ಪೂಜಾ ಖೇಡ್ಕರ್ ತರಬೇತಿ ಅಕಾಡೆಮಿಗೆ ಗೈರು
ಮಹಾರಾಷ್ಟ್ರದ ಪುಣೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿ ಸಮಯದಲ್ಲಿ ನಿಗದಿತವಲ್ಲದ ಸವಲತ್ತುಗಳು ಮತ್ತು ಸೌಲಭ್ಯಗಳಿಗೆ ಬೇಡಿಕೆಯಿಡುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಮುಸ್ಸೂರಿಯ ನಾಗರಿಕ ಸೇವಾ ತರಬೇತಿ ಸಂಸ್ಥೆ ವಾಪಸ್ ಕರೆಸಿಕೊಂಡ ವಿವಾದಾತ್ಮಕ ಅಧಿಕಾರಿ ಪೂಜಾ ಖೇಡ್ಕರ್(32) ಅವರು ಮಂಗಳವಾರ (ಜುಲೈ 23) ಅಕಾಡೆಮಿಗೆ ಹಾಜರಾಗಿಲ್ಲ ಎಂದು ವರದಿಯಾಗಿದೆ. ಅವರು ಗೈರು ಹಾಜರಿಗೆ ವೈಯಕ್ತಿಕ ಕಾರಣ ನೀಡಿದ್ದಾರೆ.
ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಮುಸ್ಸೂರಿಯ ನಾಗರಿಕ ಸೇವಾ ತರಬೇತಿ ಸಂಸ್ಥೆ ವಾಪಸ್ ಕರೆಸಿಕೊಂಡಿತ್ತು. ಐಎಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಉತ್ತರಾಖಂಡ್‌ನ ಮುಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (ಎಲ್‌ಬಿಎಸ್‌ಎನ್‌ಎಎ), ಜುಲೈ 16 ರಂದು ಪೂಜಾ ಅವರ ತರಬೇತಿ ಅವಧಿಯನ್ನು ತಡೆಹಿಡಿದಿದ್ದು, ಜುಲೈ 23 ರಂದು ವರದಿ ಮಾಡಿಕೊಳ್ಳುವಂತೆ ಸೂಚಿಸಿತ್ತು.
ಖೇಡ್ಕರ್ ವಿರುದ್ಧ ಆರೋಪ: ಮಹಾರಾಷ್ಟ್ರದ ಪುಣೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ, ನಿಗದಿಪಡಿಸದ ಸವಲತ್ತುಗಳು ಮತ್ತು ಸೌಲಭ್ಯಗಳಿಗೆ ಬೇಡಿಕೆಯಿಟ್ಟಿದ್ದರು ಎಂದು ದೂರಲಾಗಿತ್ತು. ಎಲ್ಲರನ್ನು ಬೆದರಿಸುತ್ತಾರೆ, ಖಾಸಗಿ ಆಡಿ (ಐಷಾರಾಮಿ ಸೆಡಾನ್) ಕಾರಿನ ಮೇಲೆ ಕೆಂಪು ನೀಲಿ ದೀಪ ಅಳವಡಿಸಿಕೊಂಡಿದ್ದು, ಅದರ ಮೇಲೆ 'ಮಹಾರಾಷ್ಟ್ರ ಸರ್ಕಾರ' ಎಂದು ಬರೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆನಂತರ ಅವರನ್ನು ಪುಣೆಯಿಂದ ವಾಶಿಮ್‌ಗೆ ವರ್ಗಾಯಿಸಲಾಯಿತು.
ಆಯ್ಕೆಯಲ್ಲಿ 'ಅಕ್ರಮ': ಯುಪಿಎಸ್‌ಸಿ ಯಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ)ಗಳ ಕೆನೆ ಪದರಕ್ಕೆ ಒಳಪಡದ ಕೋಟಾ ಪಡೆದುಕೊಳ್ಳಲು, ತಮ್ಮ ಪೋಷಕರು ಬೇರ್ಪಟ್ಟಿದ್ದಾರೆ ಮತ್ತು ತಾವು ತಾಯಿಯೊಂದಿಗೆ ವಾಸಿಸುತ್ತಿದ್ದಾರೆ ಎಂದು ಸುಳ್ಳು ಹೇಳಿದ್ದರು. ನಿಯಮಗಳ ಪ್ರಕಾರ, ಪೋಷಕರ ಆದಾಯ ವಾರ್ಷಿಕ 8 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವವರು ಮಾತ್ರ ಕೆನೆ ಪದರವಲ್ಲದ ಒಬಿಸಿ ವರ್ಗಕ್ಕೆ ಸೇರುತ್ತಾರೆ.
ಪೂಜಾ ಅವರ ತಾಯಿ ಮನೋರಮಾ ಅವರು 2023 ರಲ್ಲಿ ಭೂ ವಿವಾದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಕ್ಕಾಗಿ ಜೈಲಿನಲ್ಲಿದ್ದಾರೆ. ಪೂಜಾ ಆಕೆಯ ತಂದೆ ನಿವೃತ್ತ ಸರ್ಕಾರಿ ಅಧಿಕಾರಿ ದಿಲೀಪ್ ಕೂಡ ಆರೋಪಿಯಾಗಿದ್ದು, ಜುಲೈ 25 ರವರೆಗೆ ಪುಣೆಯ ನ್ಯಾಯಾಲಯದಿಂದ ಮಧ್ಯಂತರ ರಕ್ಷಣೆ ಪಡೆದಿದ್ದಾರೆ.