಿದರು.

ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, ವಯನಾಡನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದೆ ಮತ್ತು ಜನರಿಗೆ ಉತ್ತಮ ಪ್ರತಿನಿಧಿಯಾಗಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ರಾಯ್ ಬರೇಲಿಯಲ್ಲಿ 20 ವರ್ಷಗಳ ಕಾಲ ಕೆಲಸ ಮಾಡಿರುವ ಅನುಭವ ನನಗಿದೆ. ಭವಿಷ್ಯದಲ್ಲಿ ರಾಯ್ ಬರೇಲಿಯಲ್ಲಿರುವ ತನ್ನ ಸಹೋದರನಿಗೆ ಸಹಾಯ ಮಾಡುತ್ತೇನೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಅವರು ವಯನಾಡ್ ಮತ್ತು ರಾಯ್ ಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ ಮತ್ತು ಜೂನ್ 4 ರಂದು ಹೊರಬಿದ್ದ ಲೋಕಸಭೆಯ ಫಲಿತಾಂಶದ 14 ದಿನಗಳಲ್ಲಿ ಅವರು ಒಂದು ಸ್ಥಾನವನ್ನು ಬಿಟ್ಟುಕೊಡಬೇಕಾಗಿತ್ತು.

Read More
Next Story