
ಪ್ರಿಯಾಂಕಾ ಗಾಂಧಿ ಪುತ್ರ ರೇಹಾನ್ ವಾದ್ರಾ-ಅವಿವಾ ಬೇಗ್ ನಿಶ್ಚಿತಾರ್ಥ-ಫೋಟೋಸ್ ಇಲ್ಲಿವೆ
ರಣಥಂಬೋರ್‌ನಲ್ಲಿ ರೇಹಾನ್ ವಾದ್ರಾ ಮತ್ತು ಅವಿವಾ ಬೇಗ್ ನಿಶ್ಚಿತಾರ್ಥ ಸರಳವಾಗಿ ನೆರವೇರಿದೆ. 7 ವರ್ಷಗಳ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಲು ಈ ಜೋಡಿ ಸಿದ್ಧವಾಗಿದೆ.
ಗಾಂಧಿ ಕುಟುಂಬದ ಕುಡಿ, ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ, ತಮ್ಮ ದೀರ್ಘಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಜಸ್ಥಾನದ ರಣಥಂಬೋರ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಉಂಗುರ ಬದಲಿಸಿಕೊಂಡಿದೆ.
ಸರಳ ಹಾಗೂ ಸುಂದರ ನಿಶ್ಚಿತಾರ್ಥ
ರಣಥಂಬೋರ್‌ನಲ್ಲಿ ನಡೆದ ಈ ಆತ್ಮೀಯ ಸಮಾರಂಭದಲ್ಲಿ ಕೇವಲ ಕುಟುಂಬದ ಆಪ್ತ ಸದಸ್ಯರು ಮಾತ್ರ ಭಾಗವಹಿಸಿದ್ದರು. ನಿಶ್ಚಿತಾರ್ಥದ ಫೋಟೋಗಳಲ್ಲಿ ರೈಹಾನ್ ಕಡು ಬಣ್ಣದ ಶೇರ್ವಾನಿ ಧರಿಸಿದ್ದರೆ, ಅವಿವಾ ಸುಂದರವಾದ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಇವರಿಬ್ಬರು ಕಳೆದ ಏಳು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ಕಳೆದ ವಾರವಷ್ಟೇ ರೈಹಾನ್ ಅವರು ಅವಿವಾ ಅವರಿಗೆ ಮದುವೆ ಪ್ರಸ್ತಾಪ ಮಾಡಿದ್ದರು.
ಯಾರು ಈ ಅವಿವಾ ಬೇಗ್?
ಅವಿವಾ ಬೇಗ್ ದೆಹಲಿ ಮೂಲದ ಕುಟುಂಬದವರು. ಇವರ ತಂದೆ ಇಮ್ರಾನ್ ಬೇಗ್ ಉದ್ಯಮಿಯಾಗಿದ್ದರೆ, ತಾಯಿ ನಂದಿತಾ ಬೇಗ್ ಪ್ರಖ್ಯಾತ ಇಂಟೀರಿಯರ್ ಡಿಸೈನರ್. ನಂದಿತಾ ಅವರು ಪ್ರಿಯಾಂಕಾ ಗಾಂಧಿ ಅವರ ಆಪ್ತ ಗೆಳತಿಯಾಗಿದ್ದು, ಕಾಂಗ್ರೆಸ್ ಪ್ರಧಾನ ಕಚೇರಿಯಾದ 'ಇಂದಿರಾ ಭವನ'ದ ಒಳಾಂಗಣ ವಿನ್ಯಾಸವನ್ನೂ ಮಾಡಿದ್ದಾರೆ. ಅವಿವಾ ಅವರು ಒಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ಅಭ್ಯಾಸ ಮಾಡಿದ್ದು, ಪ್ರಸ್ತುತ ಇಂಟೀರಿಯರ್ ಡಿಸೈನರ್ ಮತ್ತು ಫೋಟೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ.
ರೈಹಾನ್ ವಾದ್ರಾ ಅವರ ಕಿರು ಪರಿಚಯ
25 ವರ್ಷದ ರೈಹಾನ್ ವಾದ್ರಾ ತಮ್ಮ ಅಜ್ಜ ರಾಜೀವ್ ಗಾಂಧಿ ಮತ್ತು ಸೋದರಮಾವ ರಾಹುಲ್ ಗಾಂಧಿ ಓದಿದ ಡೆಹ್ರಾಡೂನ್‌ನ ಪ್ರತಿಷ್ಠಿತ 'ದಿ ಡೂನ್ ಸ್ಕೂಲ್'ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ನಂತರ ಲಂಡನ್‌ನ ಸೋವಾಸ್ (SOAS) ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪೂರೈಸಿದ್ದಾರೆ. ವೃತ್ತಿಯಲ್ಲಿ ಅವರು ದೃಶ್ಯ ಕಲಾವಿದ (Visual Artist) ಮತ್ತು ವನ್ಯಜೀವಿ ಛಾಯಾಗ್ರಾಹಕರಾಗಿದ್ದಾರೆ. ಇವರ ಛಾಯಾಚಿತ್ರಗಳು ಮುಂಬೈನ ಪ್ರತಿಷ್ಠಿತ ಆರ್ಟ್ ಗ್ಯಾಲರಿಗಳಲ್ಲಿ ಪ್ರದರ್ಶನಗೊಂಡಿವೆ.

