NEET SCAM| ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನಿರಾಕರಣೆ; ಪ್ರತಿಪಕ್ಷಗಳಿಂದ ಸಭಾತ್ಯಾಗ
x
ಸಂಸತ್ತಿನ ಅಧಿವೇಶನದ ಸಂದರ್ಭದಲ್ಲಿ ಇಂಡಿಯ ಒಕ್ಕೂಟದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ.

NEET SCAM| ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನಿರಾಕರಣೆ; ಪ್ರತಿಪಕ್ಷಗಳಿಂದ ಸಭಾತ್ಯಾಗ


ನೀಟ್ ಪೇಪರ್ ಸೋರಿಕೆ ಕುರಿತು ಒಂದು ದಿನದ ಚರ್ಚೆ ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟ ಭರವಸೆ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಸೋಮವಾರ (ಜುಲೈ 1) ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದರು.

ದಿನದ ಕಲಾಪ ಆರಂಭವಾದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನೀಟ್‌ನಲ್ಲಿನ ಅಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು.

ʻನಾವು ನೀಟ್ ಕುರಿತು ಒಂದು ದಿನದ ಚರ್ಚೆಯನ್ನು ಬಯಸಿದ್ದೇವೆ. ಇದು ಪ್ರಮುಖ ವಿಷಯವಾಗಿದ್ದು, ಎರಡು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. 70 ಸಂದರ್ಭಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ನೀವು ಈ ವಿಷಯದ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಿದರೆ, ಸಂತೋಷವಾಗುತ್ತದೆ,ʼ ಎಂದು ರಾಹುಲ್ ಹೇಳಿದರು.

ಪ್ರತಿಕ್ರಿಯಿಸಿದ ಉಪ ಸಭಾನಾಯಕ,ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನಾ ನಿರ್ಣಯ ಮುಗಿಯುವವರೆಗೆ, ಪ್ರತ್ಯೇಕ ಚರ್ಚೆ ಸಾಧ್ಯವಿಲ್ಲ,ʼ ಎಂದು ಹೇಳಿದರು.

ʻಸದನ ಕೆಲವು ನಿಯಮಗಳು ಮತ್ತು ಕಾರ್ಯವಿಧಾನಗಳನ್ನುಅನುಸರಿಸಬೇಕಿದ್ದು, ಆರೋಗ್ಯಕರ ಸಂಪ್ರದಾಯವನ್ನು ಹೊಂದಿದೆ. ಅದು ಈ ಸದನದ ಶಕ್ತಿ. ನಾನು ಸಂಸದನಾಗಿ ದಶಕಗಳ ಕಾಲಾವಧಿಯಲ್ಲಿ ವಂದನಾ ನಿರ್ಣಯಕ್ಕೆ ಮುನ್ನ ಇತರ ಸಮಸ್ಯೆಯನ್ನು ಚರ್ಚೆಗೆ ಎತ್ತಿಕೊಂಡ ಉದಾಹರಣೆಯಿಲ್ಲ. ವಂದನಾ ನಿರ್ಣಯವನ್ನು ಅಂಗೀಕರಿಸಿದ ನಂತರ ಇತರ ವಿಷಯಗಳನ್ನು ಪ್ರಸ್ತಾಪಿಸಬಹುದು,ʼಎಂದು ಸಿಂಗ್ ಹೇಳಿದರು.

ಈ ಹೇಳಿಕೆಯನ್ನು ಬಳಸಿಕೊಂಡ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷ ನಾಯಕರು ವಂದನಾ ನಿರ್ಣಯದ ಮೇಲಿನ ಚರ್ಚೆ ನಂತರ ನೀಟ್‌ ಕುರಿತು ಚರ್ಚಿಸಬೇಕೆಂದು ಒತ್ತಾಯಿಸಿದರು ಮತ್ತು ಸರ್ಕಾರ ಭರವಸೆ ನೀಡಬೇಕೆಂದು ಕೇಳಿದರು.

ʻನೀಟ್ ವಿಷಯ ನಮಗೆ ಬಹಳ ಮುಖ್ಯ ಎಂಬ ಸಂದೇಶವನ್ನು ನಾವು ಸಂಸತ್ತಿನಿಂದ ವಿದ್ಯಾರ್ಥಿಗಳಿಗೆ ಕಳುಹಿಸಬಹುದು,ʼ ಎಂದು ರಾಹುಲ್ ಹೇಳಿದರು.

ʻವಂದನಾ ನಿರ್ಣಯದ ಮೇಲಿನ ಚರ್ಚೆ ಸಮಯದಲ್ಲಿ ಬೇರೆ ಯಾವುದೇ ಚರ್ಚೆಯನ್ನು ತೆಗೆದುಕೊಳ್ಳುವ ಸಂಪ್ರದಾಯವಿಲ್ಲ. ನೀಟ್ ಮೇಲಿನ ಚರ್ಚೆಗೆ ಸದಸ್ಯರು ಪ್ರತ್ಯೇಕ ನೋಟಿಸ್ ನೀಡಬಹುದು,ʼ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.

ಸ್ಪೀಕರ್‌ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಆರಂಭಿಸಲು ಬಿಜೆಪಿ ಸದಸ್ಯ ಅನುರಾಗ್ ಠಾಕೂರ್ ಅವರಿಗೆ ಹೇಳುತ್ತಿದ್ದಂತೆ, ಪ್ರತಿಪಕ್ಷಗಳ ಸದಸ್ಯರು ಎದ್ದುನಿಂತರು.

ನೀಟ್ ಕುರಿತು ಪ್ರತ್ಯೇಕ ಚರ್ಚೆ ನಡೆಸುವ ಕುರಿತು ಸರ್ಕಾರ ಸ್ಪಷ್ಟ ಭರವಸೆ ನೀಡಬೇಕೆಂದು ಪಟ್ಟು ಹಿಡಿದರು ಮತ್ತು ಸಭಾತ್ಯಾಗ ನಡೆಸಿದರು.

Read More
Next Story