ಉಗ್ರರ ದಾಳಿ, ವಿಶೇಷ ಅಧಿವೇಶನಕ್ಕೆ ಪ್ರಧಾನಿಗೆ ಪತ್ರ ಬರೆದ ರಾಹುಲ್‌ ಗಾಂಧಿ, ಖರ್ಗೆ
x

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ

ಉಗ್ರರ ದಾಳಿ, ವಿಶೇಷ ಅಧಿವೇಶನಕ್ಕೆ ಪ್ರಧಾನಿಗೆ ಪತ್ರ ಬರೆದ ರಾಹುಲ್‌ ಗಾಂಧಿ, ಖರ್ಗೆ

ಪತ್ರದ ಪ್ರತಿಯನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಹುಲ್‌ ಗಾಂಧಿ, ಈ ನಿರ್ಣಾಯಕ ಸಮಯದಲ್ಲಿ ಭಯೋತ್ಪಾದನೆ ವಿರುದ್ಧ ನಾವು ಯಾವಾಗಲೂ ಒಟ್ಟಾಗಿ ನಿಲ್ಲುತ್ತೇವೆ ಎಂಬುದನ್ನು ಭಾರತ ತೋರಿಸಬೇಕು ಎಂದಿದ್ದಾರೆ.


ಜಮ್ಮುಕಾಶ್ಮೀರದ ಪಹಲ್ಗಾಮ್‌ ಉಗ್ರರ ದಾಳಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಆದಷ್ಟು ಬೇಗ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.

ಪತ್ರದ ಪ್ರತಿಯನ್ನು ಸಾಮಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, "ಇಂತಹ ಸಂದಿಗ್ಧ ಸಮಯದಲ್ಲಿ ಭಯೋತ್ಪಾದನೆ ವಿರುದ್ಧ ನಾವು ಯಾವಾಗಲೂ ಒಟ್ಟಾಗಿ ನಿಲ್ಲುತ್ತೇವೆ ಎಂಬುದನ್ನು ಭಾರತ ತೋರಿಸಬೇಕು. ಅಲ್ಲಿ ಜನಪ್ರತಿನಿಧಿಗಳು ತಮ್ಮ ಏಕತೆ ಹಾಗೂ ಬದ್ಧತೆಯನ್ನು ಪ್ರದರ್ಶಿಸಬಹುದು. ಆದ್ದರಿಂದ ಆದಷ್ಟು ಬೇಗ ವಿಶೇಷ ಅಧಿವೇಶನ ಕರೆಯಬೇಕೆಂದು ನಾವು ಮನವಿ ಮಾಡುತ್ತೇವೆ", ಎಂದರು.

ಎಐಸಿಸಿ ಮಲ್ಲಿಕಾರ್ಜುನ ಖರ್ಗೆಯಿಂದಲೂ ಪತ್ರ

ಉಗ್ರರ ದಾಳಿಯ ಕುರಿತು ಸಂಸತ್ತಿನ ಉಭಯ ಸದನಗಳಲ್ಲೂ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. "ಏಕತೆ ಮತ್ತು ಒಗ್ಗಟ್ಟು ಅಗತ್ಯವಾಗಿರುವ ಈ ಸಮಯದಲ್ಲಿ ಸಂಸತ್ತಿನ ಎರಡೂ ಸದನಗಳ ವಿಶೇಷ ಅಧಿವೇಶನ ಕರೆಯುವುದು ಮುಖ್ಯ ಎಂಬುದು ವಿರೋಧಪಕ್ಷಗಳ ಅಭಿಪ್ರಾಯ. ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯನ್ನು ಎದುರಿಸಲು ನಮ್ಮ ಸಾಮೂಹಿಕ ಸಂಕಲ್ಪ ಮತ್ತು ಇಚ್ಛಾಶಕ್ತಿ ಮುಖ್ಯ. ಆದ್ದರಿಂದ ಆದಷ್ಟು ಬೇಗ ವಿಶೇಷ ಅಧಿವೇಶನ ಕರೆಯಬೇಕೆಂದು ನಾವು ಆಗ್ರಹಿಸುತ್ತೇವೆ". ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅನಗತ್ಯ ಹೇಳಿಕೆಗೆ ಹೈಕಮಾಂಡ್‌ ಬ್ರೇಕ್

ಕಾಂಗ್ರೆಸ್‌ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಆರ್‌.ಬಿ. ತಿಮ್ಮಾಪುರ, ಹಿರಿಯ ಸಂಸದ ಶಶಿ ತರೂರ್‌, ಮಹಾರಾಷ್ಟ್ರ ಕಾಂಗ್ರೆಸ್‌ ಹಿರಿಯ ನಾಯಕ ವಿಜಯ್‌ ವಡಟ್ಟಿವಾರ್‌, ಜಮ್ಮ ಮತ್ತು ಕಾಶ್ಮೀರದ ಕಾಂಗ್ರೆಸ್‌ ಅಧ್ಯಕ್ಷ ತಾರಿಕ್‌ ಹಮಿದ್‌, ಕಾಶ್ಮೀರದ ಹಿರಿಯ ನಾಯಕ ಸೈಫುದ್ದೀನ್‌ ಸೋಜ್‌ ಮತ್ತು ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಅವರು ಪಾಕ್‌ ಜೊತೆಗಿನ ಯುದ್ಧದ ಕುರಿತಾದ ಹೇಳಿಕೆ ಪಕ್ಷವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಹೈಕಮಾಂಡ್‌, ಉಗ್ರರ ದಾಳಿಯ ಕುರಿತು ನಾಯಕರು ಯಾವುದೇ ಅನಗತ್ಯ ಹೇಳಿಕೆ ನೀಡದಂತೆ ಸೂಚನೆ ನೀಡಿದೆ.

Read More
Next Story