Savarkar defamation case | ರಾಹುಲ್ ಗಾಂಧಿಗೆ ಪುಣೆ ಕೋರ್ಟ್ ಸಮನ್ಸ್
x

Savarkar defamation case | ರಾಹುಲ್ ಗಾಂಧಿಗೆ ಪುಣೆ ಕೋರ್ಟ್ ಸಮನ್ಸ್

ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ರಾಹುಲ್‌ ಗಾಂಧಿ ವಿರುದ್ಧ ಪುಣೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.


ಪುಣೆ: ಹಿಂದುತ್ವ ಸಿದ್ಧಾಂತದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ ಎಂದು ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮ ಗ ಸಲ್ಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ. ಅಕ್ಟೋಬರ್ 23 ರಂದು ಹಾಜರಾಗಲು ಹೇಳಿದೆ.

ಕಳೆದ ವರ್ಷ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ರಾಹುಲ್‌ ವಿರುದ್ಧ ಪುಣೆಯ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಎಫ್‌ಎಂಎಫ್‌ಸಿ) ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಕಳೆದ ತಿಂಗಳು ಪ್ರಕರಣವನ್ನು ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

ನ್ಯಾಯಾಧೀಶ ಅಮೋಲ್ ಶಿಂಧೆ ಅವರು ಸಮನ್ಸ್ ಜಾರಿಗೊಳಿಸಿದ್ದು, ಉತ್ತರ ನೀಡಲು ರಾಹುಲ್ ಅವರ ಹಾಜರಿ ಅಗತ್ಯ ಎಂದು ಸಾತ್ಯಕಿ ಸಾವರ್ಕರ್ ಅವರನ್ನು ಪ್ರತಿನಿಧಿಸುವ ವಕೀಲ ಸಂಗ್ರಾಮ್ ಕೊಲ್ಹಟ್ಕರ್ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 500 (ಮಾನನಷ್ಟ) ಅಡಿಯಲ್ಲಿ ಶಿಕ್ಷಾರ್ಹ ಆರೋಪವಾಗಿದೆ.

ಮಾರ್ಚ್ 2023ರಲ್ಲಿ ಲಂಡನ್‌ನಲ್ಲಿ ಮಾಡಿದ ಭಾಷಣದಲ್ಲಿ ʻವಿ.ಡಿ. ಸಾವರ್ಕರ್ ಅವರು ತಾವು ಹಾಗೂ ಐದರಿಂದ ಆರು ಗೆಳೆಯರು ಮುಸ್ಲಿಂ ವ್ಯಕ್ತಿಯೊಬ್ಬರನ್ನು ಥಳಿಸಿದ್ದೆವು. ಅದರಿಂದ ಸಂತೋಷವಾಯಿತು ಎಂದು ಪುಸ್ತಕವೊಂದರಲ್ಲಿ ಬರೆದಿದ್ದಾರೆʼ ಎಂದು ರಾಹುಲ್‌ ಹೇಳಿದ್ದರು. ಆದರೆ, ಅಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ಸಾವರ್ಕರ್‌ ಇದನ್ನು ಬರೆದಿಲ್ಲ ಎಂದು ಸಾತ್ಯಕಿ ಹೇಳಿದ್ದರು. ರಾಹುಲ್‌ ಅವರ ಆರೋಪ ʻಕಾಲ್ಪನಿಕ, ಸುಳ್ಳು ಮತ್ತು ದುರುದ್ದೇಶಪೂರಿತʼ ಎಂದು ದೂರಿದ್ದರು.

ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ವಿಶ್ರಂಬಾಗ್ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದು, ದೂರಿನಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದೆ ಎಂದು ತಿಳಿಸಿದ್ದಾರೆ.

Read More
Next Story