
ಮತಕಳ್ಳತನದ ಬಗ್ಗೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿವರಣೆ ನೀಡಿದರು.
ಬ್ರೆಜಿಲ್ ಮಾಡೆಲ್ ಹೆಸರಲ್ಲಿ 22 ಬಾರಿ ವೋಟ್! ಹರಿಯಾಣದಲ್ಲಿ 25 ಲಕ್ಷ ನಕಲಿ ಮತ; ರಾಹುಲ್ ಗಾಂಧಿ ಆರೋಪ
ಹರಿಯಾಣದ ಮತದಾರರ ಪಟ್ಟಿಯಲ್ಲಿ ಈಕೆಯ ಫೋಟೋ ಬಳಸಿ ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ, ವಿಲ್ಮಾ ಎಂಬ 22 ಬೇರೆ ಬೇರೆ ಹೆಸರುಗಳಲ್ಲಿ ಮತದಾರರ ಚೀಟಿ ಸೃಷ್ಟಿಸಲಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
"ಹರಿಯಾಣದಲ್ಲಿ ನಡೆದಿದ್ದು ಚುನಾವಣೆಯಲ್ಲ, ವ್ಯವಸ್ಥಿತ 'ಸರ್ಕಾರ್ ಚೋರಿ' (ಸರಕಾರದ ಕಳ್ಳತನ). ನಮ್ಮ ಗೆಲುವನ್ನು ಬಿಜೆಪಿಯು, ಚುನಾವಣಾ ಆಯೋಗದ ಜೊತೆಗೂಡಿ ಕಸಿದುಕೊಂಡಿದೆ," ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಬಿಹಾರ ಚುನಾವಣೆಗೆ ಕೆಲವೇ ಗಂಟೆಗಳ ಮೊದಲು "ಎಚ್-ಫೈಲ್ಸ್" (H-Files) ಹೆಸರಿನಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ಚುನಾವಣಾ ಪ್ರಕ್ರಿಯೆಯನ್ನೇ ಬುಡಮೇಲು ಮಾಡುವಂತಹ ಅಕ್ರಮಗಳ ಸರಣಿಯನ್ನು ಬಯಲಿಗೆಳೆದಿದ್ದಾರೆ.
ಸೀಮಾ, ಸ್ವೀಟಿ, ಸರಸ್ವತಿ... ಎಲ್ಲರೂ ಒಬ್ಬಳೇ ಬ್ರೆಜಿಲ್ ಮಾಡೆಲ್!
ಸುದ್ದಿಗೋಷ್ಠಿಯಲ್ಲಿ ಎಲ್ಲರ ಗಮನ ಸೆಳೆದ ಪ್ರಮುಖ ಆರೋಪವೆಂದರೆ, ಬ್ರೆಜಿಲ್ ಮೂಲದ ರೂಪದರ್ಶಿಯೊಬ್ಬರ ಫೋಟೋವನ್ನು ಬಳಸಿ 22 ಬಾರಿ ಮತ ಚಲಾಯಿಸಿರುವುದು. ರಾಹುಲ್ ಗಾಂಧಿ, ರೂಪದರ್ಶಿಯ ಫೋಟೋ ಪ್ರದರ್ಶಿಸಿ, "ಈಕೆ ಬ್ರೆಜಿಲ್ ಮಾಡೆಲ್ ಮ್ಯಾಥಿಯಸ್ ಫೆರೆರೋ. ಆದರೆ ಹರಿಯಾಣದ ಮತದಾರರ ಪಟ್ಟಿಯಲ್ಲಿ ಈಕೆಯ ಫೋಟೋ ಬಳಸಿ ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ, ವಿಲ್ಮಾ ಎಂಬ 22 ಬೇರೆ ಬೇರೆ ಹೆಸರುಗಳಲ್ಲಿ ಮತದಾರರ ಚೀಟಿ ಸೃಷ್ಟಿಸಲಾಗಿದೆ. ಈ ಮೂಲಕ 10 ಬೇರೆ ಬೇರೆ ಬೂತ್‌ಗಳಲ್ಲಿ ಮತದಾನ ಮಾಡಲಾಗಿದೆ," ಎಂದು ಆರೋಪಿಸಿದರು. "ಇದು ಕೇವಲ ಒಂದು ಉದಾಹರಣೆ, ಇಂತಹ 25 ಲಕ್ಷ ನಕಲಿ ಮತದಾರರು ಹರಿಯಾಣದಲ್ಲಿದ್ದಾರೆ," ಎಂದು ಅವರು ಹೇಳಿದರು.
'ಆಪರೇಷನ್ ಸರ್ಕಾರ್ ಚೋರಿ': 25 ಲಕ್ಷ ನಕಲಿ ಮತದ ಲೆಕ್ಕ
ಹರಿಯಾಣದಲ್ಲಿ ಕಾಂಗ್ರೆಸ್‌ನ "ಅಭೂತಪೂರ್ವ ಗೆಲುವನ್ನು" ಸೋಲಾಗಿ ಪರಿವರ್ತಿಸಲು ಒಂದು ವ್ಯವಸ್ಥಿತ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿದ ರಾಹುಲ್, 25 ಲಕ್ಷಕ್ಕೂ ಹೆಚ್ಚು ನಕಲಿ ಮತಗಳ ಲೆಕ್ಕವನ್ನು ಮುಂದಿಟ್ಟಿದ್ದಾರೆ. ಪ್ರತಿ 8 ಮತದಾರರಲ್ಲಿ ಒಬ್ಬರು ನಕಲಿ: ಹರಿಯಾಣದ ಒಟ್ಟು ಮತದಾರರಲ್ಲಿ 12.5%, ಅಂದರೆ ಸುಮಾರು 25 ಲಕ್ಷ ಮತದಾರರು ನಕಲಿ ಎಂದು ಅವರು ಆರೋಪಿಸಿದ್ದಾರೆ.
1.2 ಲಕ್ಷ ಮತದಾರರ ಚೀಟಿಗಳಲ್ಲಿ ಒಂದೇ ಫೋಟೋವನ್ನು ಬೇರೆ ಬೇರೆ ಹೆಸರು ಮತ್ತು ವಿವರಗಳೊಂದಿಗೆ ಬಳಸಲಾಗಿದೆ. 93,174 ಮತದಾರರ ವಿಳಾಸಗಳು ಸಂಪೂರ್ಣವಾಗಿ ನಕಲಿಯಾಗಿವೆ. ಒಂದೇ ಮನೆಯ ವಿಳಾಸದಲ್ಲಿ 10ಕ್ಕಿಂತ ಹೆಚ್ಚು ಮತದಾರರನ್ನು ನೋಂದಾಯಿಸಿರುವ 19.26 ಲಕ್ಷ ಪ್ರಕರಣಗಳಿವೆ. ಒಂದೇ ಮನೆಯಲ್ಲಿ 500 ಮತದಾರರ ಹೆಸರು ಪತ್ತೆಯಾಗಿದೆ, ಆದರೆ ಆ ಮನೆ ಅಸ್ತಿತ್ವದಲ್ಲಿಲ್ಲ ಎಂದು ರಾಹುಲ್ ದೂರಿದ್ದಾರೆ.
ಚುನಾವಣಾ ಆಯೋಗವೇ ಬಿಜೆಪಿಯ ಪಾಲುದಾರ!
"ಚುನಾವಣಾ ಆಯೋಗವು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ 'ಪಾಲುದಾರಿಕೆ' ಮಾಡಿಕೊಂಡು, ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ನಾಶಮಾಡುತ್ತಿದೆ," ಎಂದು ರಾಹುಲ್ ಗಾಂಧಿ ನೇರವಾಗಿ ಆರೋಪಿಸಿದರು. "ಈ ಅಕ್ರಮಗಳನ್ನು ತಡೆಯುವ ಬದಲು, ಚುನಾವಣಾ ಆಯೋಗವು ಸಿಸಿಟಿವಿ ದೃಶ್ಯಗಳನ್ನು ನಾಶಪಡಿಸುವ ಮೂಲಕ ಬಿಜೆಪಿಗೆ ಸಹಾಯ ಮಾಡುತ್ತಿದೆ," ಎಂದರು.
ಕಾಂಗ್ರೆಸ್ ದೂರು ನೀಡಿಲ್ಲವೇಕೆ?
ರಾಹುಲ್ ಗಾಂಧಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗದ ಮೂಲಗಳು, "ಮತದಾರರ ಪಟ್ಟಿಯ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದಾಗ ಕಾಂಗ್ರೆಸ್‌ನ ಬೂತ್ ಮಟ್ಟದ ಏಜೆಂಟರು ಯಾಕೆ ಒಂದೇ ಒಂದು ದೂರನ್ನೂ ಸಲ್ಲಿಸಲಿಲ್ಲ?" ಎಂದು ಪ್ರಶ್ನಿಸಿವೆ. ಈ ಆರೋಪಗಳು "ಆಧಾರರಹಿತ" ಎಂದು ಹೇಳಿರುವ ಆಯೋಗ, ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿಗಳಿಂದ ವಿವರವಾದ ಪ್ರತಿಕ್ರಿಯೆ ಕೊಡಿಸುವುದಾಗಿ ತಿಳಿಸಿದೆ.
ಈ ಸ್ಫೋಟಕ ಆರೋಪ-ಪ್ರತ್ಯಾರೋಪಗಳು ಬಿಹಾರ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ದೇಶದ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರ ಮಾಧ್ಯಮಗೋಷ್ಟಿ ಲಿಂಕ್ ಇಲ್ಲಿದೆ.

