ಮಹಿಳೆಯರ ವಿರುದ್ಧದ ಅಪರಾಧ ತಡೆಗೆ ಕಾರ್ಯಜಾಲ: ರಾಷ್ಟ್ರಪತಿ
x

ಮಹಿಳೆಯರ ವಿರುದ್ಧದ ಅಪರಾಧ ತಡೆಗೆ ಕಾರ್ಯಜಾಲ: ರಾಷ್ಟ್ರಪತಿ


ಹೈದರಾಬಾದ್; ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮಹಿಳಾ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳ ಜಾಲವನ್ನು ಸ್ಥಾಪಿಸಲು ನಲ್ಸಾರ್‌ ಕಾನೂನು ವಿಶ್ವವಿದ್ಯಾನಿಲಯ ಹಾಗೂ ಅದರ ಹಳೆಯ ವಿದ್ಯಾರ್ಥಿಗಳು ನೆರವಾಗಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಹೇಳಿದರು.

ನಲ್ಸಾರ್ ಕಾನೂನು ವಿಶ್ವವಿದ್ಯಾನಿಲಯದ 21ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು, ʻಈ ಕಾರ್ಯಜಾಲವು ಮಹಿಳೆಯರ ಮೇಲಿನ ದೌರ್ಜನ್ಯ ಗಳನ್ನು ತಡೆಗಟ್ಟಲು ಮತ್ತು ಅಂತಹ ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸಲು ಸಂಘಟಿತ ಪ್ರಯತ್ನ ಮಾಡಬೇಕಿದೆ,ʼ ಎಂದು ಹೇಳಿದರು.

ʻಶ್ರೀಮಂತ ಮಾತ್ರವಲ್ಲದೆ ಬಡವನಿಗೂ ನ್ಯಾಯ ಸಿಗುವಂತೆ ಆಗಬೇಕು. ನಲ್ಸಾರ್‌ ನಲ್ಲಿ ಪದವಿ ಪಡೆದವರು ತಮ್ಮ ಶಿಕ್ಷಣವನ್ನು ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ಪರಿಣಾಮಕಾರಿ ಸಾಧನವಾಗಿ ಬಳಸಿಕೊಳ್ಳುತ್ತಾರೆ,ʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ಹಕ್ಕುಗಳಲ್ಲಿ ಪ್ರತಿಪಾದಿಸಿದ ಸಮಾನತೆಯ ಆದರ್ಶವು ನ್ಯಾಯದ ವಿತರಣೆಗೆ ಸಂಬಂಧಿಸಿದಂತೆ ರಾಜ್ಯ ನೀತಿಯ ನಿರ್ದೇಶನ ತತ್ವಗಳಲ್ಲಿ ಕೂಡ ಕಂಡುಬರುತ್ತದೆ. ಆರ್ಥಿಕ ಅಥವಾ ಇತರ ಅಸಾಮರ್ಥ್ಯಗಳಿಂದ ಯಾವುದೇ ನಾಗರಿಕರಿಗೆ ನ್ಯಾಯದ ಅವಕಾಶ ನಿರಾಕರಣೆ ಆಗಬಾರದು ಎಂದು ಹೇಳಿದರು.

ಗ್ರೀಕ್ ಇತಿಹಾಸಕಾರ ಮೆಗಾಸ್ತನೀಸ್‌, ಭಾರತೀಯರನ್ನು ಕಾನೂನು ಪಾಲಿಸುವ ಜನ ಎಂದು ಬಣ್ಣಿಸಿದ್ದಾರೆ. ಚಾಣಕ್ಯನ ಅರ್ಥ ಶಾಸ್ತ್ರವು ನ್ಯಾಯಕ್ಕೆ ಜವಾಬ್ದಾರರಾಗಿರುವ ಅಧಿಕಾರಿಗಳ ಮಾನದಂಡಗಳನ್ನು ಪಟ್ಟಿಮಾಡುತ್ತದೆ. ಪದವೀದರರು ತಂತ್ರಜ್ಞಾನವನ್ನು ವೃತ್ತಿಪರ ಪ್ರಗತಿಗೆ ಸಾಧನವಾಗಿ ಮತ್ತು ಸಾಮಾಜಿಕ ನ್ಯಾಯದ ಸಾಧನವಾಗಿ ಬಳಸಬೇಕು. ಪ್ರಾಚೀನ ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಸಭೆಯ ಸಮಾರೋಪ ಭಾಷಣದಲ್ಲಿ ಎತ್ತಿ ತೋರಿಸಿದ್ದಾರೆ,ʼ ಎಂದು ಹೇಳಿದರು.

ತೆಲಂಗಾಣ ರಾಜ್ಯಪಾಲ ಜಿಷ್ಣು ದೇವ್ ವರ್ಮಾ, ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿಯವರನ್ನು ರಾಜ್ಯಪಾಲರು, ಸಿಎಂ, ಅವರ ಸಂಪುಟ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ಆತ್ಮೀಯವಾಗಿ ಬರ ಮಾಡಿಕೊಂಡರು.

Read More
Next Story