Rahul lashed out at the Election Commission by presenting proof of Aland Constituency
x

ಮತ ಕಳ್ಳತನದ ಬಗ್ಗೆ ರಾಹುಲ್‌ ಗಾಂಧಿ ವಿವರಣೆ ನೀಡಿದರು.

ಆಳಂದ ಕ್ಷೇತ್ರದ 'ಪುರಾವೆ' ಮುಂದಿಟ್ಟು ಚುನಾವಣಾ ಆಯೋಗದ ವಿರುದ್ಧ ರಾಹುಲ್ ವಾಗ್ದಾಳಿ

"ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 6,018 ಮತಗಳನ್ನು ಅಳಿಸಲು ಪ್ರಯತ್ನಿಸಲಾಗಿದೆ. 2023ರ ಚುನಾವಣೆಯಲ್ಲಿ ಒಟ್ಟು ಎಷ್ಟು ಮತಗಳನ್ನು ಅಳಿಸಲಾಗಿದೆ ಎಂಬುದು ನಮಗೆ ತಿಳಿದಿಲ್ಲ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ತಿಳಿಸಿದ್ದಾರೆ.


Click the Play button to hear this message in audio format

ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ (ವೋಟ್ ಚೋರಿ) ನಡೆದಿದೆ ಎಂಬ ತಮ್ಮ ಆರೋಪವನ್ನು ಮತ್ತಷ್ಟು ತೀವ್ರಗೊಳಿಸಿರುವ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಈ ಬಾರಿ ಕರ್ನಾಟಕದ ಕಲ್ಯಾಣ ಕರ್ನಾಟಕ ಭಾಗದ ಆಳಂದ ವಿಧಾನಸಭಾ ಕ್ಷೇತ್ರವನ್ನು ಉದಾಹರಣೆಯಾಗಿ ನೀಡಿ, ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಾಫ್ಟ್‌ವೇರ್ ದುರ್ಬಳಕೆ ಮಾಡಿಕೊಂಡು ವ್ಯವಸ್ಥಿತವಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪವರ್‌ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ತಮ್ಮ ಆರೋಪಗಳಿಗೆ ಪುರಾವೆ ಒದಗಿಸುವ ಪ್ರಯತ್ನ ಮಾಡಿದರು. ಬೆಂಗಳೂರಿನ ಮಹದೇವಪುರ ಕ್ಷೇತ್ರದ ನಂತರ ಇದೀಗ ಆಳಂದ ಕ್ಷೇತ್ರವನ್ನು ಪ್ರಮುಖ ಪ್ರಕರಣವಾಗಿ ಮುಂದಿಟ್ಟು, ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

"ಆಳಂದದಲ್ಲಿ 6,018 ಮತಗಳ ಅಳಿಸುವಿಕೆಗೆ ಯತ್ನ"

ರಾಹುಲ್ ಗಾಂಧಿ ತಮ್ಮ ಆರೋಪವನ್ನು ವಿವರಿಸುತ್ತಾ, "ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 6,018 ಮತಗಳನ್ನು ಅಳಿಸಲು ಪ್ರಯತ್ನಿಸಲಾಗಿದೆ. 2023ರ ಚುನಾವಣೆಯಲ್ಲಿ ಒಟ್ಟು ಎಷ್ಟು ಮತಗಳನ್ನು ಅಳಿಸಲಾಗಿದೆ ಎಂಬುದು ನಮಗೆ ತಿಳಿದಿಲ್ಲ. ಆದರೆ, ಈ 6,018 ಮತಗಳನ್ನು ಅಳಿಸುವಾಗ ಯಾರೋ ಆಕಸ್ಮಿಕವಾಗಿ ಸಿಕ್ಕಿಬಿದ್ದಿದ್ದಾರೆ," ಎಂದು ಹೇಳಿದರು.

ಈ ಅಕ್ರಮ ಬೆಳಕಿಗೆ ಬಂದ ಸನ್ನಿವೇಶವನ್ನು ವಿವರಿಸಿದ ಅವರು, "ಒಬ್ಬ ಬೂತ್ ಮಟ್ಟದ ಅಧಿಕಾರಿಯ (BLO) ಚಿಕ್ಕಪ್ಪನ ಹೆಸರೇ ಮತದಾರರ ಪಟ್ಟಿಯಿಂದ ಕಣ್ಮರೆಯಾಗಿತ್ತು. ಇದರಿಂದ ಅನುಮಾನಗೊಂಡ ಅವರು, ತಮ್ಮ ಚಿಕ್ಕಪ್ಪನ ಮತವನ್ನು ಯಾರು ಅಳಿಸಿದರು ಎಂದು ಪರಿಶೀಲಿಸಿದಾಗ, ಅದು ಅವರ ನೆರೆಮನೆಯವರ ಹೆಸರಿನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಆದರೆ, ಆ ನೆರೆಮನೆಯವರನ್ನು ವಿಚಾರಿಸಿದಾಗ, ತಾವು ಯಾವುದೇ ಮತವನ್ನು ಅಳಿಸಲು ಅರ್ಜಿ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರರ್ಥ, ಯಾರ ಮತ ಅಳಿಸಲ್ಪಟ್ಟಿದೆಯೋ ಅವರಿಗೂ ಗೊತ್ತಿಲ್ಲ, ಯಾರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿದೆಯೋ ಅವರಿಗೂ ಗೊತ್ತಿಲ್ಲ. ಬೇರಾವುದೋ ಮೂರನೇ ಶಕ್ತಿ ಈ ಇಡೀ ಪ್ರಕ್ರಿಯೆಯನ್ನು ಹೈಜಾಕ್ ಮಾಡಿ, ನಕಲಿ ಅರ್ಜಿಗಳ ಮೂಲಕ ಮತಗಳನ್ನು ಅಳಿಸುತ್ತಿದೆ," ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಚುನಾವಣಾ ಆಯೋಗದ ಮೇಲೆ ನೇರ ಆರೋಪ

ತಮ್ಮ ವಾಗ್ದಾಳಿಯನ್ನು ನೇರವಾಗಿ ಚುನಾವಣಾ ಆಯೋಗದ ಕಡೆಗೆ ತಿರುಗಿಸಿದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು "ಮತಗಳ್ಳರನ್ನು ರಕ್ಷಿಸುತ್ತಿದ್ದಾರೆ" ಎಂದು ಆರೋಪಿಸಿದರು. "ನಾನಿದನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ, ಅತ್ಯಂತ ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ. ಭಾರತದ ಮುಖ್ಯ ಚುನಾವಣಾ ಆಯುಕ್ತರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಮತ್ತು ಮತಗಳ್ಳರಿಗೆ ರಕ್ಷಣೆ ನೀಡುತ್ತಿದ್ದಾರೆ. ನಾವು ನೀಡಿರುವ ಪುರಾವೆಗಳು ಸ್ಪಷ್ಟವಾಗಿವೆ, ಇದರಲ್ಲಿ ಯಾವುದೇ ಗೊಂದಲವಿಲ್ಲ," ಎಂದು ಅವರು ಹೇಳಿದರು.

ಇತ್ತೀಚೆಗೆ, ಮತ ಕಳ್ಳತನದ ಬಗ್ಗೆ ತಾವು ಶೀಘ್ರದಲ್ಲೇ ನಿರಾಕರಿಸಲಾಗದ ಪುರಾವೆಗಳ "ಹೈಡ್ರೋಜನ್ ಬಾಂಬ್" ಸಿಡಿಸುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದರು. ಆದರೆ, ಇಂದಿನ ಪತ್ರಿಕಾಗೋಷ್ಠಿಯು ಆ 'ಬಾಂಬ್' ಅಲ್ಲ, ಅದು ಶೀಘ್ರದಲ್ಲೇ ಬರಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಆರೋಪ-ಪ್ರತ್ಯಾರೋಪಗಳ ಹಿನ್ನೆಲೆ

ರಾಹುಲ್ ಗಾಂಧಿಯವರ ಈ ಆರೋಪಗಳು ಇದೇ ಮೊದಲಲ್ಲ. ಈ ಹಿಂದೆ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಅಕ್ರಮವಾಗಿ ಸೇರಿಸಲಾಗಿದೆ ಅಥವಾ ಅಳಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ಆರೋಪಗಳನ್ನು ಸಾಬೀತುಪಡಿಸುವಂತೆ ರಾಹುಲ್ ಗಾಂಧಿಯವರಿಗೆ ಸವಾಲು ಹಾಕಿತ್ತು ಮತ್ತು ಪ್ರಮಾಣಪತ್ರ ಸಲ್ಲಿಸಲು ಸೂಚಿಸಿತ್ತು. ಈ ಕಾನೂನು ಸಮರ ಇನ್ನೂ ನಡೆಯುತ್ತಿರುವಾಗಲೇ, ರಾಹುಲ್ ಗಾಂಧಿ ಮತ್ತೊಂದು ಕ್ಷೇತ್ರದ ಉದಾಹರಣೆಯೊಂದಿಗೆ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.

Read More
Next Story