ಬದರಿನಾಥ ದೇವಾಲಯ ದರ್ಶನ ಆರಂಭ; ದೇಗುಲಕ್ಕೆ 15 ಟನ್​ ಹೂವುಗಳಿಂದ ಅಲಂಕಾರ
x

ಬದರಿನಾಥ ದೇವಾಲಯ ದರ್ಶನ ಆರಂಭ; ದೇಗುಲಕ್ಕೆ 15 ಟನ್​ ಹೂವುಗಳಿಂದ ಅಲಂಕಾರ

ಬೆಳಿಗ್ಗೆ 6 ಗಂಟೆಗೆ ವೈದಿಕ ಮಂತ್ರಗಳೊಂದಿಗೆ ಬದರಿನಾಥ ದೇವಾಲಯದ ಮುಖ್ಯ ದ್ವಾರವಾದ ಸಿಂಗದ್ವಾರವನ್ನು ತೆರೆಯಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಮುಖ್ಯ ಯಾಜಕ (ರಾವಲ್), ಧರ್ಮಾಧಿಕಾರಿ ಮತ್ತು ವೈದಿಕರು ವಿಶೇಷ ಪೂಜೆ ನೆರವೇರಿಸಿದರು.


ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಪವಿತ್ರ ಬದರಿನಾಥ ದೇವಾಲಯದ ಕಪಾಟಗಳು ಆರು ತಿಂಗಳ ಬಳಿಕ ಭಕ್ತರ ದರ್ಶನಕ್ಕೆ (ಭಾನುವಾರ) ತೆರೆದಿದೆ. ಈ ಮೂಲಕ 2025ರ ಚಾರ್ ಧಾಮ ಯಾತ್ರೆಯು ಆರಂಭಗೊಂಡಿದೆ. ವಿಷ್ಣುವಿಗೆ ಸಮರ್ಪಿತವಾದ ಈ ದೇವಾಲಯವನ್ನು 15 ಟನ್‌ಗಳಷ್ಟು ವಿವಿಧ ಜಾತಿಯ ಹೂವುಗಳಿಂದ ಅಲಂಕರಿಸಲಾಗಿದೆ. ಭಾರತೀಯ ಸೇನೆಯ ಗರ್ವಾಲ್ ರೈಫಲ್ಸ್ ಬ್ಯಾಂಡ್ ನುಡಿಸಿತು.

ಬೆಳಿಗ್ಗೆ 6 ಗಂಟೆಗೆ ವೈದಿಕ ಮಂತ್ರಗಳೊಂದಿಗೆ ಬದರಿನಾಥ ದೇವಾಲಯದ ಮುಖ್ಯ ದ್ವಾರವಾದ ಸಿಂಗದ್ವಾರವನ್ನು ತೆರೆಯಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಮುಖ್ಯ ಯಾಜಕ (ರಾವಲ್), ಧರ್ಮಾಧಿಕಾರಿ ಮತ್ತು ವೈದಿಕರು ವಿಶೇಷ ಪೂಜೆ ನೆರವೇರಿಸಿದರು. ಬದರಿನಾಥ ಧಾಮದ ಮುಖ್ಯ ದೇವಾಲಯದ ಜೊತೆಗೆ, ಗಣೇಶ, ಘಂಟಾಕರ್ಣ, ಆದಿ ಕೇದಾರೇಶ್ವರ, ಆದಿ ಗುರು ಶಂಕರಾಚಾರ್ಯ ದೇವಾಲಯ, ಮತ್ತು ಮಾತಾ ಮೂರ್ತಿ ದೇವಾಲಯಗಳ ಕಪಾಟಗಳನ್ನೂ ಭಕ್ತರಿಗಾಗಿ ತೆರೆಯಲಾಯಿತು.

ದೇವಾಲಯವನ್ನು 150 ಕ್ವಿಂಟಾಲ್ (15 ಟನ್) ಹೂವುಗಳಿಂದ ಅಲಂಕರಿಸಲಾಗಿತ್ತು, ಇದು ದೇವಾಲಯದ ಸೌಂದರ್ಯವನ್ನು ದ್ವಿಗುಣಗೊಳಿಸಿದೆ. ಭಕ್ತರ ಮೇಲೆ ಹೂವಿನ ದಳಗಳನ್ನು ಉದುರಿಸಲಾಯಿತು.

ಈ ಸಂದರ್ಭದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಭಟ್, ಮತ್ತು ತೆಹ್ರಿ ಶಾಸಕ ಕಿಶೋರ್ ಉಪಾಧ್ಯಾಯ ಉಪಸ್ಥಿತರಿದ್ದರು. ಮುಖ್ಯಮಂತ್ರಿ ಧಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸ್ಥಳೀಯರ ಮತ್ತು ಭಕ್ತರೊಂದಿಗೆ ಸಂವಾದ ನಡೆಸಿದರು.

ಚಾರ್ ಧಾಮ ಯಾತ್ರೆಯ ಆರಂಭ

ಬದರಿನಾಥ ದೇವಾಲಯ ತೆರೆಯುವುದರೊಂದಿಗೆ, 2025ರ ಚಾರ್ ಧಾಮ ಯಾತ್ರೆ ಸಂಪೂರ್ಣವಾಗಿ ಆರಂಭಗೊಂಡಿದೆ. ಚಾರ್ ಧಾಮ ಯಾತ್ರೆಯು ಉತ್ತರಾಖಂಡದ ನಾಲ್ಕು ಪವಿತ್ರ ತಾಣಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಮತ್ತು ಬದರಿನಾಥಕ್ಕೆ ಭೇಟಿ ನೀಡುವ ಒಂದು ಪವಿತ್ರ ಯಾತ್ರೆಯಾಗಿದೆ. ಪ್ರತಿ ವರ್ಷ ದೀಪಾವಳಿಯ ನಂತರ ಈ ದೇವಾಲಯಗಳ ಬಾಗಿಲುಗಳನ್ನು ಚಳಿಗಾಲದ ಆರು ತಿಂಗಳಿಗೆ ಮುಚ್ಚಲಾಗುತ್ತದೆ. ಏಪ್ರಿಲ್-ಮೇ ತಿಂಗಳಲ್ಲಿ ಪುನಃ ತೆರೆಯಲಾಗುತ್ತದೆ.

ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ದ್ವಾರಗಳು ಏಪ್ರಿಲ್ 30ರ ಅಕ್ಷಯ ತೃತೀಯದಂದು ತೆರೆಯಲಾಗಿತ್ತು. ಕೇದಾರನಾಥ ದೇವಾಲಯವು ಮೇ 2, 2025ರಂದು ತೆರೆಯಿತು. ಬದರಿನಾಥದ ಕಪಾಟ ತೆರೆಯುವಿಕೆಯೊಂದಿಗೆ, ಚಾರ್ ಧಾಮ ಯಾತ್ರೆಯ ಎಲ್ಲಾ ದೇವಾಲಯಗಳು ಈಗ ಭಕ್ತರಿಗೆ ಲಭ್ಯವಿವೆ. ಈ ಆರು ತಿಂಗಳ ಯಾತ್ರೆಯ ಅವಧಿಯಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಈ ಪವಿತ್ರ ತಾಣಗಳಿಗೆ ಭೇಟಿ ನೀಡುತ್ತಾರೆ.

ದೇವಾಲಯದ ಸಿದ್ಧತೆ ಮತ್ತು ಭದ್ರತಾ ವ್ಯವಸ್ಥೆ

ಬದರಿನಾಥ ಧಾಮಕ್ಕೆ ಭಕ್ತರ ಯಾತ್ರೆ ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆಸಲು ಸ್ಥಳೀಯ ಆಡಳಿತವು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ 1ರಂದು ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದೀಪಮ್ ಸೇಠ್ ಮತ್ತು ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ವಿ. ಮುರುಗೇಶನ್ ಬದರಿನಾಥ ಧಾಮಕ್ಕೆ ಭೇಟಿ ನೀಡಿ, ಭದ್ರತಾ ವ್ಯವಸ್ಥೆ, ಟ್ರಾಫಿಕ್ ನಿರ್ವಹಣೆ, ಸಂವಹನ ವ್ಯವಸ್ಥೆ, ಮತ್ತು ಜನಸಂದಣಿ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿದ್ದಾರೆ.

ಈಗಾಗಲೇ ಋಷಿಕೇಶ ಟ್ರಾನ್ಸಿಟ್ ಕ್ಯಾಂಪ್‌ನಲ್ಲಿ 22 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ, ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು (UTDB) ಆನ್‌ಲೈನ್ ಮತ್ತು ಆಫ್‌ಲೈನ್ ನೋಂದಣಿಯನ್ನು ಒದಗಿಸಿದ್ದು, ಭಕ್ತರು ಚಾರ್ ಧಾಮ ಅಧಿಕೃತ ವೆಬ್‌ಸೈಟ್ ಅಥವಾ ಟೂರಿಸ್ಟ್ ಕೇರ್ ಉತ್ತರಾಖಂಡ ಆಪ್ ಮೂಲಕ ನೋಂದಾಯಿಸಿಕೊಳ್ಳಬಹುದು.

Read More
Next Story