
ಪಂಜಾಬ್ನಲ್ಲಿ ನಕಲಿ ಮದ್ಯ ಸೇವಿಸಿ 14 ಮಂದಿ ಬಲಿ; ಐವರು ಬಂಧನ
ನಕಲಿ ಮದ್ಯ ಸೇವನೆಯಿಂದ ಅಸ್ವಸ್ಥಗೊಂಡಿರುವ ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಂಜಾಬ್‌ನ ಅಮೃತಸರ ಜಿಲ್ಲೆಯ ಐದು ಗ್ರಾಮಗಳಲ್ಲಿ ಕಳಪೆ ಗುಣಮಟ್ಟದ ಮದ್ಯ ಸೇವನೆಯಿಂದ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಭಂಗಾಲಿ, ಪಟಾಲ್‌ಪುರಿ, ಮರಾರಿ ಕಲಾಂ, ಥೆರೆವಾಲ್ ಮತ್ತು ತಲವಂಡಿ ಘುಮಾನ್ ಗ್ರಾಮಗಳಲ್ಲಿ ಈ ಸಾವುಗಳು ಸಂಭವಿಸಿವೆ. ನಕಲಿ ಮದ್ಯ ಸೇವನೆಯಿಂದ ಅಸ್ವಸ್ಥಗೊಂಡಿರುವ ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಮೃತಸರ ಜಿಲ್ಲಾಧಿಕಾರಿ ಸಕ್ಷಿ ಸಾಹ್ನಿ ಅವರು 14 ಮಂದಿ ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದು, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮನಿಂದರ್ ಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಪ್ರಭ್‌ಜೀತ್ ಸಿಂಗ್, ಕುಲ್‌ಬೀರ್ ಸಿಂಗ್, ಸಾಹಿಬ್ ಸಿಂಗ್, ಗುರ್‌ಜಂತ್ ಸಿಂಗ್ ಮತ್ತು ನಿಂದರ್ ಕೌರ್ ಎಂಬ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳು ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಅಬಕಾರಿ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.