ವಯನಾಡ್ ನಿಂದ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ
ವಯನಾಡ್ (ಕೇರಳ), ಎ. 3- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಲೋಕಸಭೆ ಕ್ಷೇತ್ರದಿಂದ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ರಾಹುಲ್ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತತಿರ ಹಿರಿಯ ನಾಯಕರೊಂದಿಗೆ ಚುನಾವಣಾಧಿಕಾರಿಯೂ ಆಗಿರುವ ವಯನಾಡ್ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ, ಸಂವಿಧಾನವನ್ನು ಎತ್ತಿಹಿಡಿಯುವ ಪ್ರಮಾಣವಚನವನ್ನು ಓದಿದರು.
ಬೆಳಗ್ಗೆ ಹೆಲಿಕಾಪ್ಟರಿನಲ್ಲಿ ವಯನಾಡಿಗೆ ಆಗಮಿಸಿದ ರಾಹುಲ್, ಕಲ್ಪೆಟ್ಟಾದಿಂದ ಸಿವಿಲ್ ಸ್ಟೇಷನ್ ವರೆಗೆ ರೋಡ್ ಶೋ ನಡೆಸಿದರು. ಆನಂತರ ಮಾತನಾಡಿ, ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿರುವ ಮಾನವ-ಪ್ರಾಣಿ ಸಂಘರ್ಷ ಸೇರಿದಂತೆ ಎಲ್ಲ ವಿಷಯಗಳಲ್ಲೂ ವಯನಾಡಿನ ಜನರೊಂದಿಗೆ ಇರುತ್ತೇನೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ರಾಷ್ಟ್ರ ಮತ್ತು ವಿಶ್ವದ ಗಮನಕ್ಕೆ ತರಲು ಸದಾ ಸಿದ್ಧವಿದ್ಧೇನೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಮತ್ತು ಸಿಪಿಐ ನಾಯಕಿ ಅನ್ನಿ ರಾಜಾ ವಿರುದ್ಧ ರಾಹುಲ್ ಸ್ಪರ್ಧಿಸಲಿದ್ದಾರೆ. ಅವರು 2019ರಲ್ಲಿ ಈ ಕ್ಷೇತ್ರದಿಂದ ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. 10,92,197 ಮತಗಳಲ್ಲಿ ರಾಹುಲ್ 7,06,367 ಮತ ಹಾಗೂ ಪ್ರತಿಸ್ಪರ್ಧಿ ಸಿಪಿಐನ ಪಿ.ಪಿ. ಸುನೀರ್ 2,74,597 ಮತ ಪಡೆದರು.
ಕೇರಳದಲ್ಲಿ ಮತದಾನ ಏಪ್ರಿಲ್ 26 ರಂದು ನಡೆಯಲಿದೆ.