
Uttarakhand | ಕಂದಕಕ್ಕೆ ಉರುಳಿಬಿದ್ದ ಖಾಸಗಿ ಬಸ್; 36 ಸಾವು, 3 ಮಂದಿಗೆ ಗಾಯ
46 ಆಸನಗಳ ಬಸ್ ಅಂದಾಜು 200 ಅಡಿ ಆಳದ ಕಮರಿಗೆ ಬಿದ್ದಿದೆ. ಬಸ್ಸಿನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಸೋಮವಾರ (ನವೆಂಬರ್ 4) ಖಾಸಗಿ ಬಸ್ ಕಮರಿಗೆ ಉರುಳಿ ಬಿದ್ದ ಪರಿಣಾಮ ೩೬ ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗರ್ವಾಲ್ ಮೋಟರ್ ಓನರ್ಸ್ ಯೂನಿಯನ್‌ಗೆ ಸೇರಿದ ಗರ್ವಾಲ್ ಮೋಟರ್ಸ್ ಬಸ್ ಗರ್ವಾಲ್‌ನಿಂದ ಕುಮಾನ್‌ಗೆ ಸಾಗುತ್ತಿತ್ತು, ಅಲ್ಮೋರಾದ ಮಾರ್ಚುಲಾ ಬಳಿ ಬಂದಾಗ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಜಿಲ್ಲಾಧಿಕಾರಿ ಅಲೋಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
46 ಆಸನಗಳ ಬಸ್ ಅಂದಾಜು 200 ಅಡಿ ಆಳದ ಕಮರಿಗೆ ಬಿದ್ದಿದೆ. ಬಸ್ಸಿನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಸ್ಥಳಕ್ಕೆ ಎಸ್‌ಡಿಆರ್‌ಎಫ್ ಹಾಗೂ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಬಸ್ ಅಪಘಾತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಮೋರಾ ಜಿಲ್ಲೆಯ ಮಾರ್ಚುಲಾದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಪ್ರಯಾಣಿಕರ ಸಾವಿನ ಸುದ್ದಿ ದುಃಖ ತರಿಸಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತವಾಗಿ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ಎಕ್ಸ್‌ನಲ್ಲಿ ಹೇಳಿಕೆ ಪ್ರಕಟಿಸಿದ್ದಾರೆ.
ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿವೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಅಗತ್ಯವಿದ್ದಲ್ಲಿ ಏರ್ ಲಿಫ್ಟ್ ಮಾಡುವಂತೆಯೂ ಸೂಚಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.