ಮೋದಿ, ಅಡ್ವಾಣಿ ಅವರ ಟೀಕೆ: ಪತ್ರಕರ್ತ ನಿಖಿಲ್ ವಾಗ್ಲೆ ಕಾರ್‌ ಮೇಲೆ ದಾಳಿ
x

ಮೋದಿ, ಅಡ್ವಾಣಿ ಅವರ ಟೀಕೆ: ಪತ್ರಕರ್ತ ನಿಖಿಲ್ ವಾಗ್ಲೆ ಕಾರ್‌ ಮೇಲೆ ದಾಳಿ


ಪುಣೆ, ಫೆ.9- ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಪತ್ರಕರ್ತ ನಿಖಿಲ್ ವಾಗ್ಲೆ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ಆಡಳಿತ ಪಕ್ಷ ಎಲ್.ಕೆ. ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿದ್ದನ್ನು ಪ್ರತಿಭಟಿಸಿ, ಪ್ರಧಾನಿ ಹಾಗೂ ಆಡ್ವಾಣಿ ಅವರನ್ನು ವಾಗ್ಲೆ ಟೀಕಿಸಿದ್ದರು.

ರಾಷ್ಟ್ರ ಸೇವಾದಳವು ಸಿಂಘಡ್ ರಸ್ತೆ ಪ್ರದೇಶದಲ್ಲಿ ಆಯೋಜಿಸಿದ್ದ ‘ನಿರ್ಭಯ್ ಬನೊ’ ಕಾರ್ಯಕ್ರಮಕ್ಕೆ ವಾಗ್ಲೆ, ಅಸೀಮ್ ಸರೋದೆ ಮತ್ತು ವಿಶ್ವಂಭರ ಚೌಧರಿ ಅವರೊಂದಿಗೆ ತೆರಳುತ್ತಿದ್ದಾಗ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮಸಿ ಎರಚಿದರು ಎಂದು ಡೆಕ್ಕನ್ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಖಂಡೋಜಿ ಬಾಬಾ ಚೌಕದಲ್ಲಿ ಕಾರಿನ ಮೇಲೆ ದಾಳಿ ನಡೆಸಿದ್ದು, ವಿಂಡ್‌ಸ್ಕ್ರೀನ್ ಮತ್ತು ಗಾಜುಗಳು ಪುಡಿಯಾದವು. ಪೊಲೀಸ್ ರಕ್ಷಣೆಯಲ್ಲಿ ವಾಗ್ಲೆ ಕಾರ್ಯಕ್ರಮದ ಸ್ಥಳಕ್ಕೆ ತಲುಪಿದರು ಎಂದು ತಿಳಿದುಬಂದಿದೆ.

'ನಿರ್ಭಯ್ ಬನೋ' ಕಾರ್ಯಕ್ರಮದಲ್ಲಿ ಮಾತನಾಡಿದ ವಾಗ್ಲೆ,ʻದಾಳಿ ಮಾಡಿದ ಎಲ್ಲರನ್ನೂ ಕ್ಷಮಿಸುತ್ತೇನೆ. ನನ್ನ ಮೇಲೆ ಆರು ಬಾರಿ ದಾಳಿ ಮಾಡಲಾಗಿದೆ ಮತ್ತು ಇದು ಏಳನೇ ಬಾರಿʼ ಎಂದು ಹೇಳಿದರು. ಈಮೊದಲು ಆಡಳಿತಾರೂಢ ಬಿಜೆಪಿ-ಶಿವಸೇನೆ ಮತ್ತು ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ ಕಾರ್ಯಕರ್ತರು ರಾಷ್ಟ್ರ ಸೇವಾ ದಳದ ಆವರಣದ ಹೊರಗೆ ಘರ್ಷಣೆಯಲ್ಲಿ ತೊಡಗಿದ್ದರು.

ಪ್ರಧಾನಿ ಮತ್ತು ಅಡ್ವಾಣಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ವಾಗ್ಲೆ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಜೆಪಿಯ ಹಿರಿಯ ನಾಯಕ ಸುನೀಲ್ ದಿಯೋಧರ್ ಅವರು ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು), 500 (ಮಾನನಷ್ಟ) ಮತ್ತು 505 (ಸಾರ್ವಜನಿಕ ಗಲಭೆಗೆ ಕಾರಣವಾಗುವ ಹೇಳಿಕೆ) ರಡಿ ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆʼ ಎಂದು ಅಧಿಕಾರಿ ಹೇಳಿದರು.

ಅಡ್ವಾಣಿ ಅವರಿಗೆ ಭಾರತರತ್ನ ನೀಡಿದ್ದನ್ನು ಖಂಡಿಸಿ, ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ ನಲ್ಲಿ ಟೀಕೆ ಮಾಡಿದ್ದರು. ಪುಣೆ ಬಿಜೆಪಿ 'ನಿರ್ಭಯ್ ಬನೋ' ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವಂತೆ ಪೊಲೀಸರಿಗೆ ಮನವಿ ಮಾಡಿತ್ತು.

Read More
Next Story