ರಾಹುಲ್ ಗಾಂಧಿ ನಡೆ ದೇಶಕ್ಕೆ ಹಾನಿಕರ: ಬೆಂಗಳೂರಿನಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ವಾಗ್ದಾಳಿ
x

ಕಿರಣ್ ರಿಜಿಜು 

ರಾಹುಲ್ ಗಾಂಧಿ ನಡೆ ದೇಶಕ್ಕೆ ಹಾನಿಕರ: ಬೆಂಗಳೂರಿನಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ವಾಗ್ದಾಳಿ

ಉಪರಾಷ್ಟ್ರಪತಿ ಚುನಾವಣೆಯು ಸಂಪೂರ್ಣವಾಗಿ ರಾಜಕೀಯ ವಿಚಾರವಾಗಿದ್ದು, ಇದರಲ್ಲಿ ನಿವೃತ್ತ ನ್ಯಾಯಾಧೀಶರು ಹಸ್ತಕ್ಷೇಪ ಮಾಡಬಾರದು ಎಂದು ರಿಜಿಜು ಆಗ್ರಹಿಸಿದರು.


"ಉಪರಾಷ್ಟ್ರಪತಿ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶರು ರಾಜಕೀಯ ವಿಚಾರದಲ್ಲಿ ಭಾಗಿಯಾಗುವುದು ಸರಿಯಲ್ಲ" ಎಂದು ಹೇಳುವ ಮೂಲಕ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಲವು ರಾಜಕೀಯ ವಿದ್ಯಮಾನಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯು ಸಂಪೂರ್ಣವಾಗಿ ರಾಜಕೀಯ ವಿಚಾರವಾಗಿದ್ದು, ಇದರಲ್ಲಿ ನಿವೃತ್ತ ನ್ಯಾಯಾಧೀಶರು ಹಸ್ತಕ್ಷೇಪ ಮಾಡಬಾರದು ಎಂದು ರಿಜಿಜು ಆಗ್ರಹಿಸಿದರು. "ಕೆಲವು ನಿವೃತ್ತ ನ್ಯಾಯಾಧೀಶರು ಕೇಂದ್ರ ಗೃಹ ಸಚಿವರ ವಿರುದ್ಧ ಸಹಿ ಅಭಿಯಾನ ನಡೆಸಿ ಪತ್ರ ಬರೆದಿರುವುದು ಸರಿಯಾದ ಕ್ರಮವಲ್ಲ. ಅವರು ನ್ಯಾಯಾಧೀಶರಾಗಿದ್ದ ವೇಳೆ ಅವರದ್ದೇ ಆದ ಬೇರೆ ವಿಚಾರಗಳಿದ್ದವು. ಈಗ ರಾಜಕೀಯ ಪ್ರಕ್ರಿಯೆಯಲ್ಲಿ ಭಾಗಿಯಾಗುವುದು ಎಷ್ಟು ಸರಿ?" ಎಂದು ಅವರು ಪ್ರಶ್ನಿಸಿದರು.

ಉಪರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದ್ದು, ಈ ಪ್ರಕ್ರಿಯೆ ನಡೆಯುತ್ತಿರುವಾಗ ಇಂತಹ ಬೆಳವಣಿಗೆಗಳು ಅನಪೇಕ್ಷಿತ ಎಂದು ಅವರು ಪ್ರತಿಪಾದಿಸಿದರು.

ರಾಹುಲ್ ಗಾಂಧಿ ನಿಂದನೆ ಸಂಸ್ಕೃತಿ ನಿಲ್ಲಿಸಲಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಸ್ಪರ ಗೌರವದಿಂದ ಮಾತನಾಡುವುದು ಅತ್ಯಗತ್ಯ, ಆದರೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕೆಲವು ಸಂಸದರು ನಿಂದನೆಯ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ರಿಜಿಜು ಆರೋಪಿಸಿದರು. "ಪ್ರಧಾನಮಂತ್ರಿಗೆ ಬೈಯುವುದು ಮತ್ತು ನಿಧನರಾಗಿರುವ ಅವರ ತಾಯಿಯ ಬಗ್ಗೆ ಮಾತನಾಡುವುದು ಅತ್ಯಂತ ಹೀನಾಯವಾದದ್ದು. ಈ ನಡವಳಿಕೆ ಕಾಂಗ್ರೆಸ್ ನಾಯಕರ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ" ಎಂದು ಅವರು ಎಚ್ಚರಿಸಿದರು. ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟವು ಎಂದಿಗೂ ಇಂತಹ ಕೀಳುಮಟ್ಟದ ಭಾಷೆ ಬಳಸಿಲ್ಲ, ನಾವು ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂದು ಅವರು ಹೇಳಿದರು.

ಸೋಲಿಗೆ ಚುನಾವಣಾ ಆಯೋಗವನ್ನು ದೂಷಿಸುವುದು ಸರಿಯಲ್ಲ

ಚುನಾವಣೆಯಲ್ಲಿ ಸೋತಾಗಲೆಲ್ಲಾ ಚುನಾವಣಾ ಆಯೋಗ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ನಿಂದಿಸುವುದು ಕಾಂಗ್ರೆಸ್‌ನ ಚಾಳಿಯಾಗಿದೆ ಎಂದು ರಿಜಿಜು ಟೀಕಿಸಿದರು. "ಜನರು ನಿಮಗೆ ಮತ ಹಾಕಿಲ್ಲ, ಸತತ ಮೂರು ಬಾರಿ ಚುನಾವಣೆಯಲ್ಲಿ ಸೋತಿದ್ದೀರಿ. ನಿಮ್ಮ ಕೋಪವನ್ನು ದೇಶದ ಜನರ ಮೇಲೆ ತೋರಿಸುತ್ತಿದ್ದೀರಿ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮೂರು ಬಾರಿ ಸರ್ಕಾರ ರಚನೆಯಾಗಿದೆ. ಜನರೇ ಮತ ಹಾಕಿಲ್ಲ ಎಂದ ಮೇಲೆ, 'ವೋಟ್ ಚೋರಿ' ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ" ಎಂದು ಅವರು ಹೇಳಿದರು.

"ಒಂದು ಕಾಲದಲ್ಲಿ ನಾನೂ ಸಹ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಭಾವಿಸಿದ್ದೆ. ಆದರೆ, 60 ವರ್ಷಗಳ ಕಾಲ ಅಧಿಕಾರ ನಡೆಸಲು ಅವಕಾಶ ಸಿಕ್ಕಿದ್ದರೂ, ಈಗಿನ ಅವರ ನಡವಳಿಕೆ ನೋಡಿದರೆ ಎಂದಿಗೂ ಅಧಿಕಾರಕ್ಕೆ ಬಾರದ ಹಾಗೆ ನಡೆದುಕೊಳ್ಳುತ್ತಿದ್ದಾರೆ" ಎಂದು ರಿಜಿಜು ವ್ಯಂಗ್ಯವಾಡಿದರು.

ತಪ್ಪು ಮಾಡದಿದ್ದರೆ ಜೈಲಿಗೆ ಯಾಕೆ ಹೋಗುತ್ತಾರೆ?

ಭ್ರಷ್ಟಾಚಾರದ ಆರೋಪಗಳ ಕುರಿತು ಮಾತನಾಡಿದ ಅವರು, "ಯಾರಾದರೂ ತಪ್ಪು ಮಾಡಿಲ್ಲವೆಂದಾದರೆ ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಗುತ್ತದೆ. ತಪ್ಪು ಮಾಡದಿದ್ದರೆ 30 ದಿನಗಳ ಕಾಲ ಜೈಲಿನಲ್ಲಿ ಏಕೆ ಇರಬೇಕಾಗುತ್ತದೆ? ಈ ದೇಶದಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್‌ಗಳಿವೆ. ತಪ್ಪು ಮಾಡದಿದ್ದರೆ ಭಯಪಡುವ ಅಗತ್ಯವಿಲ್ಲ. ಇವರ ಮನಸ್ಸು ಸರಿಯಿಲ್ಲದ ಕಾರಣ ಕಾನೂನಿಗೆ ಬೈಯುತ್ತಾರೆ" ಎಂದು ಪರೋಕ್ಷವಾಗಿ ಕೆಲವು ವಿಪಕ್ಷ ನಾಯಕರನ್ನು ಕುಟುಕಿದರು.

Read More
Next Story