NEET SCAM| ಲೋಕಸಭೆಯಲ್ಲಿ ಚರ್ಚೆಗೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹ
x

NEET SCAM| ಲೋಕಸಭೆಯಲ್ಲಿ ಚರ್ಚೆಗೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹ

ಸಂಪ್ರದಾಯ ಮತ್ತು ಸಂಸದೀಯ ಕಾರ್ಯವಿಧಾನಗಳ ಪ್ರಕಾರ, ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಿದ ನಂತರ, ಲೋಕಸಭೆ ಮತ್ತು ರಾಜ್ಯಸಭೆ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ಪ್ರತ್ಯೇಕ ನಿರ್ಣಯಗಳನ್ನು ಅಂಗೀಕರಿಸುತ್ತವೆ.


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ (ಜೂನ್ 28) ಲೋಕಸಭೆಯಲ್ಲಿ ಇತರ ಪ್ರತಿಪಕ್ಷಗಳ ನಾಯಕರೊಂದಿಗೆ ನೀಟ್ ವಿಷಯ ಪ್ರಸ್ತಾಪಿಸಿದರು ಮತ್ತು ಸದನದಲ್ಲಿ ಈ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಮೊದಲು ಕೈಗೆತ್ತಿಕೊಳ್ಳಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.

`ಪ್ರತಿಪಕ್ಷಗಳು ಮತ್ತು ಸರ್ಕಾರದ ಪರವಾಗಿ ದೇಶದ ವಿದ್ಯಾರ್ಥಿಗಳಿಗೆ ಜಂಟಿ ಸಂದೇಶ ನೀಡಲು ಬಯಸಿದ್ದೇವೆ. ನಾವು ಇದನ್ನು ಪ್ರಮುಖ ವಿಷಯವೆಂದು ಪರಿಗಣಿಸುತ್ತೇವೆ. ಆದ್ದರಿಂದ, ವಿದ್ಯಾರ್ಥಿಗಳನ್ನು ಗೌರವಿಸಲು ನಾವು ಇಂದು ನೀಟ್ ಕುರಿತು ಚರ್ಚೆ ನಡೆಸುತ್ತೇವೆ,ʼ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಅವರು ಸ್ಪೀಕರ್‌ಗೆ ತಿಳಿಸಿದರು.

ಲೋಕಸಭೆಯನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ.

ಇದಕ್ಕೂ ಮುನ್ನ ಹಲವು ವಿರೋಧ ಪಕ್ಷದ ಸಂಸದರು ಉಭಯ ಸದನಗಳಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲು ನೋಟಿಸ್ ನೀಡಿದರು.

ಕಾಂಗ್ರೆಸ್ ಸಂಸದರಾದ ಸೈಯದ್ ನಾಸೆರ್ ಹುಸೇನ್ ಮತ್ತು ರಂಜೀತ್ ರಂಜನ್ ಅವರು ರಾಜ್ಯಸಭೆಯಲ್ಲಿ ನಿಯಮ 267 ರ ಅಡಿಯಲ್ಲಿ ಹಾಗೂ ಮಾಣಿಕಂ ಟ್ಯಾಗೋರ್ ನೀಟ್ ಕುರಿತು ಮುಂದೂಡಿಕೆ ನೋಟಿಸ್ ನೀಡಿದರು.

ಪ್ರಶ್ನೆಪತ್ರಿಕೆ ಸೋರಿಕೆ ಸರ್ಕಾರದ ಅಸಮರ್ಥತೆಯ ಪ್ರತಿಬಿಂಬ: ಕಾಂಗ್ರೆಸ್- ರಾಜ್ಯಸಭಾ ಸದಸ್ಯರು ನಿಯಮ 267 ರ ಅಡಿಯಲ್ಲಿ ಸದನದಲ್ಲಿ ಪಟ್ಟಿ ಮಾಡಲಾದ ಎಲ್ಲ ವ್ಯವಹಾರಗಳನ್ನು ಅಮಾನತುಗೊಳಿಸುವಂತೆ ಲಿಖಿತ ಸೂಚನೆ ಸಲ್ಲಿಸಬಹುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎ‌ಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ʻನೆಟ್‌ ಮತ್ತು ನೀಟ್‌ ಇತ್ತೀಚಿನ ಉದಾಹರಣೆಗಳು. ಕಳೆದ ಹತ್ತು ವರ್ಷಗಳಿಂದ ದೇಶಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪೇಪರ್ ಸೋರಿಕೆ ಮತ್ತು ದುಷ್ಕೃತ್ಯಗಳು ಅಸಂಖ್ಯವಾಗಿ ನಡೆದಿವೆ,ʼ ಎಂದು ಬರೆದಿದ್ದಾರೆ.

ʻದೇಶಾದ್ಯಂತ 2.26 ಕೋಟಿ ಯುವಕರು ಪ್ರಶ್ನೆಪತ್ರಿಕೆ ಸೋರಿಕೆಯಿಂದ ಸಮಸ್ಯೆಗೀಡಾಗಿದ್ದಾರೆ. ಇದು ಮೋದಿ ಸರ್ಕಾರದ ಅಸಮರ್ಥತೆಯನ್ನು ಹಾಗೂ ಭ್ರಷ್ಟಾಚಾರವನ್ನು ಪ್ರತಿಬಿಂಬಿಸುತ್ತದೆ. 48 ಲಕ್ಷ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರಿದ ಕುಖ್ಯಾತ ಯುಪಿ ಪೊಲೀಸ್ ಕಾನ್‌ಸ್ಟೆಬಲ್ ನೇಮಕ ಪರೀಕ್ಷೆ ಸೇರಿದಂತೆ ಹಲವು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಅಹಮದಾಬಾದ್ ಮೂಲದ ಪರೀಕ್ಷೆ ನಡೆಸುವ ಕಂಪನಿಗೆ ಮೋದಿ ಸರ್ಕಾರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ಉತ್ತೇಜನ ನೀಡುತ್ತಿವೆ,ʼ ಎಂದು ಆರೋಪಿಸಿದರು.

ʻಯುಪಿ ಮತ್ತು ಬಿಹಾರ ಸರ್ಕಾರಗಳು ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿವೆ. ಆದರೆ ಅಕ್ಟೋಬರ್ 2023 ರ ಹೊತ್ತಿಗೆ ಮೋದಿ ಸರ್ಕಾರ ಅವರಿಗೆ 80 ಕೋಟಿ ರೂ.ನ ಗುತ್ತಿಗೆ ಒಪ್ಪಂದ ನೀಡಿದೆ. ಏಕೆಂದರೆ, ಸಂಸ್ಥೆಯ ಮಾಲೀಕ ಬಿಜೆಪಿಯ ಸೈದ್ಧಾಂತಿಕ ಮತ್ತು ರಾಜಕೀಯ ಬೆಂಬಲಿ ಗ,ʼ ಎಂದು ದೂರಿದ್ದಾರೆ.

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ), ನೀಟ್-ಯುಜಿ ಪರೀಕ್ಷೆಯನ್ನು ಮೇ 5 ರಂದು ಎನ್‌ಟಿಎ ನಡೆಸಿತು. ಇದರಲ್ಲಿ ಸುಮಾರು 24 ಲಕ್ಷ ಅಭ್ಯರ್ಥಿಗಳು ಭಾಗವಹಿಸಿದ್ದರು. ಜೂನ್ 4 ರಂದು ಫಲಿತಾಂಶ ಪ್ರಕಟಿಸಲಾಯಿತು. ಆನಂತರ, ಬಿಹಾರ ಮತ್ತಿತರ ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಇತರ ಅಕ್ರಮಗಳ ಆರೋಪಗಳು ಕೇಳಿಬಂದವು. ಆನಂತರ, ಶಿಕ್ಷಣ ಸಚಿವಾಲಯವು ವಿಶ್ವವಿದ್ಯಾನಿಲಯ ಅನುದಾನ ಆಯೋಗ-ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ-ನೆಟ್) ಮತ್ತು ನೀಟ್ (ಸ್ನಾತ‌ ಕೋತ್ತರ) ಪರೀಕ್ಷೆಗಳನ್ನು ಪರೀಕ್ಷೆಗಳ ಸಮಗ್ರತೆಗೆ ಧಕ್ಕೆಯುಂಟಾಗಿರಬಹುದು ಎಂದು ರದ್ದುಗೊಳಿಸಿತು.

ವಂದನಾ ನಿರ್ಣಯ: ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಶುಕ್ರವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವ ನಿರೀಕ್ಷೆ ಇದ್ದಿತ್ತು.ಲೋಕಸಭೆಯ ಬುಲೆಟಿನ್ ಪ್ರಕಾರ, ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ಅವರು ವಂದನಾ ನಿರ್ಣಯವನ್ನು ಬೆಂಬಲಿಸಲಿದ್ದಾರೆ. ರಾಜ್ಯಸಭೆಯಲ್ಲಿ ಬಿಜೆಪಿಯ ಸುಧಾಂಶು ತ್ರಿವೇದಿ ಅವರು ಶುಕ್ರವಾರ (ಜೂನ್ 28) ಪ್ರಸ್ತಾವನೆ ಮಂಡಿಸಲಿದ್ದಾರೆ.

ಸಂಪ್ರದಾಯ ಮತ್ತು ಸಂಸದೀಯ ಕಾರ್ಯವಿಧಾನಗಳ ಪ್ರಕಾರ, ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣದ ನಂತರ, ಲೋಕಸಭೆ ಮತ್ತು ರಾಜ್ಯಸಭೆಯು ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ಪ್ರತ್ಯೇಕ ನಿರ್ಣಯಗಳನ್ನು ಅಂಗೀಕರಿಸುತ್ತದೆ.

ಉಭಯ ಸದನಗಳಲ್ಲಿ ಪ್ರಸ್ತಾಪದ ಮೇಲಿನ ಚರ್ಚೆಯಲ್ಲಿ ಆಡಳಿತ ಮತ್ತು ವಿರೋಧ ಪೀಠಗಳು ಪರಸ್ಪರ ವಾಗ್ದಾಳಿ ನಡೆಸುವ ಸಾಧ್ಯತೆಯಿದೆ.

Read More
Next Story