Punch to the throne | Rahul discusses state politics; Will he call on CA-DCM soon?
x

ಡಿಸಿಎಂ ಡಿ.ಕೆ. ಶಿವಕುಮಾರ್‌, ರಾಹುಲ್‌ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ(ಎಐ ಆಧಾರಿತ ಚಿತ್ರ)

ಗದ್ದುಗೆ ಗುದ್ದಾಟ| ರಾಜ್ಯ ರಾಜಕೀಯದ ಬಗ್ಗೆ ರಾಹುಲ್‌ ಚರ್ಚೆ; ಶೀಘ್ರವೇ ಸಿಎಂ-ಡಿಸಿಎಂಗೆ ಬುಲಾವ್‌?

ಇತ್ತೀಚೆಗೆ ನಡೆದ ಬಿಹಾರ ಚುನಾವಣಾ ಫಲಿತಾಂಶ ಕುರಿತು ಆತ್ಮಾವಲೋಕನದ ಸಭೆ ನಿಗದಿಯಾಗಿದೆ. ಸಭೆಯ ನಂತರ ಕರ್ನಾಟಕದ ಕಾಂಗ್ರೆಸ್ ಗದ್ದುಗೆ ಗುದ್ದಾಟ ಬಗ್ಗೆಯೂ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.


Click the Play button to hear this message in audio format

ರಾಜ್ಯ ಸರ್ಕಾರ 2.5ವರ್ಷ ಪೂರೈಸಿದ ನಂತರ ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ಸಂಪುಟ ಪುನಾರಚನೆ, ನಾಯಕತ್ವ ಗೊಂದಲ ಉಂಟಾಗಿದ್ದು, ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಗುರುವಾರ ಮಹತ್ವದ ಸಭೆ ನಡೆಯಲಿದೆ.

ಬಿಹಾರ ಚುನಾವಣೆ ಸೋಲು ಹಾಗೂ ಫಲಿತಾಂಶದ ಕುರಿತು ಆತ್ಮಾವಲೋಕನ ನಡೆಸಲು ಸಭೆ ಕರೆದಿದ್ದರೂ ಕರ್ನಾಟಕದ ನಾಯಕತ್ವ ಬಿಕ್ಕಟ್ಟು ಕೂಡ ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆಗೂ ಮುನ್ನ ಏನು ಮಾಡಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಜೊತೆ ರಾಹುಲ್‌ ಗಾಂಧಿ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.

ಪ್ರತಿ ದಿನ ಡಿಸಿಎಂ ಹಾಗೂ ಸಿಎಂ ಬಣದ ಆಪ್ತ ಶಾಸಕರು ಹಾಗೂ ಸಚಿವರು ಪಕ್ಷಕ್ಕೆ ಮುಜುಗರವಾಗುವ ರೀತಿ ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ ಶೀಘ್ರವೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ದೆಹಲಿಗೆ ಆಹ್ವಾನಿಸಿ, ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯದಂತೆ ಅಧಿಕಾರ ಹಸ್ತಾಂತರ ಹಾಗೂ ಸಂಪುಟ ಪುನಾರಚನೆಯ ಬಗ್ಗೆ ಹೈಕಮಾಂಡ್‌ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಗದ್ದುಗೆ ಗುದ್ದಾಟದ ನಡುವೆ ಸಚಿವ ಸಂಪುಟ ಸಭೆ

ಡಿಸಿಎಂ ಡಿಕೆಶಿ ಬಣದ ಶಾಸಕರು ಇತ್ತೀಚೆಗೆ ಹೈಕಮಾಂಡ್‌ ಭೇಟಿ ಮಾಡಲು ದೆಹಲಿ ಯಾತ್ರೆ ಮಾಡಿ, ಡಿಕೆಶಿ ಪರವಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಡಿಕೆಶಿಯನ್ನು ಶತಾಯಗತಾಯ ಸಿಎಂ ಮಾಡಲೇ ಬೇಕು ಎಂಬ ಉದ್ದೇಶದಿಂದ ಹಲವು ರಣತಂತ್ರಗಳನ್ನು ಮಾಡುತ್ತಿದ್ದಾರೆ. ಸಿಎಂ ಆಪ್ತ ಸಚಿವರು ಹಾಗೂ ಶಾಸಕರೂ ಭೋಜನಕೂಟ ಹಾಗೂ ಇನ್ನಿತರ ಹೆಸರಿನಲ್ಲಿ ಗುಪ್ತ ಸಭೆಗಳನ್ನು ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಗುರುವಾರ(ನ.27) ಸಚಿವ ಸಂಪುಟ ನಡೆಯಲಿದ್ದು, ಅಧಿಕಾರ ಹಸ್ತಾಂತರ ಅಥವಾ ಸಂಪುಟ ಪುನಾರಚನೆ ಕುರಿತು ಸಚಿವರುಗಳ ನಡುವೆ ಚರ್ಚೆಯಾಗುವ ಸಾಧ್ಯತೆ ಇದೆ.

Read More
Next Story