
PV Sindhu : ಪಿವಿ ಸಿಂಧೂ ಮದುವೆ ಮೊದಲ ಚಿತ್ರ ಬಹಿರಂಗ
PV Sindhu: ಖ್ಯಾತ ಷಟ್ಲರ್ ಪಿವಿ ಸಿಂಧೂ ಅವರು ಟೆಕ್ ಕಂಪನಿಯೊಂದರ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವೆಂಕಟ ಸಾಯಿದತ್ತ ಅವರನ್ನು ಉದಯಪುರದಲ್ಲಿ ಮದುವೆಯಾಗಿದ್ದಾರೆ.
ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಎರಡು ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ವೆಂಕಟ ದತ್ತ ಸಾಯಿ ಅವರ ವಿವಾಹದ ಮೊದಲ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಸಾಂಪ್ರದಾಯಿಕ ವಿವಾಹ ಉಡುಪುಗಳನ್ನು ಧರಿಸಿದ ಸಿಂಧು ಮತ್ತು ದತ್ತಾ ಡಿಸೆಂಬರ್ 22 ರಂದು ಉದಯಪುರದಲ್ಲಿ ವಿವಾಹವಾಗಿದ್ದಾರೆ.
ಮದುವೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸಮಾರಂಭದ ಚಿತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಬ್ಯಾಡ್ಮಿಂಟನ್ ಚಾಂಪಿಯನ್ ಮದುವೆಯ ಮೊದಲ ಚಿತ್ರ ಇದಾಗಿದ್ದರಿಂದ ಗಜೇಂದ್ರೆ ಅವರ ಟ್ವೀಟ್ ತಕ್ಷಣದಲ್ಲೇ ವೈರಲ್ ಆಯಿತು.
"ನಮ್ಮ ಬ್ಯಾಡ್ಮಿಂಟನ್ ಚಾಂಪಿಯನ್ ಒಲಿಂಪಿಯನ್ ಪಿ.ವಿ.ಸಿಂಧು ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದೆ. ಉದಯಪುರದಲ್ಲಿ ವೆಂಕಟ ದತ್ತ ಸಾಯಿ ಅವರನ್ನು ವಿವಾಹವಾಗಿದ್ದಾರೆ. ನವ ದಂಪತಿಗೆನನ್ನ ಶುಭಾಶಯಗಳು ಮತ್ತು ಆಶೀರ್ವಾದಗಳನ್ನು " ಎಂದು ಶೇಖಾವತ್ ಸೋಮವಾರ (ಡಿಸೆಂಬರ್ 23) ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.
ಸಿಂಧು ಮತ್ತು ಹೈದರಾಬಾದ್ ಮೂಲದ ಟೆಕ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ದತ್ತಾ ಡಿಸೆಂಬರ್ 14ರ ಶನಿವಾರ ಸೀಮಿತ ಅತಿಥಿಗಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಡಿಸೆಂಬರ್ 24ರಂದು ಹೈದರಾಬಾದ್‌ನಲ್ಲಿ ಅವರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಕುಟುಂಬ ಮತ್ತು ಸ್ನೇಹಿತರ ವಲಯ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ.
ಸ್ಟಾರ್ ಜೋಡಿಯ ಮದುವೆ ಡಿಸೆಂಬರ್ 20ರಂದು ''ಸಂಗೀತ್'' ಸಮಾರಂಭದೊಂದಿಗೆ ಪ್ರಾರಂಭವಾದವು. ನಂತರ ಹಲ್ದಿ, ಪೆಲ್ಲಿಕುತುರು (ವಧು ಮತ್ತು ಅವಳ ವೈವಾಹಿಕ ಜೀವನಕ್ಕೆ ಪರಿವರ್ತನೆಯನ್ನು ಆಚರಿಸುವ ವಿವಾಹಪೂರ್ವ ಸಮಾರಂಭ) ಮತ್ತು ಮೆಹೆಂದಿ ಕಾರ್ಯಕ್ರಮ ಡಿಸೆಂಬರ್ 21 ರಂದು ನಡೆಯಿತು.
ಸಿಂಧೂಗೆ ಮುಂದಿನ ಪಂದ್ಯಾವಳಿ
ಜನವರಿ ಆರಂಭದಲ್ಲಿ ನಡೆಯಲಿರುವ ಮಲೇಷ್ಯಾ ಓಪನ್ ಸೂಪರ್ 1000 ಟೂರ್ನಮೆಂಟ್ ನಲ್ಲಿ ಸಿಂಧು ಭಾಗವಹಿಸುವ ನಿರೀಕ್ಷೆಯಿದೆ. ಎರಡು ವಾರಗಳ ಹಿಂದೆ ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ನಂತರ ಸಿಂಧು ಇದೀಗ ತಮ್ಮ ಫಾರ್ಮ್ ಮುಂದುವರಿಸುವ ಗುರಿ ಹೊಂದಿದ್ದಾರೆ.