ಪುಣೆ ಪೋರ್ಷ್ ಪ್ರಕರಣ: ಅಪ್ರಾಪ್ತ ವಯಸ್ಕನ ರಕ್ತದ ಮಾದರಿ ಬದಲು
ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಇಲಾಖೆಯು ಅಪ್ರಾಪ್ತ ವಯಸ್ಕನ ರಕ್ತದ ಮಾದರಿಯ ದುರ್ಬಳಕೆ ಕುರಿತು ತನಿಖೆ ನಡೆಸಲು ತ್ರಿಸದಸ್ಯ ಸಮಿತಿಯನ್ನು ರಚಿಸಿದೆ.
ಪುಣೆಯಲ್ಲಿ ಇಬ್ಬರು ಐಟಿ ವೃತ್ತಿಪರರನ್ನು ಕೊಂದ ಪೋರ್ಷ್ ಕಾರು ಓಡಿಸುತ್ತಿದ್ದ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಅಪ್ರಾಪ್ತ ವಯಸ್ಕನ ರಕ್ತದ ಮಾದರಿಯನ್ನು ಆತನ ತಾಯಿಯ ರಕ್ತದಿಂದ ಬದಲಿಸಿರಬಹುದು ಎಂದು ಮಾಧ್ಯಮ ವರದಿಗಳು ಗುರುವಾರ ತಿಳಿಸಿವೆ.
ರಕ್ತದ ಮಾದರಿಯ ಬದಲು ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸ್ವಾಮ್ಯದ ಸಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ಸಿಬ್ಬಂದಿಯನ್ನು ಬಂಧಿಸಿ, ಅಮಾನತುಗೊಳಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಬಾಲಕನ ರಕ್ತದಲ್ಲಿ ಮದ್ಯಸಾರ ಇರುವುದನ್ನು ಮರೆಮಾಚಲು ಈ ಕೃತ್ಯ ನಡೆದಿದೆ. ಬಿ.ಜೆ. ವೈದ್ಯಕೀಯ ಕಾಲೇಜು ಮತ್ತು ಸಸೂನ್ ಸಿವಿಲ್ ಆಸ್ಪತ್ರೆಯ ಡೀನ್ ಡಾ. ವಿನಾಯಕ್ ಕಾಳೆ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದ್ದು, ಡಾ ಚಂದ್ರಕಾಂತ್ ಮ್ಹಾಸ್ಕೆ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.
ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತ ರಾಜೀವ್ ನಿವಾಟ್ಕರ್ ಅವರ ಶಿಫಾರಸಿನ ಮೇರೆಗೆ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಅಜಯ್ ತಾವರೆ ಮತ್ತು ವೈದ್ಯಾಧಿಕಾರಿ ಡಾ.ಶ್ರೀಹರಿ ಹಾಲ್ನೋರ್ ಅವರನ್ನು ಅಮಾನತುಗೊಳಿಸಲಾಗಿದೆ.
17 ವರ್ಷದ ಬಾಲಾಪರಾಧಿಯ ರಕ್ತದ ಮಾದರಿಗಳನ್ನು ಕಸದ ತೊಟ್ಟಿಗೆ ಎಸೆದು, ಮದ್ಯದ ಕುರುಹುಯಿದ್ದ ಇನ್ನೊಬ್ಬ ವ್ಯಕ್ತಿಯ ರಕ್ತದ ಮಾದರಿಯಿಂದ ಬದಲಿಸಲಾಗಿದೆ ಎಂಬುದು ಬೆಳಕಿಗೆ ಬಂದ ನಂತರ ಪುಣೆ ಪೊಲೀಸರು ಇಬ್ಬರು ವೈದ್ಯರು ಮತ್ತು ಸಸೂನ್ ಆಸ್ಪತ್ರೆಯ ಸಿಬ್ಬಂದಿ ಅತುಲ್ ಘಾಟ್ಕಂಬಳೆ ಅವರನ್ನು ಬಂಧಿಸಿದ್ದರು. ಮೂವರನ್ನು ಮೇ 30ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ತ್ರಿಸದಸ್ಯ ಸಮಿತಿ ನೇಮಕ: ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಇಲಾಖೆಯು ಮೇ 27ರಂದು ಮುಂಬೈನ ಗ್ರ್ಯಾಂಟ್ಸ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಪಲ್ಲವಿ ಸಪಾಲೆ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದು, ರಕ್ತದ ಮಾದರಿಯ ದುರ್ಬಳಕೆ ಆರೋಪದ ಕುರಿತು ತನಿಖೆಗೆ ಸೂಚಿಸಿತು.
ಪೊಲೀಸ್ ಮೂಲಗಳ ಪ್ರಕಾರ, ಬಾಲಾಪರಾಧಿಯ ರಕ್ತದ ಮಾದರಿಯನ್ನು ಬದಲಿಸಲು ಮಹಿಳೆ ಮತ್ತು ಇಬ್ಬರು ವೃದ್ಧರ ರಕ್ತದ ಮಾದರಿ ಗಳನ್ನು ಸಂಗ್ರಹಿಸಲಾಗಿದೆ ಎಂದು ಸಮಿತಿಯ ವರದಿ ಬಹಿರಂಗಪಡಿಸಿದೆ. ಬಾಲಾಪರಾಧಿಯ ತಾಯಿಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಶಂಕಿಸಿದೆ.
ಪೊಲೀಸರ ಪ್ರಕಾರ, ಪುಣೆ ನಗರದ ಕಲ್ಯಾಣಿ ನಗರ ಪ್ರದೇಶದಲ್ಲಿ ಮೇ 19 ರ ಮುಂಜಾನೆ ನಡೆದ ಅಪಘಾತದ ಸಮಯದಲ್ಲಿ ಬಾಲಾಪರಾಧಿ ಚಾಲಕ ಮದ್ಯಪಾನ ಮಾಡಿದ್ದ.ಕೋಸಿ ರೆಸ್ಟೋರೆಂಟ್ ಮತ್ತು ಬ್ಲಾಕ್ ಕ್ಲಬ್‌ನಲ್ಲಿ ಪಾರ್ಟಿ ಮಾಡಿದ್ದ.
ಬಾಲಾಪರಾಧಿಯ ರಕ್ತದ ಮಾದರಿಯನ್ನು ಇನ್ನೊಬ್ಬ ವ್ಯಕ್ತಿಯ ಮಾದರಿಯೊಂದಿಗೆ ಬದಲಿಸಲು ಇಬ್ಬರು ವೈದ್ಯರೊಡನೆ ಹಣಕಾಸಿನ ವಹಿ ವಾಟು ನಡೆದಿದೆ ಎಂದು ಪ್ರಾಸಿಕ್ಯೂಷನ್ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿತ್ತು. ಬಾಲಾಪರಾಧಿಯ ತಂದೆ ಒಬ್ಬರು ವೈದ್ಯರಲ್ಲಿ ಮಾದರಿ ಗಳನ್ನು ಬದಲಿಸುವಂತೆ ಕೇಳಿಕೊಂಡಿದ್ದರು. ರಕ್ತದ ಮಾದರಿಗಳನ್ನು ಬದಲಿಸಲು ಯಾರೆಲ್ಲ ಸೂಚನೆ ನೀಡಿದ್ದಾರೆ ಎಂಬುದನ್ನು ತನಿಖೆ ಮಾಡಲು ಪೊಲೀಸರು ಬಯಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಅಪಘಾತದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತನಿಖೆಯನ್ನು ತಡೆಯಲು ಯತ್ನಿಸಿದ ಆರೋಪದ ಮೇಲೆ ಆತನ ತಂದೆ ಮತ್ತು ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ. ಅಜ್ಜ ಮೇ 19 ರಿಂದ ಮೇ 20 ರವರೆಗೆ ತಮ್ಮ ಬಂಗಲೆಯಲ್ಲಿ ಬಾಲಕವನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದರು ಮತ್ತು ಅಪಘಾತದ ಹೊಣೆಗಾರಿಕೆ ಹೊರುವಂತೆ ಒತ್ತಡ ಹೇರಿದ್ದರು. ಬಾಲಾಪರಾಧಿಯನ್ನು ಜೂನ್ 5 ರವರೆಗೆ ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದೆ.