Rahul meets victims of Pak shelling in Poonch, says damage is big tragedy
x

ಪೂಂಚ್‌ನಲ್ಲಿ ಪಾಕ್ ಶೆಲ್ ದಾಳಿ ಸಂತ್ರಸ್ತರನ್ನು ಭೇಟಿಯಾದ ರಾಹುಲ್ ಗಾಂಧಿ

ಇದೊಂದು ದೊಡ್ಡ ದುರಂತ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನಿ ಸೈನ್ಯವು ನೇರವಾಗಿ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದೆ. ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸಿದ್ದೇನೆ. ಈ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪಿಸುವ ಹಾಗೆ ಮಾಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.


ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಪಟ್ಟಣಕ್ಕೆ ಭೇಟಿ ನೀಡಿ, ಮೇ 7ರಿಂದ ಮೇ 10ರವರೆಗೆ ನಡೆದ ಪಾಕಿಸ್ತಾನಿ ಸೈನಿಕರ ಗಡಿಯಾಚೆಗಿನ ಶೆಲ್ ದಾಳಿಗೆ ತುತ್ತಾದ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ಹಾನಿಯನ್ನು ಅವರು "ದೊಡ್ಡ ದುರಂತ" ಎಂದು ವಿವರಿಸಿದರಲ್ಲದೆ, ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪಿಸುವ ಭರವಸೆ ನೀಡಿದರು.

ಶೆಲ್ ದಾಳಿಯಿಂದ ಬಾಧಿತರಾದ ಜನರು ಹಾಗೂ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡವರೊಂದಿಗೆ ರಾಹುಲ್ ಗಾಂಧಿ ಒಂದು ಗಂಟೆಗೂ ಹೆಚ್ಚು ಕಾಲ ಸಂವಾದ ನಡೆಸಿದರು. "ಇದೊಂದು ದೊಡ್ಡ ದುರಂತ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನಿ ಸೈನ್ಯವು ನೇರವಾಗಿ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದೆ. ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸಿದ್ದೇನೆ. ಈ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪಿಸುವ ಹಾಗೆ ಮಾಡುತ್ತೇನೆ," ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ತಮ್ಮ ಎಕ್ಸ್​ ಖಾತೆಯಲ್ಲಿಯೂ ಈ ಬಗ್ಗೆ ಬರೆದುಕೊಂಡಿರುವ ರಾಹುಲ್, "ಪೂಂಚ್‌ನಲ್ಲಿ ಪಾಕಿಸ್ತಾನಿ ಸೈನಿಕರ ಶೆಲ್ ದಾಳಿಗೆ ಬಲಿಯಾದ ಕುಟುಂಬಗಳನ್ನು ಭೇಟಿಯಾದೆ. ಹಾನಿಗೊಳಗಾದ ಮನೆಗಳು, ಚೆಲ್ಲಾಪಿಲ್ಲಿಯಾದ ವಸ್ತುಗಳು, ಕಣ್ಣೀರಿನ ಕಥೆಗಳು ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖವನ್ನು ನೋಡಿದೆ. ಈ ದೇಶಭಕ್ತ ಕುಟುಂಬಗಳು ಪ್ರತಿ ಬಾರಿಯೂ ಯುದ್ಧದ ಭಾರವನ್ನು ಧೈರ್ಯದಿಂದ ಮತ್ತು ಘನತೆಯಿಂದ ಎದುರಿಸುತ್ತವೆ. ಅವರ ಧೈರ್ಯಕ್ಕೆ ನನ್ನ ಸಲಾಂ. ಬಾಧಿತ ಕುಟುಂಬಗಳೊಂದಿಗೆ ನಾನು ದೃಢವಾಗಿ ನಿಲ್ಲುತ್ತೇನೆ, ಅವರ ಬೇಡಿಕೆಗಳನ್ನು ರಾಷ್ಟ್ರಮಟ್ಟದಲ್ಲಿ ಖಂಡಿತವಾಗಿಯೂ ಎತ್ತಿಹಿಡಿಯುತ್ತೇನೆ," ಎಂದು ಬರೆದುಕೊಂಡಿದ್ದಾರೆ.

ಭೇಟಿಯ ಸಮಯದಲ್ಲಿ ರಾಹುಲ್ ಗಾಂಧಿ ಅವರು ಜಮಿಯಾ ಜಿಯಾ-ಉಲ್-ಉಲೂಮ್ ಮತ್ತು ಗುರು ಸಿಂಗ್ ಸಭಾ ಗುರುದ್ವಾರಕ್ಕೆ ಭೇಟಿ ನೀಡಿ ಶಾಂತಿಗಾಗಿ ಪ್ರಾರ್ಥಿಸಿದರು. ಶೆಲ್ ದಾಳಿಯಲ್ಲಿ ಮೃತಪಟ್ಟ ವಿಹಾನ್ ಭಾರ್ಗವ ಎಂಬ ಮಗುವಿನ ಕುಟುಂಬವನ್ನೂ ಅವರು ಭೇಟಿಯಾಗಿ ಸಂತಾಪ ಸೂಚಿಸಿದರು. ಅಲ್ಲದೆ, ಶೆಲ್ ದಾಳಿಯಿಂದ ಹಾನಿಗೊಳಗಾಗಿದ್ದ ಮತ್ತು ಜೈನ್ ಹಾಗೂ ಜೋಯಾ ಎಂಬ ಇಬ್ಬರು ವಿದ್ಯಾರ್ಥಿಗಳನ್ನು ಕಳೆದುಕೊಂಡಿದ್ದ ಪೂಂಚ್‌ನ ಕ್ರಿಸ್ಟ್ ಸ್ಕೂಲ್‌ನ ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸಿದರು.

ರಾಹುಲ್ ಗಾಂಧಿ ಅವರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕರಾದ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ. ಮಿರ್ ಉಪಸ್ಥಿತರಿದ್ದರು.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ನಂತರ ರಾಹುಲ್ ಗಾಂಧಿ ಅವರು ಕೇಂದ್ರಾಡಳಿತ ಪ್ರದೇಶಕ್ಕೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. ಏಪ್ರಿಲ್ 25 ರಂದು ಅವರು ಶ್ರೀನಗರಕ್ಕೆ ಭೇಟಿ ನೀಡಿ, ದಾಳಿಯಲ್ಲಿ ಗಾಯಗೊಂಡವರನ್ನು ಭೇಟಿಯಾಗಿದ್ದರು.

Read More
Next Story