
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ
National Herald Case| ಸೋನಿಯಾ ಗಾಂಧಿ, ರಾಹುಲ್ ವಿರುದ್ಧ ಪುರಾವೆ ಒದಗಿಸಲು ಸಿದ್ಧ- ಇಡಿ
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಪಟ್ಟಿಯ ಪ್ರತಿಯನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ಒದಗಿಸುವಂತೆ ನ್ಯಾಯಾಧೀಶರು ಇಡಿಗೆ ನಿರ್ದೇಶನ ನೀಡಿದ್ದಾರೆ. ರಾಹುಲ್ ಹಾಗೂ ಸೋನಿಯಾ ವಿರುದ್ಧ ಪುರಾವೆ ಇದೆ, ನ್ಯಾಯಾಲಯಕ್ಕೆ ಒದಗಿಸಲಾಗುವುದು ಎಂದು ಇಡಿ ಹೇಳಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ದಾಖಲಿಸಿಕೊಂಡಿರುವ 'ಅಕ್ರಮ ಹಣ ವರ್ಗಾವಣೆ' ಪ್ರಕರಣದಲ್ಲಿ ಆರೋಪ ಪುಷ್ಠೀಕರಿಸುವ ದಾಖಲೆಗಳಿವೆ ಎಂದು ಜಾರಿ ನಿರ್ದೇಶನಾಲಯ (ED) ಬುಧವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.
ಪ್ರಕರಣದ ವಿಚಾರಣೆ ವೇಳೆ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗಾನೆ ಪೀಠದ ಎದುರು ವಾದ ಮಂಡಿಸಿದ ಇಡಿ ಪರ ವಕೀಲರು, ಪ್ರಕರಣದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪಗಳಿಗೆ ಪುರಾವೆಗಳಿವೆ. ಪ್ರಕರಣದ ಕುರಿತು ಇನ್ನಷ್ಟು ತನಿಖೆ ಅಗತ್ಯವಿದೆ ಎಂದು ಹೇಳಿದರು.
ನ್ಯಾಯಾಲಯಕ್ಕೆ ಇಡಿ ಸಲ್ಲಿಸಿರುವ ಆರೋಪಪಟ್ಟಿಯ ಪ್ರತಿಯನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ಒದಗಿಸುವಂತೆ ನ್ಯಾಯಾಧೀಶರು ನಿರ್ದೇಶಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಡಿ ಪರ ವಕೀಲರು, ಈ ಪ್ರಕರಣದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ನ್ಯಾಯಾಲಯಕ್ಕೆ ಪುರಾವೆಗಳನ್ನು ಸಲ್ಲಿಸಿದ ಬಳಿಕ ಆರೋಪಪಟ್ಟಿಯ ಪ್ರತಿ ನೀಡಲಾಗುವು ಎಂದು ತಿಳಿಸಿದರು.
ಏನಿದು ಪ್ರಕರಣ?
ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಅವರು ತಲಾ ಶೇ 38 ರಷ್ಟು ಷೇರು ಹೊಂದಿದ್ದರು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್(ಎಜೆಎಲ್) ಸಾಲವನ್ನು ಕಾಂಗ್ರೆಸ್ ಪಕ್ಷದ ಹಣದಿಂದ ತೀರಿಸಿ, ಖರೀದಿಗಾಗಿ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್(ವೈಐಎಲ್) ಸ್ಥಾಪಿಸಿದ್ದರು ಎಂದು 2012 ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಆರೋಪಿಸಿ ದೂರು ದಾಖಲಿಸಿದ್ದರು.
ಚಾರ್ಜ್ ಶೀಟ್ ವಿವರ
ಚಾರ್ಜ್ ಶೀಟ್‌ನಲ್ಲಿ ಇ.ಡಿ.ಯು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡಾ, ಸುಮನ್ ದುಬೆ, ದಿವಂಗತ ಮೋತಿಲಾಲ್ ವೋರಾ ಹಾಗೂ ದಿವಂಗತ ಆಸ್ಕರ್ ಫರ್ನಾಂಡಿಸ್ ಸೇರಿ ಹಲವರು ವೈಐಎಲ್‌ನಿಂದ ಎಜಿಎಲ್ ಆಸ್ತಿಗಳನ್ನು ಕಾನೂನು ಬಾಹಿರವಾಗಿ ಸ್ವಾಧೀನಪಡಿಸಿಕೊಳ್ಳಲು ಸಂಚು ರೂಪಿಸಿದ್ದರು ಎಂದು ಆರೋಪಿಸಿದೆ. ಎಜೆಎಂಎಲ್‌ನಿಂದ 988 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿದ್ದು, ಪಿಎಂಎಲ್‌ಎ 2002ರ ಸೆಕ್ಷನ್ 3,44,45, ಮತ್ತು 70 ರ ಅಡಿ ಅಪರಾಧ ಎಂದು ಚಾರ್ಜ್ ಶೀಟ್‌ನಲ್ಲಿ ದೂರಿದೆ.