President Draupadi Murmu escapes helicopter landing site collapse
x

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿದ್ದ ಸೇನಾ ಹೆಲಿಕಾಪ್ಟರ್‌ನ್ನು ಅಧಿಕಾರಿ ಹಾಗೂ ಸಿಬ್ಬಂದಿಗಳು ತಳ್ಳಿದರು.

ಕಾಂಕ್ರಿಟ್‌ನಲ್ಲಿ ಹೂತುಕೊಂಡ ಹೆಲಿಕಾಪ್ಟರ್‌ ಚಕ್ರ, ರಾಷ್ಟ್ರಪತಿ ದ್ರೌಪದಿ ಮುರ್ಮು ಅಪಾಯದಿಂದ ಪಾರು

ಕೇರಳದ ಪತ್ತನಂತಿಟ್ಟದ ಪ್ರಮದಂ ಕ್ರೀಡಾಂಗಣದಲ್ಲಿ ಬುಧವಾರ(ಅ.22) ರಾಷ್ಟ್ರಪತಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಚಕ್ರ ಹೊಸದಾಗಿ ನಿರ್ಮಿಸಿದ್ದ ಕಾಂಕ್ರಿಟ್‌ ಹೆಲಿಪ್ಯಾಡ್‌ನಲ್ಲಿ ಸಿಲುಕಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೊರತೆಗೆದರು.


Click the Play button to hear this message in audio format

ಕೇರಳದ ಶಬರಿಮಲೆಗೆ ತೆರಳುತ್ತಿದ್ದ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್‌ ಹೊಸದಾಗಿ ನಿರ್ಮಿಸಿದ ಕಾಂಕ್ರಿಟ್‌ ಹೆಲಿಪ್ಯಾಡ್‌ನಲ್ಲಿ ಹೂತುಕೊಂಡ ಘಟನೆ ಇಲ್ಲಿನ ರಾಜೀವ್‌ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ.

ರಾಷ್ಟ್ರಪತಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಬುಧವಾರ (ಅ.22) ಬೆಳಿಗ್ಗೆ ಕೇರಳದ ಪತ್ತನಂತಿಟ್ಟದಲ್ಲಿರುವ ಕ್ರೀಡಾಂಗಣದಲ್ಲಿ ಹೂತುಕೊಂಡಿದೆ. ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಹೆಲಿಕಾಪ್ಟರ್‌ ಅನ್ನು ಹೊರತೆಗೆದಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾರಿನ ಮೂಲಕ ಶಬರಿಮಲೆಗೆ ಕರೆದೊಯ್ಯಲಾಯಿತು. ಹೂತುಕೊಂಡಿದ್ದ ಹೆಲಿಕಾಪ್ಟರ್‌ ಅನ್ನು ರಕ್ಷಣಾ ಸಿಬ್ಬಂದಿ ತಳ್ಳುತ್ತಿರುವ ವಿಡಿಯೊ ಎಲ್ಲೆಡೆ ವೈರಲ್‌ ಆಗಿದೆ.

ರಾಷ್ಟ್ರಪತಿ ಮುರ್ಮು ಅವರು ಅ.21 ರಂದು ಕೇರಳದ ತಿರುವನಂತಪುರಂಗೆ ಆಗಮಿಸಿದ್ದರು. ಬುಧವಾರ (ಅ.22) ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಬೇಕಿತ್ತು. ಈ ಮಧ್ಯೆ, ತಿರುವನಂತಪುರದ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ಪ್ರತಿಮೆ ಅನಾವರಣಗೊಳಿಸಲಿದ್ದು, ನಂತರ ವರ್ಕಲಾದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಕೊಟ್ಟಾಯಂ ಜಿಲ್ಲೆಯ ಪಾಲಾದ ಸೇಂಟ್ ಥಾಮಸ್ ಕಾಲೇಜಿನ 75 ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಪತಿಗಳು ಭಾಗವಹಿಸಲಿದ್ದಾರೆ. ಅ. 24 ರಂದು ಎರ್ನಾಕುಲಂನಲ್ಲಿರುವ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದು, ನಂತರ ದೆಹಲಿಗೆ ತೆರಳಲಿದ್ದಾರೆ.

ಭದ್ರತಾ ಲೋಪದ ಪರಿಶೀಲನೆ: ಹೆಲಿಕಾಪ್ಟರ್‌ ಹೂತುಕೊಂಡ ಘಟನೆಯನ್ನು ಭದ್ರತಾ ಲೋಪ ಎಂದು ಪರಿಗಣಿಸಲಾಗಿದೆ. ಇದರಿಂದ ರಾಷ್ಟ್ರಪತಿಯವರ ಅಧಿಕೃತ ಪ್ರವಾಸ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇನ್ನೊಂದೆಡೆ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ರಾಷ್ಟ್ರಪತಿಗಳ ಸ್ವಾಗತಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಡಿಬಿ) ತಿಳಿಸಿದೆ.

ಮುರ್ಮು ಅವರ ವಾಹನದ ಜೊತೆಗೆ ಬೆಂಗಾವಲು ವಾಹನ ಪಡೆ ಹಾಗೂ ಆಂಬ್ಯುಲೆನ್ಸ್​ ಕೂಡ ಇರಲಿದೆ. ಅಯ್ಯಪ್ಪ ಸ್ವಾಮಿ ದೇಗುಲ ಸಾಗುವ ರಸ್ತೆ ಮತ್ತು ಸಾಂಪ್ರದಾಯಿಕ ಚಾರಣ ಮಾರ್ಗದ ಮೂಲಕ ಅವರು ಸನ್ನಿಧಾನಂ ತಲುಪಲಿದ್ದಾರೆ. ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದ್ದು, ಇತ್ತೀಚೆಗೆ ಬೆಂಗಾವಲು ಪಡೆ ಚಲನೆಯ ಪೂರ್ವಾಭ್ಯಾಸ ನಡೆಸಲಾಗಿದೆ ಎಂದು ಟಿಡಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read More
Next Story