ಆಂಧ್ರಪ್ರದೇಶದಲ್ಲಿ ಖಾಸಗಿ ಬಸ್ ದುರಂತ; 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನ
x

ಆಂಧ್ರಪ್ರದೇಶದಲ್ಲಿ ಖಾಸಗಿ ಬಸ್ ದುರಂತ; 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನ

ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ದುರ್ಘಟನೆ ನಡೆದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಿನ್ನ ಟೆಕೂರು ಗ್ರಾಮದಲ್ಲಿ ಬೈಕ್‌ಗೆ ಡಿಕ್ಕಿಯಾಗಿ ಈ ಘಟನೆ ನಡೆದಿದೆ.


Click the Play button to hear this message in audio format

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಶುಕ್ರವಾರ (ಅ. 24) ಮುಂಜಾನೆ ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 20 ಜನರು ಸಜೀವ ದಹನವಾಗಿರುವ ಘಟನೆ ನಡೆದಿದೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಿನ್ನ ಟೆಕೂರು ಗ್ರಾಮದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ. ಖಾಸಗಿ ಎಸಿ ಬಸ್‌ನಲ್ಲಿ ಇಬ್ಬರು ಚಾಲಕರು ಸೇರಿದಂತೆ 42 ಮಂದಿ ಪ್ರಯಾಣಿಕರಿದ್ದರು.

" ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಈ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಬೆಂಕಿಯ ಕಿಡಿ ಸೋಕಿ ಅವಘಡಕ್ಕೆ ಕಾರಣವಾಗಿರಬಹುದು. 15 ಜನರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ಹೇಳಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ದುರಂತದ ಕುರಿತು ಸಮಗ್ರ ತನಿಖೆಗೆ ಸರ್ಕಾರ ಆದೇಶಿಸಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ.

"ಕರ್ನೂಲ್ ಜಿಲ್ಲೆಯ ಚಿನ್ನಾ ಟೇಕೂರ್ ಗ್ರಾಮದ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಅಪಘಾತದ ಬಗ್ಗೆ ತಿಳಿದು ನನಗೆ ಆಘಾತವಾಗಿದೆ. ತಮ್ಮವರನ್ನು ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡವರು ಮತ್ತು ಸಂತ್ರಸ್ಥರ ಕುಟುಂಬಗಳಿಗೆ ಸರ್ಕಾರ ಸಾಧ್ಯವಿರುವ ಎಲ್ಲ ಬೆಂಬಲ ನೀಡಲಿದೆ" ಎಂದು ನಾಯ್ಡು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

ಅ. 14 ರಂದು ರಾಜಸ್ತಾನದ ಜೈಸಲ್ಮೇರ್ - ಜೋಧ್‌ಪುರ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು 22 ಪ್ರಯಾಣಿಕರು ಸಜೀವ ದಹನವಾಗಿದ್ದರು. ಹವಾನಿಯಂತ್ರಿತ (ಎಸಿ) ಬಸ್ ನಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿಕೊಂಡಿತ್ತು.

Live Updates

  • 24 Oct 2025 9:29 AM IST

    ಕರ್ನೂಲ್ ಬಸ್ ದುರಂತ: ಸಂತ್ರಸ್ತರ ಕುಟುಂಬಗಳಿಗೆ ನೆರವು; ನಿಯಂತ್ರಣ ಕೊಠಡಿಗಳ ಸ್ಥಾಪನೆ

    ಕರ್ನೂಲು ಜಿಲ್ಲೆಯ ಕಲ್ಲೂರು ಮಂಡಲದ ಚಿನ್ನಟೇಕೂರು ಬಳಿ ಸಂಭವಿಸಿದ ದುರಂತ ಖಾಸಗಿ ಬಸ್ ಬೆಂಕಿಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಸಹಾಯ ಮಾಡಲು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.

    ಸಹಾಯವಾಣಿ ಸಂಖ್ಯೆಗಳು:

    ಕಲೆಕ್ಟರೇಟ್ ನಿಯಂತ್ರಣ ಕೊಠಡಿ: 08518-277305

    ಸರ್ಕಾರಿ ಜನರಲ್ ಆಸ್ಪತ್ರೆ (ಕರ್ನೂಲ್): 9121101059

    ಸ್ಥಳದಲ್ಲೇ ನಿಯಂತ್ರಣ ಕೊಠಡಿ: 9121101061

    ಕರ್ನೂಲ್ ಪೊಲೀಸ್ ನಿಯಂತ್ರಣ ಕೊಠಡಿ: 9121101075

    ಜಿಜಿಹೆಚ್ ಸಹಾಯ ಕೇಂದ್ರಗಳು: 9494609814, 9052951010

    ಮಾಹಿತಿ ಮತ್ತು ಸಹಾಯಕ್ಕಾಗಿ ಸಂತ್ರಸ್ತರ ಕುಟುಂಬಗಳು ಮೇಲಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಕರ್ನೂಲು ಜಿಲ್ಲಾಧಿಕಾರಿ ಡಾ. ಎ. ಸಿರಿ ತಿಳಿಸಿದ್ದಾರೆ.

  • ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ಘೋಷಣೆ
    24 Oct 2025 9:13 AM IST

    ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ಘೋಷಣೆ

    ಹೈದರಾಬಾದ್‌ ಸಮೀಪ ಸಂಭವಿಸಿದ ಖಾಸಗಿ ಬಸ್‌ ದುರಂತಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಕಾರ್ಯಾಲಯ ಆಘಾತ ವ್ತಕ್ತಪಡಿಸಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ, ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದೆ. ಮೃತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡುವುದಾಗಿ ಘೋಷಿಸಿದೆ. 


  • 24 Oct 2025 9:12 AM IST

    ಕಂಟ್ರೋಲ್ ರೂಂ ಮಾಹಿತಿ


    ಈ ದುರ್ಘಟನೆಗೆ ಸಂಬಂಧಿಸಿ  ಪ್ರಯಾಣಿಕರು ಮತ್ತವರ ಸಂಬಂಧಿಕರ ಮಾಹಿತಿಗಾಗಿ ನಿಯಂತ್ರಣ ಕೊಠಡಿಗಳನ್ನು ರಚಿಸಾಗಿದೆ.

    ಡಿಸಿ ಕಚೇರಿ ನಿಯಂತ್ರಣ ಕೊಠಡಿ ಸಂಖ್ಯೆ 08518-277305

    ಕರ್ನೂಲ್ ಆಸ್ಪತ್ರೆ ನಿಯಂತ್ರಣ ಕೊಠಡಿ ಸಂಖ್ಯೆ - 9121101059

    ಘಟನಾ ಸ್ಥಳದ ನಿಯಂತ್ರಣ ಕೊಠಡಿ ಸಂಖ್ಯೆ 9121101061

    ಕರ್ನೂಲ್ ಪೊಲೀಸ್ ಕಚೇರಿ ನಿಯಂತ್ರಣ ಕೊಠಡಿ ಸಂಖ್ಯೆ 9121101075

    ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆ ಸಹಾಯವಾಣಿ ಸಂಖ್ಯೆ 9494609814, 9052951010


  • 24 Oct 2025 9:08 AM IST

    ಘಟನೆ ಬಳಿಕ ಬಸ್‌ ಚಾಲಕ ನಾಪತ್ತೆ

    ಬೈಕಿ ಡಿಕ್ಕಿ ಹೊಡೆದ ನಂತರ ಬೆಂಕಿ ಕಾಣಿಸಿಕೊಂಡು  ದುರಂತ ಸಂಭವಿಸಿದೆ. ಬಸ್ ಪ್ರಯಾಣಿಕರಲ್ಲಿ 39 ವಯಸ್ಕರು ಮತ್ತು ಇಬ್ಬರು ಮಕ್ಕಳಿದ್ದರು.

    ಆವರಲ್ಲಿ 19 ಜನರನ್ನು ಪೊಲೀಸರು ಗುರುತಿಸಿದ್ದಾರೆ. ಅವರೆಲ್ಲರೂ   ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ದುರಂತಕ್ಕೀಡಾದ  ಬಸ್ಸಿನಿಂದ 11 ಶವಗಳನ್ನು ಹೊರತೆಗೆಯಲಾಗಿದೆ. ಬಸ್ಸಿನ ಮುಖ್ಯ ಚಾಲಕ ಕಾಣೆಯಾಗಿದ್ದಾನೆ. ಮತ್ತೊಬ್ಬ ಚಾಲಕನನ್ನು ಬಂಧಿಸಲಾಗಿದೆ ಎಂದು ಡಿಐಜಿ ಕೋಯ ಪ್ರವೀಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Read More
Next Story