ಪುರಿ ರಥಯಾತ್ರೆ ವೇಳೆ ಉರುಳಿದ ಬಲಭದ್ರನ ವಿಗ್ರಹ, 9 ಮಂದಿಗೆ ಗಾಯ
x
ಒಡಿಶಾದ ಪುರಿಯಲ್ಲಿ ರಥಯಾತ್ರೆ ನಂತರ ಬಲಭದ್ರ ದೇವರ ವಿಗ್ರಹ ಬಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪುರಿ ರಥಯಾತ್ರೆ ವೇಳೆ ಉರುಳಿದ ಬಲಭದ್ರನ ವಿಗ್ರಹ, 9 ಮಂದಿಗೆ ಗಾಯ

ಬಲಭದ್ರ ದೇವರ ಮರದ ವಿಗ್ರಹವನ್ನು ಗುಂಡಿಚಾ ದೇವಸ್ಥಾನಕ್ಕೆ ಕೊಂಡೊಯ್ಯಲು ರಥದಿಂದ ಕೆಳಗೆ ಇಳಿಸುತ್ತಿ ದ್ದಾಗ ಅವಘಡ ಸಂಭವಿಸಿದೆ.


ಪುರಿ ಜಗನ್ನಾಥನ ರಥಯಾತ್ರೆ ಅಂಗವಾಗಿ ಬಲಭದ್ರ ದೇವರ ವಿಗ್ರಹವನ್ನು ರಥದಿಂದ ದೇವಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾಗ, ವಿಗ್ರಹ ಬಿದ್ದು ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪುರಿ ಕಲೆಕ್ಟರ್ ಸಿದ್ಧಾರ್ಥ್ ಶಂಕರ್ ಸ್ವೈನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಪಘಾತ ಹೇಗೆ ಸಂಭವಿಸಿತು?: ರಾತ್ರಿ 9 ಗಂಟೆ ನಂತರ ಬಲಭದ್ರ ದೇವರ ರಥದಿಂದ ಭಾರವಾದ ಮರದ ವಿಗ್ರಹವನ್ನು ಗುಂಡಿಚಾ ದೇವಸ್ಥಾನಕ್ಕೆ ಕೊಂಡೊಯ್ಯಲು ಇಳಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದನ್ನು ʻಪಹಂಡಿʼ ಆಚರಣೆ ಎಂದು ಕರೆಯಲಾಗುತ್ತದೆ. ವಿಗ್ರಹವನ್ನು ಹೊತ್ತಿದ್ದವರು ನಿಯಂತ್ರಣ ಕಳೆದುಕೊಂಡಿದ್ದಾರೆ. ವಿಗ್ರಹಕ್ಕೆ ಕಟ್ಟಿದ್ದ ಹಗ್ಗದಲ್ಲಿ ಸಮಸ್ಯೆಯಿಂದ ಅಪಘಾತ ಸಂಭವಿಸಿದೆ ಎಂದು ಗಾಯಗೊಂಡ ವ್ಯಕ್ತಿ ಹೇಳಿದರು.

ಆಸ್ಪತ್ರೆಗೆ ದಾಖಲಾದವರಲ್ಲಿ ಇಬ್ಬರು ಬಿಡುಗಡೆ ಆಗಿದ್ದಾರೆ.

ಪುರಿಗೆ ಆಗಮಿಸಿದ ಕಾನೂನು ಸಚಿವ: ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಪುರಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಅವರಿಗೆ ಸೂಚಿಸಿದರು. ಪುರಿ ಜಗನ್ನಾಥ ದೇವಾಲಯವು ರಾಜ್ಯ ಸರ್ಕಾರದ ಕಾನೂನು ಇಲಾಖೆ ಆಡಳಿತಕ್ಕೆ ಸೇರಿದೆ.

ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಕೂಡ ಹರಿಚಂದನ್‌ ಅವರೊಂದಿಗೆ ಪುರಿಗೆ ಭೇಟಿ ನೀಡಿ, ಗಾಯಗೊಂಡವರೊಂದಿಗೆ ಮಾತನಾಡಿದರು.

ಆಚರಣೆಗಳು ಪೂರ್ಣ: ʻಜಗನ್ನಾಥನ ಆಶೀರ್ವಾದದಿಂದ ಎಲ್ಲ ಗಾಯಾಳುಗಳು ಆರೋಗ್ಯವಾಗಿದ್ದಾರೆ. ಪೂಜೆಗೆ ಸಂಬಂಧಿಸಿದ ಆಚರಣೆಗಳು ಮುಂದುವರಿದಿವೆ,ʼ ಎಂದು ಹರಿಚಂದನ್ ಸುದ್ದಿಗಾರರಿಗೆ ತಿಳಿಸಿದರು. ಮುಂದಿನ ಕ್ರಮಕ್ಕಾಗಿ ನಾವು ಮುಖ್ಯಮಂತ್ರಿಗೆ ವರದಿ ಮಾಡುತ್ತೇವೆ ಎಂದು ಪರಿದಾ ಹೇಳಿದರು.

ಒಡಹುಟ್ಟಿದ ದೇವತೆಗಳ ಪೂಜೆ, ಅಂದರೆ, ಭಗವಾನ್ ಜಗನ್ನಾಥ, ದೇವಿ ಸುಭದ್ರ ಮತ್ತು ಭಗವಾನ್ ಬಲಭದ್ರ, ಅಪಘಾತದ ನಂತರ ಪುನರಾರಂಭವಾಯಿತು. ಎಲ್ಲ ವಿಗ್ರಹಗಳನ್ನು ದೇವರ ಜನ್ಮಸ್ಥಳವೆಂದು ಪರಿಗಣಿಸಲಾದ ಗುಂಡಿಚಾ ದೇವಾಲಯದೊಳಗೆ ತೆಗೆದುಕೊಂಡು ಹೋಗಲಾಯಿತು.

ವಿಗ್ರಹಗಳು 'ಬಹುದಾ ಜಾತ್ರೆ' ಅಥವಾ ಜುಲೈ 15 ರಂದು ನಡೆಯಲಿರುವ ರಥೋತ್ಸವದವರೆಗೆ ಗುಂಡಿಚಾ ದೇವಾಲಯದಲ್ಲಿ ಇರಲಿದ್ದು, ಆನಂತರ ಜಗನ್ನಾಥ ದೇವಾಲಯಕ್ಕೆ ವಾಪಸು ತರಲಾಗುತ್ತದೆ.

Read More
Next Story